ಸಾರಾಂಶ
ಕನ್ನಡಪ್ರಭ ವಾರ್ತೆ ಕನಪುರ
ದಲಿತರ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ನಿಯಂತ್ರಣ ಕಾಯ್ದೆಗೆ ಸಂಬಂಧಿಸಿದ ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರ ನಿಯೋಗದ ಸದಸ್ಯರು ಸಂತ್ರಸ್ತರನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸಿದರು.ತಾಲೂಕಿನ ಮಳಗಾಳು ಗ್ರಾಮದ ಎ.ಕೆ. ಕಾಲೊನಿ ಮತ್ತು ತಾಮಸಂದ್ರ ವೃತ್ತಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ನಿಯಂತ್ರಣ ಕಾಯ್ದೆಗೆ ಸಂಬಂಧಿಸಿದ ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರ ನಿಯೋಗದಿಂದ ಭೇಟಿ ನೀಡಿ ದೌರ್ಜನ್ಯಕ್ಕೊಳಗಾದ ಸಂತ್ರಸ್ತರು ಮತ್ತು ಸ್ಥಳೀಯರನ್ನು ಭೇಟಿ ಮಾಡಿ, ಘಟನೆ ಕುರಿತು ಮಾಹಿತಿ ಸಂಗ್ರಹಿಸಿತು.
ಈ ವೇಳೆ ಮಾತನಾಡಿದ ಸದಸ್ಯರು, ಎ.ಕೆ. ಕಾಲೊನಿಯಲ್ಲಿ ಸವರ್ಣೀಯ ಸಮುದಾಯದ ರೌಡಿಶೀಟರ್ ಹರ್ಷ ಅಲಿಯಾಸ್ ಕೈಮ ನೇತೃತ್ವದ ಗುಂಪು ಜುಲೈ 21ರಂದು ರಾತ್ರಿ 9.30ಕ್ಕೆ ನಡೆಸಿದ ದಾಳಿಯಿಂದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ವೈರಮುಡಿ ಪುತ್ರ ಅನೀಶ್ ಅವರ ಕೈ ತುಂಡಾಗಿದೆ. ಆತನ ನೆರವಿಗೆ ಬಂದ ಅವರ ಮಾವಂದಿರಾದ ಲಕ್ಷ್ಮಣ, ಗೋವಿಂದರಾಜು ಹಾಗೂ ಮಹಿಳೆಯರ ಮೇಲೆ ಹಲ್ಲೆ ನಡೆದಿದೆ. ಘಟನೆ ನಡೆದು ಐದು ದಿನಗಳಾದರೂ ಪೊಲೀಸರು ಇದುವರೆಗೆ ಕೇವಲ ನಾಲ್ಕು ಮಂದಿಯನ್ನು ಮಾತ್ರ ಬಂಧಿಸಿದ್ದಾರೆ. ಪ್ರಮುಖ ಆರೋಪಿಯಾದ ಹರ್ಷನನ್ನು ಬಂಧಿಸಿಲ್ಲ ಎಂದು ಆರೋಪಿಸಿದರು.ಹರ್ಷ ಗುಂಪು ಕಟ್ಟಿಕೊಂಡು ಲಾಂಗ್ ಮತ್ತು ಮಚ್ಚುಗಳೊಂದಿಗೆ ಬಂದು ಕೃತ್ಯ ಎಸಗಿದ್ದಾನೆ. ಹಿಂದೆಯೂ ಈತ ಇದೇ ಗ್ರಾಮದ ಪರಿಶಿಷ್ಟ ಸಮುದಾಯದ ಹಲವರ ಮೇಲೆ ಹಲ್ಲೆ ನಡೆಸಿದ್ದಾನೆ. ಈಗ ನಡೆದಿರುವುದು ನಾಲ್ಕನೇ ಪ್ರಕರಣವಾಗಿದೆ. ಆದರೂ, ಪೊಲೀಸರು ಆತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡಿಲ್ಲ. ಗಡಿಪಾರಾಗಿದ್ದರೂ ಊರಿಗೆ ಬಂದು ಕೃತ್ಯ ಎಸಗಿರುವ ಆತನಿಂದ ಕಾಲೋನಿ ನಿವಾಸಿಗಳಿಗೆ ಜೀವ ಬೆದರಿಕೆ ಇದೆ ಎಂದರು.
