ಸಾರಾಂಶ
ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ । ವೈರಿಗಳ ತಲೆ ತೆಗೆಯಬೇಡಿ, ನಿಮ್ಮ ತಲೆಯಿಂದ ವೈರಿಗಳನ್ನು ತೆಗೆಯಿರಿ । ಜೀವನ ಇದ್ದಂತೆ ಸ್ವೀಕರಿಸುವವನು ಸಂತ, ಜ್ಞಾನಿ
ಕನ್ನಡಪ್ರಭ ವಾರ್ತೆ ಕೊಪ್ಪಳ
ಮನುಷ್ಯನಿಗೆ ಜೀವನದಲ್ಲಿ ಅರಿವು ಮುಖ್ಯ ಎಂದು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.ನಗರದ ಕೈಲಾಸ ಮಂಟಪದಲ್ಲಿ ಜರುಗಿದ ಭಕ್ತ ಹಿತ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ತಾಯಿ ಗರ್ಭದಿಂದ ಭೂಮಿಗೆ ಬರುವ ಮಗು, ಅಳುತ್ತಾ ಬರುತ್ತದೆ. ಇಷ್ಟು ಜನ ನಾವು ಹುಟ್ಟಿ ಬಂದಿದ್ದೇವೆ. ಮಕ್ಕಳು ಹುಟ್ಟಿ ಬರುವುದನ್ನು ನೋಡಿದ್ದೇವೆ. ಯಾಕೆ ಆ ಮಗು ಅಳುತ್ತದೆ. ಏನು ಪಡೆಯಬೇಕು ಎಂಬುದಕ್ಕೆ ಅಳುತ್ತದೆ. ಭೂಮಿ ಬಿಟ್ಟು ಹೋಗುವ ವ್ಯಕ್ತಿ ಅಳುತ್ತಾನೆ. ಭೂಮಿಗೆ ಬರುವ ಮಗು, ಭೂಮಿ ಬಿಟ್ಟು ಹೋಗುವ ವ್ಯಕ್ತಿ ಅಳುತ್ತಾರೆ, ಏಕೆ? ಏನು ಪಡೆಯಬೇಕು ಎಂದು ಮಗು ಅಳುತ್ತದೆ, ಏನು ಕಳೆದುಕೊಂಡಿದ್ದೇನೆ ಎಂದು ಭೂಮಿ ಬಿಟ್ಟು ಹೋಗುವ ವ್ಯಕ್ತಿ ಅಳುತ್ತಾನೆ. ಅದು ಏನೆಂದರೆ ಸಂತೋಷ. ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ಬಯಸುವ ಗುರಿ ದುಃಖ ಇರಬಾರದು. ಸಂತೋಷದಿಂದ ಇರಬೇಕು ಎಂಬುದು ಇಚ್ಚೆ. ಉಣ್ಣಲಿಕ್ಕೆ ಅನ್ನ, ಆಶ್ರಯ, ಬಟ್ಟೆ ಬೇಕು. ಇವುಗಳ ಜೊತೆ ಹೇಗೆ ಬದುಕಬೇಕು ಎಂಬ ಅರಿವು ಬೇಕು. ಅಂದಾಗ ಸಂತೋಷದಿಂದ ಬಾಳಲು ಸಾದ್ಯ.
