ಸಾರಾಂಶ
ಬಳ್ಳಾರಿ: ಸ್ವದೇಶಿ ವಸ್ತುಗಳ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಆತ್ಮನಿರ್ಭರ ಭಾರತ-ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರತಿಮನೆಗೆ ತೆರಳಿ ದೈನಂದಿನ ಜೀವನದಲ್ಲಿ ಭಾರತೀಯ ನಿರ್ಮಿತ ಉತ್ಪನ್ನಗಳ ಬಳಕೆ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ ತಿಳಿಸಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿಯಾನಕ್ಕೆ ಸೆಪ್ಟಂಬರ್ 25ರಂದು ಪಂಡಿತ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನದಂದು ಚಾಲನೆ ಸಿಕ್ಕಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಡಿಸೆಂಬರ್ 25ರವರೆಗೆ ಜಾಗೃತಿ ಕಾರ್ಯ ರಾಜ್ಯದಾದ್ಯಂತ ಮುಂದುವರಿಯಲಿದೆ. ಪ್ರತಿಯೊಬ್ಬ ನಾಗರಿಕರನ್ನು ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಹಾಗೂ ಸ್ವದೇಶಿ ವಸ್ತುಗಳ ಬಳಕೆಯ ಮಹತ್ವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಈ ಮೂಲಕ ರಾಷ್ಟ್ರೀಯ ಚಿಂತನೆಗಳಿಗೆ ಶಕ್ತಿ ತುಂಬುವ ಕೆಲಸವಾಗಲಿದೆ ಎಂದರು. ಅಭಿಯಾನದ ಅಂಗವಾಗಿ ನಾಲ್ಕು ಹಂತದ ಕಾರ್ಯಾಗಾರವನ್ನು ಪಕ್ಷದಿಂದ ನಡೆಸಲಾಗಿದ್ದು, ಪಕ್ಷದ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ. ಪ್ರತಿಮನೆಗೆ ತೆರಳಿ ಐದು ನಿಮಿಷಗಳ ಕಾಲ ಆತ್ಮನಿರ್ಭರ ಅಭಿಯಾನದ ಉದ್ದೇಶವನ್ನು ತಿಳಿಸಿಕೊಡಲಾಗುತ್ತದೆ. ಅಭಿಯಾನ ಯಶಸ್ವಿಗೊಳಿಸುವ ಮೂಲಕ ರಾಷ್ಟ್ರದ ಆರ್ಥಿಕ ಸ್ಥಿತಿ ಮತ್ತು ಸಾಂಸ್ಕೃತಿಕತೆಗೆ ಶಕ್ತಿ ತುಂಬುವ ಕೆಲಸವಾಗಲಿದೆ ಎಂದು ತಿಳಿಸಿದರು.ಭಾರತವು ನಾನಾ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸುತ್ತಿದ್ದು, ಈ ಮೂಲಕ ವಿಶ್ವದ ಗಮನ ಸೆಳೆಯುತ್ತಿದೆ. ಕೋವಿಡ್ ಸಂದರ್ಭಗಳಲ್ಲಿ ಲಸಿಕೆಯನ್ನು ತಯಾರಿಸಿ, ದೇಶ ನಿವಾಸಿಗಳನ್ನು ಸಾಂಕ್ರಾಮಿಕ ರೋಗದಿಂದ ಪಾರು ಮಾಡಲಾಗಿದೆ. ಯುದ್ಧ ವಿಮಾನ ತಯಾರಿಕೆಯಲ್ಲಿ ಹೊರ ದೇಶಗಳ ಅವಲಂಬನೆ ಕಡಿಮೆಯಾಗಿದೆ. ಇತ್ತೀಚೆಗೆ ಜರುಗಿದ ಸಿಂಧೂರ ದಾಳಿ ವೇಳೆ ಭಾರತದ ಸಾಮರ್ಥ್ಯ ಜಗತ್ತಿಗೆ ಗೊತ್ತಾಗಿದೆ. ಕೆಲವು ವಲಯದಲ್ಲಿ ಭಾರತ ಭಾಗಶಃ ಸ್ವಾವಲಂಬನೆಯ ಸಾಧಿಸಿದ್ದು, ದೇಶದ ಪ್ರತಿಯೊಬ್ಬರೂ ದೇಸೀಯ ವಸ್ತುಗಳ ಬಳಕೆಯನ್ನು ಮಾಡುವುದರಿಂದ ಪರಾವಲಂಬನೆ ಮತ್ತಷ್ಟು ಕಡಿಮೆಯಾಗಲಿದೆ. ಇದು ದೇಶದ ಸಮಗ್ರತೆ ಹಾಗೂ ಐಕ್ಯತೆಗೂ ಪುಷ್ಠಿ ನೀಡಲಿದೆ. ಅಭಿಯಾನ ಯಶಸ್ವಿಗೊಳಿಸುವ ದಿಸೆಯಲ್ಲಿ ಭಾಷಣ, ಪ್ರಬಂಧ ಸ್ಪರ್ಧೆಗಳು, ಸ್ವದೇಶಿ ಸಂಕಲ್ಪ ಸಮ್ಮೇಳನಗಳು, ಪಾದಯಾತ್ರೆಗಳು, ಸಹಿಸಂಗ್ರಹ ಅಭಿಯಾನ, ಗೋಡೆ ಬರಹ, ಬೀದಿನಾಟಕ ಸೇರಿದಂತೆ ನಾನಾ ಮಾಧ್ಯಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. 25 ಸಾವಿರ ಸ್ಟಿಕ್ಕರ್‌ಗಳನ್ನು ಮನೆಮನೆಗೆ ಅಂಟಿಸಲಾಗುತ್ತಿದೆ. ದೇಶದ ಪ್ರತಿಮನೆಯೂ ಸ್ವದೇಶಿಯಾಗಬೇಕು. ಸ್ವದೇಶಿ ಉತ್ಪನ್ನಗಳ ಬಳಕೆ ಮಾಡಬೇಕು. ಸ್ವದೇಶಿ ಎನ್ನುವುದು ನಮ್ಮ ಜೀವನದ ಭಾಗವಾಗಬೇಕು ಎಂದು ಹೇಳಿದರು.
ಪಕ್ಷದ ಮುಖಂಡರಾದ ಡಾ.ಬಿ.ಕೆ. ಸುಂದರ್, ಎಸ್.ಗುರುಲಿಂಗನಗೌಡ, ಎಚ್.ಹನುಮಂತಪ್ಪ, ಕೆ.ಎಸ್. ದಿವಾಕರ್, ತಿಮ್ಮಾರೆಡ್ಡಿ, ಪುಷ್ಪಲತಾ, ಜಿ.ವೆಂಕಟರಮಣ, ಗುಡಿಗಂಟಿ ಹನುಮಂತಪ್ಪ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.