ತಲೆ ಮರೆಸಿಕೊಂಡಿರುವ ಹರ್ಷನನ್ನು ಕೂಡಲೇ ಬಂಧಿಸಬೇಕು. ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ರಾಜ್ಯದಿಂದ ಗಡಿಪಾರು ಮಾಡಬೇಕು. ಅನೀಶ್‌ಗೆ ಸರ್ಕಾರ 50 ಲಕ್ಷ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡಬೇಕು. ಹಲ್ಲೆಗೊಳಗಾಗಿರುವ ಇತರರಿಗೂ ಪರಿಹಾರ ನೀಡಬೇಕು. ಅವರ ವೈದ್ಯಕೀಯ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಬೇಕು. ಸಂತ್ರಸ್ತ ಕುಟುಂಬದವರು ಸೇರಿದಂತೆ ಕಾಲೊನಿಗೆ ಪೊಲೀಸ್ ಭದ್ರತೆ ಒದಗಿಸಬೇಕು ಸದಸ್ಯರು ಒತ್ತಾಯಿಸಿದರು.ತಾಮಸಂದ್ರ ವೃತ್ತದಲ್ಲಿರುವ ಭೋವಿ ಸಮುದಾಯದವರ ಮೇಲೆ ಜುಲೈ 17ರಂದು ಬೆಳಗ್ಗೆ ಸವರ್ಣೀಯ ತಿಗಳ ಸಮುದಾಯದ ನಾಗಲಿಂಗಯ್ಯ ಮತ್ತು ಕುಟುಂಬದವರು ಬೆಳಗ್ಗೆ ಲಾಂಗ್, ಚಾಕು ಹಾಗೂ ದೊಣ್ಣೆಗಳಿಂದ ಹಲ್ಲೆ ನಡೆಸಿದೆ. ಹೆಂಗಸರು, ಮಕ್ಕಳು, ವಯಸ್ಸಾದವರು ಎಂದು ನೋಡದೆ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿರುವ ತಂಡವು ಊರಿನಲ್ಲಿ ಭಯದ ವಾತಾವರಣ ನಿರ್ಮಿಸಿದೆ ದೂರಿದರು.
ಈ ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ನಾಲ್ಕೈದು ಮಂದಿಗೆ ಗಂಭೀರ ಗಾಯಗಳಾಗಿದ್ದು, ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಹಿಂದಿನ ದಿನ ಗೃಹ ಪ್ರವೇಶ ಕಾರ್ಯಕ್ರಮಕ್ಕಾಗಿ ರಸ್ತೆಗೆ ಶಾಮಿಯಾನ ಹಾಕಿದ್ದರು. ಈ ವಿಷಯವಾಗಿ ನಾಗಲಿಂಗಯ್ಯ ಮತ್ತು ಆತನ ಮಕ್ಕಳು ಗೃಹ ಪ್ರವೇಶ ಕಾರ್ಯಕ್ರಮ ಮಾಡುತ್ತಿದ್ದ ಶ್ರೀನಿವಾಸ ಎಂಬುವರ ಜೊತೆ ಜಗಳ ಮಾಡಿ ಹಲ್ಲೆ ನಡೆಸಿದ್ದರು. ಇದೇ ದ್ವೇಷಕ್ಕೆ ಮಾರನೇಯ ದಿನ ಊರಿಗೆ ನುಗ್ಗಿ ಭರತ್ ಸೇರಿದಂತೆ ಹಲವರ ಮೇಲೆ ಹಲ್ಲೆ ನಡೆಸಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಮೊದಲ ಘಟನೆ ನಡೆದಾಗಲೇ ಪೊಲೀಸರಿಗೆ ಶ್ರೀನಿವಾಸ ಅವರು ದೂರು ಕೊಟ್ಟಿದ್ದರು. ಆಗ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರಿಂದ ಮಾರನೇಯ ದಿನ ಘೋರ ಘಟನೆ ನಡೆದಿದೆ. ಹಲ್ಲೆ ಮಾಡಿದವರಲ್ಲಿ ಕೆಲವರು ರೌಡಿಗಳು ಇದ್ದಾರೆ ಎಂದು ಆರೋಪಿಸಿದರು.ಈ ಪ್ರಕರಣದಲ್ಲೂ ಪೊಲೀಸರು 16 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಇದುವರೆಗೆ ಕೇವಲ ನಾಲ್ಕು ಮಂದಿಯನ್ನು ಮಾತ್ರ ಬಂಧಿಸಿದ್ದಾರೆ. ಈ ಘಟನೆಯಲ್ಲಿ ನಾಗಲಿಂಗಯ್ಯ ಮತ್ತು ಮಂಜ ಪ್ರಮುಖ ಆರೋಪಿಗಳು. ಅವರನ್ನು ಕೂಡಲೇ ಬಂಧಿಸಬೇಕು. ಹಲ್ಲೆಗೊಳಗಾಗಿರುವ ಇತರರಿಗೂ ಪರಿಹಾರ ನೀಡಬೇಕು. ಅವರ ವೈದ್ಯಕೀಯ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಬೇಕು. ಸಂತ್ರಸ್ತ ಕುಟುಂಬದವರು ಸೇರಿದಂತೆ ಇಡೀ ಊರಿಗೆ ಪೊಲೀಸ್ ಬಂದೋಬಸ್ತ್ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಎರಡೂ ಗ್ರಾಮಗಳಿಗೆ ಭೇಟಿ ನೀಡಿದ ನಿಯೋಗದಲ್ಲಿ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಹರೀಶ್ ಬಾಲು, ಪ್ರಕಾಶ್ ಮತ್ತು ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಡಾ. ಕುಮಾರ್ ಹಾಗೂ ದಲಿತ ಸಂಘಟನೆಯ ಮುಖಂಡರು ಹಾಜರಿದ್ದರು.