ಕರ್ತವ್ಯದ ವೇಳೆ ವಾಹನ ಚಾಲಕರು ಅನುಸರಿಸಬೇಕಾದ ಸಾರಿಗೆ ನಿಯಮಗಳನ್ನು ವಿವರಿಸಿದ ಅವರು, ಬಹುತೇಕ ಚಾಲಕರಿಗೆ ನಿಯಮಗಳ ಅರಿವಿದ್ದರೂ ಅದರ ಪಾಲನೆಯಲ್ಲಿ ತೋರಿಸುವ ನಿರ್ಲಕ್ಷ್ಯವೇ ಅಪಘಾತಗಳಿಗೆ ಕಾರಣವಾಗುತ್ತಿದೆ. ದೇಶದಲ್ಲಿ ಪ್ರತಿನಿತ್ಯ ೧.೭೦ ಲಕ್ಷ ಜನ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಚಾಲಕರು ತಮ್ಮ ಕರ್ತವ್ಯ ಪಾಲನೆಗೆ ನೀಡುವಷ್ಟೇ ಆದ್ಯತೆಯನ್ನು ಸುರಕ್ಷಿತವಾಗಿ ಮನೆಗೆ ಹಿಂತಿರುಗಲು ನೀಡಬೇಕು. ವಾಹನ ಚಾಲನೆ ವೇಳೆ ತಮ್ಮ ಜೀವದ ಜೊತೆಗೆ ರಸ್ತೆಯಲ್ಲಿ ಸಂಚರಿಸುತ್ತಿರುವ ಇತರ ಜೀವಗಳ ಸುರಕ್ಷತೆಯ ಬಗ್ಗೆಯೂ ಎಚ್ಚರ ವಹಿಸಬೇಕು ಎಂದು ನಾಗಮಂಗಲ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯ ಹಿರಿಯ ಮೋಟಾರು ವಾಹನಗಳ ನಿರೀಕ್ಷಕ ಸಿ.ಎಸ್.ಸತೀಶ್ ಮನವಿ ಮಾಡಿದರು.ಪಟ್ಟಣದ ರಾಜ್ಯ ರಸ್ತೆ ಸಾರಿಗೆ ನಿಗಮದ ಡಿಪೋ ಆವರಣದಲ್ಲಿ ಆರ್‌ಟಿಒ ಇಲಾಖೆ ಮತ್ತು ಸಾರಿಗೆ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ೩೭ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ತವ್ಯದ ವೇಳೆ ವಾಹನ ಚಾಲಕರು ಅನುಸರಿಸಬೇಕಾದ ಸಾರಿಗೆ ನಿಯಮಗಳನ್ನು ವಿವರಿಸಿದ ಅವರು, ಬಹುತೇಕ ಚಾಲಕರಿಗೆ ನಿಯಮಗಳ ಅರಿವಿದ್ದರೂ ಅದರ ಪಾಲನೆಯಲ್ಲಿ ತೋರಿಸುವ ನಿರ್ಲಕ್ಷ್ಯವೇ ಅಪಘಾತಗಳಿಗೆ ಕಾರಣವಾಗುತ್ತಿದೆ. ದೇಶದಲ್ಲಿ ಪ್ರತಿನಿತ್ಯ ೧.೭೦ ಲಕ್ಷ ಜನ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಅಪಘಾತಗಳಿಂದ ವ್ಯಕ್ತಿಗತ ಹಾನಿ ಮಾತ್ರವಲ್ಲ, ಬದಲಾಗಿ ಅವರನ್ನು ಆಧರಿಸಿರುವ ಕುಟುಂಬಗಳೂ ಬೀದಿ ಪಾಲಾಗುತ್ತವೆ. ಅಪಘಾತ ರಹಿತ ಚಾಲನೆ ಪ್ರತಿಯೊಬ್ಬ ಚಾಲಕನ ಗುರಿಯಾಗಿರಬೇಕೆಂದು ಕಿವಿಮಾತು ಹೇಳಿದರು.ವಾಹನ ಚಾಲನೆ ಮೋಜು ಹಾಗೂ ಮನರಂಜನೆಯಲ್ಲ. ಅತಿಯಾದ ವೇಗವೇ ಅಪಘಾತಗಳಿಗೆ ಕಾರಣ ಎನ್ನುವ ಅರಿವಿದ್ದರೂ ಬಹುತೇಕ ಚಾಲಕರು ವೇಗದ ಚಾಲನೆಗೆ ಮುಂದಾಗುತ್ತಾರೆ. ರಸ್ತೆಗಳ ಸೂಚನಾ ಫಲಕಗಳಲ್ಲಿ ಅಳವಡಿಸಿರುವ ವೇಗಮಿತಿ ನೀತಿಯನ್ನು ಪಾಲಿಸಿ. ೧೦೦ರಲ್ಲಿ ಹೋಗಬೇಡಿ, ೧೦೮ ರಲ್ಲಿ ಬರಬೇಡಿ. ವಾಹನ ಚಾಲನೆಯ ವೇಳೆ ನಿಗದಿತ ಸ್ಥಳ ತಲುಪಲು ಅವಸರ ಬೇಡ. ವಾಹನ ಚಾಲನೆಯ ವೇಳೆ ಯಾವುದೇ ಕಾರಣಕ್ಕೂ ಮೊಬೈಲ್ ಬಳಕೆ ಬೇಡ. ನಿಮ್ಮೊಂದಿಗೆ ನಿಮ್ಮನ್ನು ಅಶ್ರಯಿಸಿರುವ ಕುಟುಂಬವಿರುತ್ತದೆ ಎನ್ನು ಪ್ರಜ್ಞೆ ಪ್ರತಿಯೊಬ್ಬರಲ್ಲಿಯೂ ಜಾಗೃತವಾಗಿರಬೇಕು ಎಂದರು.
ಪಟ್ಟಣ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕಿ ಸುಮಾರಾಣಿ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಜ್ಯ ರಸ್ತೆ ಸಾರಿಗೆ ಇಲಾಖೆಯ ವಿಭಾಗೀಯ ಅಧಿಕಾರಿ ಚಿನ್ನ ಚುಂಚಯ್ಯ, ಕೆ.ಆರ್.ಪೇಟೆ ಬಸ್ ಡಿಪೋ ಮ್ಯಾನೇಜರ್ ಉಮಾ ಮಹೇಶ್ವರಿ ಇದ್ದರು.