18 ವರ್ಷದೊಳಗಿನ ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆಯಲು ಪೋಕ್ಸೊ ಕಾಯ್ದೆ ಜಾರಿ

ಗಂಗಾವತಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ ಹಾಗೂ ಇತರ ಅಪರಾಧ ತಡೆಗಟ್ಟಲು ಮಕ್ಕಳ ಹಕ್ಕು,ಕಾನೂನು ಮತ್ತು ಸುರಕ್ಷತೆ ಕುರಿತು ಗ್ರಾಮ ಮಟ್ಟದಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತೆ ಯಮನಮ್ಮ ಹೇಳಿದರು.

ಗಂಗಾವತಿ ತಾಲೂಕಿನ ವಡ್ಡರಹಟ್ಟಿಯ ಕೆಎಲ್‌ಇ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಕೆಎಲ್‌ಇ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಮೇಲಿನ ದೌರ್ಜನ್ಯ ತಡೆಗಾಗಿ ಜನಸಂಪರ್ಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

18 ವರ್ಷದೊಳಗಿನ ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆಯಲು ಪೋಕ್ಸೊ ಕಾಯ್ದೆ ಜಾರಿಯಲ್ಲಿದ್ದು, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುವುದು, ಪ್ರಚೋದಿಸುವುದು, ಸಹಾಯ ಮಾಡುವುದು ಅಥವಾ ಅಂತಹ ಕೃತ್ಯಕ್ಕೆ ಪ್ರಯತ್ನಿಸುವುದು ಕೂಡ ಶಿಕ್ಷಾರ್ಹ ಅಪರಾಧವಾಗಿದೆ ಎಂದು ತಿಳಿಸಿದರು.

ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಎಎಸ್‌ಐ ಚಂದಪ್ಪ ಪೊಲೀಸ್ ಠಾಣೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಕ್ಕಳ ವಿಶೇಷ ಪೊಲೀಸ್ ಘಟಕದ ಕಾರ್ಯವೈಖರಿ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ಕೆಎಲ್‌ಇ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಮಾನಸ ವಹಿಸಿದ್ದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಸನ್ನ, ನಾಗರತ್ನ, ಚೈತ್ರ, ಶರಣಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಹಶಿಕ್ಷಕ ಚಂದ್ರಶೇಖರಪ್ಪ ನಿರೂಪಿಸಿ ವಂದಿಸಿದರು.