ಎಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಜಾಗೃತಿ

| Published : Sep 02 2025, 01:00 AM IST

ಸಾರಾಂಶ

ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮ, ಸ್ನೇಹಿತರ ಒತ್ತಡಕ್ಕೆ ಮಣಿದು ಕ್ಷಣಿಕ ಸುಖಕ್ಕಾಗಿ ಜೀವನ ಹಾಳುಮಾಡಿಕೊಳ್ಳುವ ರೀತಿ ವರ್ತಿಸಬಾರದು. 2030ರ ವೇಳೆಗೆ ಎಚ್‌ಐವಿ ಮುಕ್ತ ಭಾರತ ನಿರ್ಮಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಕೊಪ್ಪಳ:

ಎಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ವಿವಿಧ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಎ. ಶಶಿಧರ ಹೇಳಿದರು.

ನಗರದ ಹಳೇ ಜಿಲ್ಲಾಸ್ಪತ್ರೆ ಆವರಣದ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಅಧಿಕಾರಿಗಳ ಕಾರ್ಯಾಲಯದಲ್ಲಿ ವಿಶ್ವ ಏಡ್ಸ್ ದಿನದ ಪ್ರಯುಕ್ತ ಜಿಲ್ಲಾ ಮಟ್ಟದ ತೀವ್ರಗೊಂಡ ಐಇಸಿ ಅಭಿಯಾನ ಅಂಗವಾಗಿ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಚ್‌ಐವಿ, ಏಡ್ಸ್ ಕುರಿತು ಜಾಗೃತಿ ಮೂಡಿಸುವುದು, ಹದಿಹರೆಯದಲ್ಲಿ ಗರ್ಭಧಾರಣೆ, ಎಚ್‌ಐವಿ ಸೋಂಕಿಗೆ ಒಳಗಾಗುವುದನ್ನು ತಡೆಯುವ ಹಾಗೂ ಉತ್ತಮ ಆರೋಗ್ಯದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮ, ಸ್ನೇಹಿತರ ಒತ್ತಡಕ್ಕೆ ಮಣಿದು ಕ್ಷಣಿಕ ಸುಖಕ್ಕಾಗಿ ಜೀವನ ಹಾಳುಮಾಡಿಕೊಳ್ಳುವ ರೀತಿ ವರ್ತಿಸಬಾರದು. 2030ರ ವೇಳೆಗೆ ಎಚ್‌ಐವಿ ಮುಕ್ತ ಭಾರತ ನಿರ್ಮಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, 8,9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.

ಕಳೆದ ಬಾರಿ ಜಿಲ್ಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟ ಮತ್ತು ವಿಭಾಗೀಯ (ಅಂತರರಾಜ್ಯ) ಮಟ್ಟದ ವರೆಗೂ ಸ್ಪರ್ಧಿಸಿದ್ದು, ಈ ಬಾರಿ ರಾಷ್ಟ್ರಮಟ್ಟದಲ್ಲಿ ಜಯಶೀಲರಾಗಲಿ ಆಶಿಸಿದರು.

ವಿಜೇತರಿಗೆ ಬಹುಮಾನ:

ರಸಪ್ರಶ್ನೆ ಸ್ಪರ್ಧೆಯಲ್ಲಿ 56 ಪ್ರೌಢಶಾಲೆ ಹಾಗೂ ಪ್ರಥಮ ಪಿಯು ಕಾಲೇಜುಗಳು ಭಾಗವಹಿಸಿದ್ದು, ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕುಷ್ಟಗಿಯ ಕ್ರೈಸ್‌ದ ಕಿಂಗ್ ಶಾಲೆಯ ಶ್ರಾವಣಿ ಮತ್ತು ಶ್ರೇಯಾಗೆ ₹ 6 ಸಾವಿರ, ದ್ವಿತೀಯ ಸ್ಥಾನ ಪಡೆದ ಕೊಪ್ಪಳದ ಗವಿಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನ ಬಸಮ್ಮ ಮತ್ತು ಅವನಿತಾತಗೆ ₹ 5 ಸಾವಿರ ಹಾಗೂ ತೃತೀಯ ಸ್ಥಾನ ಪಡೆದ ಭಾಗ್ಯನಗರದ ಜ್ಞಾನಬಂಧು ಪದವಿ ಪೂರ್ವ ಕಾಲೇಜಿನ ಐಶ್ವರ್ಯ ಮತ್ತು ಸೌಭಾಗ್ಯಗೆ ₹ 4 ಸಾವಿರ ನಗದು ಬಹುಮಾನ ವಿತರಿಸಲಾಯಿತು. ಪ್ರಥಮ ಸ್ಥಾನದಲ್ಲಿ ವಿಜೇತ ವಿದ್ಯಾರ್ಥಿಗಳನ್ನು ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ತಿಳಿಸಿದರು.

ಇನ್‌ವಾಲ್ ಸಂಸ್ಥೆಯ ಹೊನ್ನಕೇರಿ ಮಲ್ಲಪ್ಪ, ನವೀನ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಿಕ್ಷಕರು, ಉಪನ್ಯಾಸಕರು, ಆರೋಗ್ಯ ಇಲಾಖೆಯ ಮಾಲತೇಶ, ದಾನನಗೌಡ, ಚಿದಾನಂದ, ಶಿವಾನಂದ, ಅಮರೇಶ, ರಾಜೀವ, ಕೃಷ್ಣಾ, ಅನಂತ್, ಸಿದ್ರಾಮಪ್ಪ, ಕಾಳಪ್ಪ, ರಾಘವೇಣಿ ಸೇರಿದಂತೆ ಸ್ಥಳೀಯ ಸಂಘ-ಸಂಸ್ಥೆಗಳ ಸಿಬ್ಬಂದಿ ಉಪಸ್ಥಿತರಿದ್ದರು.