ಯೋಜನೆಗಳು ಫಲಾನುಭವಿಗೆ ತಲುಪಲು ಅರಿವು ಅಗತ್ಯ

| Published : Sep 26 2024, 10:35 AM IST

ಸಾರಾಂಶ

ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಲು ಅಧಿಕಾರಿಗಳು ಅರಿವು ಮೂಡಿಸಬೇಕು ಎಂದು ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಲು ಅಧಿಕಾರಿಗಳು ಅರಿವು ಮೂಡಿಸಬೇಕು ಎಂದು ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.ಜಿಲ್ಲಾ ಅಗ್ರೀಣಿ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಬುಧವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಿಲ್ಲಾ ಸಾಲ ಸಂಪರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರವು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬಲಪಡಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಪ್ರತಿ ಮನೆಗೂ ಮೂಲಭೂತ ಸೌಕರ್ಯಗಳಾದ ವಿದ್ಯುತ್, ಕುಡಿಯುವ ನೀರು, ಶೌಚಾಲಯಗಳ ಸೌಲಭ್ಯವನ್ನು ಒದಗಿಸಿದೆ. ಸಮಾಜದ ಎಲ್ಲಾ ವರ್ಗದ ಜನರು ಸಮಾನತೆಯಿಂದ ಬಾಳಬೇಕೆಂಬುದು ಸರ್ಕಾರದ ಆಶಯವಾಗಿದೆ ಎಂದರು.ದೇಶದಲ್ಲಿನ ಮಹಿಳೆಯರ, ರೈತರ, ಜನಸಾಮಾನ್ಯರ, ನಿರುದ್ಯೋಗಿಗಳ ಹಾಗೂ ಸಾಂಪ್ರದಾಯಿಕ ಕಸುಬುದಾರರನ್ನು ಆರ್ಥಿಕವಾಗಿ ಸಬಲಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತರುವ ದೃಷ್ಟಿಯಿಂದ ಸ್ಟಾರ್ಟ್ ಆಫ್ ಇಂಡಿಯಾ, ಸ್ಟಾಂಡ್ ಆಫ್ ಇಂಡಿಯಾ, ಪ್ರಧಾನಮಂತ್ರಿ ಸ್ವನಿಧಿ, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆಯಂತಹ ಯೋಜನೆಗಳನ್ನು ಜಾರಿಗೆ ತಂದು ಸ್ವ ಉದ್ಯೋಗ ರೂಪಿಸಿಕೊಳ್ಳಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯು ಬಡಗಿ, ಕುಂಬಾರಿಕೆ, ಮಾಲಾಕಾರರು, ದೋಣಿ ತಯಾರಕರು ಸೇರಿದಂತೆ ಒಟ್ಟು 18 ಸಾಂಪ್ರದಾಯಿಕ ಕರಕುಶಲ ಕರ್ಮಿಗಳ ಕೈಬಲಪಡಿಸಲು ಸಹಕಾರಿಯಾಗಿದೆ. ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿ ಅರ್ಜಿಯು ಅನುಮೋದನೆಗೊಂಡು ಆಯ್ಕೆಯಾದ ನಂತರ ಅರ್ಜಿದಾರರಿಗೆ ಗುರುತಿನ ಚೀಟಿ ನೀಡಿ ಅವರ ಐಚ್ಛಿಕ ವಿಷಯದಲ್ಲಿ 7 ದಿನಗಳ ಉತ್ತಮ ಗುಣಮಟ್ಟದ ತರಬೇತಿಯನ್ನು ನೀಡಲಾಗುತ್ತದೆ ಎಂಂದರು.

ತರಬೇತಿ ಸಮಯದಲ್ಲಿ ₹500 ಶಿಷ್ಯ ವೇತನ ಹಾಗೂ ತರಬೇತಿ ನಂತರದಲ್ಲಿ ₹15000 ಟೂಲ್‌ಕಿಟ್ ಹಾಗೂ ಪ್ರಮಾಣ ಪತ್ರವನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆ ಎಂದು ಹೇಳಿದರು.

