ಕೊಪ್ಪಳ ಆಸ್ಪತ್ರೆಯ ಸಭಾಭವನದಲ್ಲಿ ಸೋಮವಾರ ‘ಅಂತಾರಾಷ್ಟ್ರೀಯ ಸುರಕ್ಷಿತ ಗರ್ಭಪಾತ ಸೇವೆಗಳ ದಿನ’ ಹಾಗೂ ‘ಅಂತಾರಾಷ್ಟ್ರೀಯ ಶ್ರವಣದೋಷ ಸಪ್ತಾಹ’ ಕಾರ್ಯಕ್ರಮ ನಡೆಯಿತು.
ಕೊಪ್ಪಳ: ಸುರಕ್ಷಿತ ಗರ್ಭಪಾತ ಸೇವೆಗಳ ಕುರಿತು ಅರಿವು ಮೂಡಿಸುವ ಜತೆಗೆ ಕಿವಿಯ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಜಿಲ್ಲಾ ಬೋಧಕ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ರಾಜೇಶ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಬೋಧಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆಶ್ರಯದಲ್ಲಿ ಸೋಮವಾರ ಆಸ್ಪತ್ರೆಯ ಸಭಾಭವನದಲ್ಲಿ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಸುರಕ್ಷಿತ ಗರ್ಭಪಾತ ಸೇವೆಗಳ ದಿನ’ ಹಾಗೂ ‘ಅಂತಾರಾಷ್ಟ್ರೀಯ ಶ್ರವಣದೋಷ ಸಪ್ತಾಹ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸುರಕ್ಷಿತ ಸೇವೆ ಮುಖ್ಯ: ಅರ್ಹ ಹಾಗೂ ತರಬೇತಿ ಪಡೆದ ಆರೋಗ್ಯ ಸಿಬ್ಬಂದಿಯಿಂದ ಸೂಕ್ತ ವೈದ್ಯಕೀಯ ಪರಿಸರದಲ್ಲಿ, ವೈಜ್ಞಾನಿಕವಾಗಿ ಅನುಮೋದಿತ ವಿಧಾನಗಳ ಮೂಲಕ ನೀಡುವ ಗರ್ಭಪಾತ ಸೇವೆಯೇ ಸುರಕ್ಷಿತ ಗರ್ಭಪಾತ. ಅಸುರಕ್ಷಿತ ಗರ್ಭಪಾತದಿಂದ ಉಂಟಾಗಬಹುದಾದ ತಾಯಂದಿರ ಮರಣವನ್ನು ತಡೆಗಟ್ಟುವುದು ಹಾಗೂ ಮಹಿಳೆಯರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಹಕ್ಕುಗಳನ್ನು ರಕ್ಷಿಸುವುದು ಇದರ ಉದ್ದೇಶವಾಗಿದೆ ಎಂದರು.
ಕಿವಿಗೆ ಕಡ್ಡಿ, ಎಣ್ಣೆ ಹಾಕಬೇಡಿ: ಕಿವಿ, ಮೂಗು ಹಾಗೂ ಗಂಟಲು ತಜ್ಞ ಡಾ. ಅವಿನಾಶ್ ಮಾತನಾಡಿ, ಶ್ರವಣದೋಷ ಹಾಗೂ ಕಿವುಡುತನ ತಡೆಗಟ್ಟುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.ಕಿವಿಯಲ್ಲಿ ಕಡ್ಡಿ ಹಾಕುವುದು, ಎಣ್ಣೆ ಸುರಿಯುವುದು, ನಕಲಿ ವೈದ್ಯರಿಂದ ಕಿವಿಯ ಗುಗ್ಗೆ ತೆಗೆಸಿಕೊಳ್ಳುವುದು ಅಪಾಯಕಾರಿ. ವೈದ್ಯರ ಸಲಹೆ ಇಲ್ಲದೆ ಕಿವಿಯಲ್ಲಿ ಯಾವುದೇ ವಸ್ತು ಹಾಕಬಾರದು. ಕಲುಷಿತ ನೀರಿನಲ್ಲಿ ಈಜುವುದನ್ನು ತಪ್ಪಿಸಬೇಕು. ಕಿವಿನೋವು ಅಥವಾ ಸೋರುವಿಕೆ ಕಂಡುಬಂದರೆ ತಕ್ಷಣ ಸಮೀಪದ ತಾಲೂಕು ಅಥವಾ ಜಿಲ್ಲಾ ಆಸ್ಪತ್ರೆಗೆ ತೆರಳಿ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.
ಮಕ್ಕಳಿಗೆ ಉಚಿತ ಚಿಕಿತ್ಸೆ: ಎರಡು ವರ್ಷದೊಳಗಿನ ಮಕ್ಕಳಿಗೆ ಅಗತ್ಯವಿದ್ದಲ್ಲಿ ಉಚಿತ ಶ್ರವಣ ಶಸ್ತ್ರಚಿಕಿತ್ಸೆ ಸೌಲಭ್ಯ ದೊರೆಯಲಿದೆ ಎಂದು ಅವರು ತಿಳಿಸಿದರು.ಆಡಿಯಾಲಜಿಸ್ಟ್ ಬಿಂದು ಅವರು ಕಿವಿಯ ಆರೋಗ್ಯ ರಕ್ಷಣೆ, ಕಿವಿ ಪರೀಕ್ಷೆ ಹಾಗೂ ಲಭ್ಯವಿರುವ ವೈದ್ಯಕೀಯ ಸೇವೆಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರವೀಂದ್ರನಾಥ್ ಎಂ.ಎಚ್., ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಪ್ರಕಾಶ ವಿ. ಅವರು ಕುಟುಂಬ ಕಲ್ಯಾಣ, ತಾಯಿ-ಮಗು ಆರೋಗ್ಯ, ಗರ್ಭಿಣಿಯರ ಆರೋಗ್ಯ ತಪಾಸಣೆ ಹಾಗೂ ರಕ್ತಹೀನತೆ ನಿಯಂತ್ರಣದ ಕುರಿತು ಮಾತನಾಡಿದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೇವಮ್ಮ, ಡಾ. ಚೈತ್ರಾ, ಸ್ವರೂಪರಾಣಿ, ವಿಜಯಲಕ್ಷ್ಮೀ, ಸುಮಂಗಲಾ, ಜ್ಯೋತಿ, ಶ್ವೇತಾ ಪಾಲ್ಗೊಂಡಿದ್ದರು.