ಅರಿವು ಇದ್ದರೆ ಕಲ್ಲಿನಲ್ಲಿ ಶಂಕರ ಸಹ ನಿರ್ಮಾಣ ಆಗುತ್ತಾನೆ. ಮೊಬೈಲ್ ಬಿದ್ದರೆ ಒಡೆಯುತ್ತದೆ ಎಂದು ತಿಳಿದು ಸ್ಕ್ರೀನ್ ಗಾರ್ಡ್ ಹಾಕುತ್ತೇವೆ. ಗಾಡಿಯಾಗ ಓಡುವಾಗ ಹೆಲ್ಮೇಟ್ ಹಾಕಬೇಕು ಎಂಬಅರಿವು ಇಲ್ಲವಲ್ಲ ಎಂದರು.ಕನ್ನಡ ಸಮೃದ್ಧ ಭಾಷೆ. 49 ಅಕ್ಷರದಿಂದ ಬೇಂದ್ರೆ, ಕುವೆಂಪು ಜ್ಞಾನಪೀಠ ಪ್ರಶಸ್ತಿ ಪಡೆದರು. ಅರಿವು ಇಲ್ಲದವ ಈ ಅಕ್ಷರ ಬಳಸಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಾನೆ. ಹಾಲು ಕುಡಿದರೆ ಏನು ಆಗುತ್ತದೆ ಅನ್ನೊದು ಗೊತ್ತಿದೆ, ಹಾಲ್ಕೋ ಹಾಲ್ ಕುಡಿದರೆ ಏನಾಗುತ್ತದೆ ಅನ್ನೋದು ಗೊತ್ತಿದೆ. ಹಾಲು ಕುಡಿದರೆ, ಹಾಲ್ಕೋಹಾಲ್ ಕುಡಿದರೆ ಏನಾಗುತ್ತದೆ ಎಂಬುದು ಅರಿವು ಇಲ್ಲ. ಕುಡಿಯದಿದ್ದರೆ ಸರ್ಕಾರ ನಡೆಯುವುದಿಲ್ಲ ಎಂದು ಹಾಸ್ಯ ಮಾಡಿದರು.ಮನುಷ್ಯನಿಗೆ ಜೀವನದಲ್ಲಿ ಬೇಕಾಗಿರುವುದು ಅರಿವು. ಅರಿವು ಇಲ್ಲದಿದ್ದರೆ ಬದುಕು ಕೆಡುತ್ತದೆ. ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ಮಾಡುವ ಕೆಲಸ ಕಲಿಯುವುದು ಆಗಿದೆ. ಪ್ರತಿ ಕ್ಷಣ ಇಲ್ಲಿ ಹೊಸದನ್ನು ಕಲಿಯುವುದು ಇದೆ. ಪ್ರತಿ ಕ್ಷಣ ಬದುಕು ಪಾಠ ಕಲಿಸುತ್ತದೆ. ಎಂದರು.ಮಂದಿ ನಂಬಿ ಕೆಟ್ಟವರಿದ್ದಾರೆ. ಮಣ್ಣು ನಂಬಿ ಕೆಟ್ಟವರಿಲ್ಲ ಎಂದು ತಂದೆ ಹೇಳುತ್ತಾರೆ. ಇದರರ್ಥ ದುಡಿಯಬೇಕು ಎಂದು. ಕುಕ್ಕರ್ ತೆಳಗೆ ಬೆಂಕಿ ಇಟ್ಟರೆ ಸಿಟಿ ಹೊಡೆಯುತ್ತದೆ. ಹಾಗೆ ನಮಗೆ ಬೆಂಕಿ ಇಟ್ಟರೂ ಸಿಟಿ ಹೊಡೆಕ್ಕೊಂತಾ ಸಾಗಬೇಕು. ಜಗತ್ತು ಎಂದರೆ ಡೋನೆಷನ್ ಇಲ್ಲದ ಪಾಠ ಶಾಲೆ. ಇದು ಫೀಸ್ ಇಲ್ಲದೆ ಶಾಲೆ ಕಲಿಸುತ್ತದೆ. ಜೀವನ ಇದೊಂದು ಪಾಠ ಶಾಲೆ. ಬಡತನ, ನಿಂದನೆ, ವೈರಿಗಳ ಚುಚ್ಚು ಮಾತು ಜೀವನದಲ್ಲಿ ಬರುತ್ತದೆ. ಇವೆಲ್ಲವನ್ನು ಮೀರಿ ಬದುಕಬೇಕು. ದುಃಖದಲ್ಲಿದ್ದಾಗ ನಮ್ಮ ಕೈಯಲ್ಲಿನ ಒಂದು ಬೆರಳು ಮಾತ್ರ ಕಣ್ಣೀರು ಒರೆಸಲು ಬರುತ್ತದೆ. ಹತ್ತು ಬೆರಳು ಬರುವುದಿಲ್ಲ. ಹಾಗೆ ಬರುವ ಕಷ್ಟ ಅನುಭವಿಸಿ ಮೆಟ್ಟಿ ನಿಲ್ಲಬೇಕು. ಖಾಲಿ ಜೇಬು ಪಾಠ ಕಲಿಸುತ್ತದೆ. ಕಲಿಬೇಕು. ಹಸಿವು ಮತ್ತು ಬಡತನ ಪಾಠ ಕಲಿಸುತ್ತದೆ ಎಂದು ಹೇಳುತ್ತಾರೆ. ಪಾಠ ಕಲಿಯಬೇಕು. ವೈರಿಗಳ ಬಗ್ಗೆ ತಲೆಕಡಿಸಿಕೊಳ್ಳಬೇಡಿ. ವೈರಿಗಳ ತಲೆ ತೆಗೆಯಬೇಡಿ, ನಿಮ್ಮ ತಲೆಯಿಂದ ವೈರಿಗಳನ್ನು ತೆಗೆಯಿರಿ, ಅವಾಗ ಅದುವೇ ಸಾರ್ಥಕ ಎಂದರು.
ಹಲಸಿದ ಅನ್ನ ಉಂಡರೆ ಹೊಟ್ಟೆ ಕೆಡುತ್ತದೆ. ಹಾಗೆ ನಿನ್ನೆ ಮೊನ್ನೆ ಮಾತುಗಳನ್ನು ಆಡುವುದರಿಂದ ಮನಸ್ಸು ಕೆಡುತ್ತದೆ. ನಮ್ಮ ಇಚ್ಚೆಯಂತೆ ಜಗತ್ತು ನಡೆಯುವುದಿಲ್ಲ. ಜಗದ ಇಚ್ಚೆಗೆ ನಮ್ಮ ಜೀವನ ಹೊಂದಿಕೊಂಡು ಬದುಕುವವರು ಸಂತರಾಗುತ್ತಾರೆ. ಇದ್ದದ್ದನ್ನು ಒಪ್ಪಿಕೊಳ್ಳುವುದು ಬುದ್ಧ ಅಂತಾರೆ. ಸ್ವೀಕರಿಸಬೇಕು. ಮುಪ್ಪು ಬಂದ ಮೇಲೆ ಗಪ್ಪು ಇರಬೇಕು ಎಂಬುದನ್ನು ಕಲಿಯಬೇಕು. ಜೀವನ ಇದ್ದಂತೆ ಸ್ವೀಕರಿಸುವವನು ಸಂತ, ಜ್ಞಾನಿ. ನಿನ್ನೆ ಸತ್ತು ಹೋಗಿದೆ. ಇಂದು ಇದೆ. ಈ ಕ್ಷಣವನ್ನು ಅನುಭವಿಸಿ ಸಂತೋಷ ಪಡೆಯಬೇಕು ಎಂದು ಹೇಳಿದರು.ತಟ್ಟೆ ಬಂಗಾರದ್ದಾದರೇನು, ಬೆಳ್ಳಿಯದಾದರೇನೂ ಮಣ್ಣಿನದಾದರೇನೂ ತಟ್ಟೆಯಲ್ಲಿರುವ ರೊಟ್ಟಿ ಮುಖ್ಯ. ದೇವರು ನಮ್ಮ ತಟ್ಟೆಯಲ್ಲಿ ಸುಂದರ ಆಯಸ್ಸು ಹಾಕಿದ್ದಾನೆ. ಸಂತೋಷದಿಂದ ಹೊಂದಿಕೊಂಡು ಹೋಗಬೇಕು ಎಂದರು.