ತರಬೇತಿ ಪೂರ್ಣಗೊಂಡ ಎಲ್ಲಾ ಅಭ್ಯರ್ಥಿಗಳು ಸಾಲ ಸೌಲಭ್ಯಕ್ಕೆ ಅರ್ಹರಾಗಿದ್ದು, ಸಾಲದ ಅವಶ್ಯಕತೆ ಇದ್ದಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಸಂಬಂಧ ಪಟ್ಟ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಸಾಲವನ್ನು ಪಡೆಯಬಹುದು. ತರಬೇತಿ ನಂತರದಲ್ಲಿ ಮೊದಲಿಗೆ ಶೇ.5 ರಷ್ಟು ಬಡ್ಡಿದರದಲ್ಲಿ ಒಂದು ಲಕ್ಷ ರೂ. ಗಳ ಸಾಲ ಒದಗಿಸಲಾಗುವುದು ಎಂದು ತಿಳಿಸಿದರು.ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ವಿಶ್ವಕರ್ಮ ಯೋಜನೆಯು ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಿ ಆರ್ಥಿಕ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಅನುಮೋದನೆಗೊಂಡ ಅರ್ಹ ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ. ತರಬೇತಿ ಪೂರ್ಣಗೊಂಡು ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ಖಾತೆಗೆ ಹಣ ಜಮೆಯಾಗಿದ್ದು, ಬಾಕಿ ಇರುವ ಎಲ್ಲಾ ಅರ್ಹ ಅರ್ಜಿದಾರರಿಗೆ ಸಾಲ ಒದಗಿಸಲಾಗುವುದು ಎಂದು ಹೇಳಿದರು.

ಇದು ತಂತ್ರಜ್ಞಾನದ ಯುಗ. ತಮ್ಮಲ್ಲಿರುವ ಕಲೆ ಕೌಶಲ್ಯಗಳನ್ನು ತಂತ್ರಜ್ಞಾನ ಬಳಸಿ ಹೆಚ್ಚಿನ ತರಬೇತಿ ಪಡೆಯುವುದರೊಂದಿಗೆ ವಿಭಿನ್ನ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು. ಮಾರುಕಟ್ಟೆಯ ಬಗ್ಗೆ ಮಾಹಿತಿ ಪಡೆದು ಹೆಚ್ಚು ಹಣ ಗಳಿಸುವ ಕಡೆ ಗಮನಹರಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳು ಯಾವುದೇ ಅಡಮಾನವಿಲ್ಲದೇ ಅರ್ಹ ಅಭ್ಯರ್ಥಿಗಳಿಗೆ ಸಾಲ ಒದಗಿಸಿಕೊಡುವಲ್ಲಿ ಶ್ರಮವಹಿಸುತ್ತಿವೆ ಎಂದರು.

ಅಭ್ಯರ್ಥಿಗಳು ಬ್ಯಾಂಕ್‌ ಸೂಚಿಸಿದ ಕನಿಷ್ಟ ದಾಖಲೆಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಲ್ಲಿಸಿದ್ದಲ್ಲಿ ಸಾಲವು ನಿರ್ದಿಷ್ಟ ಸಮಯದೊಳಗೆ ಮಂಜೂರಾಗುತ್ತದೆ. ಸಾಲ ಸೌಲಭ್ಯವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ತಂತ್ರಜ್ಞಾನದೊಂದಿಗೆ ಸ್ವಉದ್ಯೋಗವನ್ನು ಪ್ರಾರಂಭಿಸಿ ಆರ್ಥಿಕವಾಗಿ ಸಧೃಡರಾಗಿ ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಸುರೇಶ್ ಸ್ವಾಗತಿಸಿದರು. ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಸ್. ಕೀರ್ತನಾ, ನಗರಸಭೆ ಪೌರಾಯುಕ್ತ ಬಸವರಾಜ್, ವಿಶ್ವಕರ್ಮ ಸಲಹಾ ಸಮಿತಿ ಸದಸ್ಯರಾದ ರವೀಂದ್ರ ಬೆಳವಾಡಿ, ವೆನಿಲ್ಲಾ ಭಾಸ್ಕರ್, ಸಂತೋಷ್ ಕೋಟ್ಯಾನ್ ಇದ್ದರು.