ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು
ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯದ ಅರಿವನ್ನು ಮೂಡಿಸುವ ಸಲುವಾಗಿ ಜು.೩೦ಕ್ಕೆ ಕುಂತೂರು ಸಕ್ಕರೆ ಕಾರ್ಖಾನೆ ಬಳಿ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಡಗಲಪುರ ನಾಗರಾಜು ಮಾಹಿತಿ ನೀಡಿದರು.ಪಟ್ಟಣದ ಪ್ರವಾಸಿ ಮಂದಿರದ ಬಳಿ ಗುರುವಾರ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಕ್ಕರೆ ಕಾರ್ಖಾನೆಯವರು ಕಬ್ಬು ಬೆಳೆಗಾರರಿಗೆ ಮೋಸ ಮಾಡುತ್ತಿದ್ದಾರೆ. ಕಬ್ಬಿನ ಬಾಕಿ ಹಣವನ್ನು ಇನ್ನೂ ರೈತರಿಗೆ ಪಾವತಿಸಿಲ್ಲ, ಮೊಲಾಸಿಸ್ ಹಾಗೂ ಈಥೇನಲ್ ಸೇರಿದಂತೆ ಕಬ್ಬಿನ ಉಪ ಉತ್ಪನ್ನಗಳ ಲಾಭವನ್ನು ರೈತರಿಗೆ ನೀಡುತ್ತಿಲ್ಲ. ಬೇಕೆಂತಲೇ ಇದನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದೇವೆ ಎಂದು ಲೆಕ್ಕ ತೋರಿಸಿ ಸರ್ಕಾರಕ್ಕೂ ವಂಚನೆ ಮಾಡಲಾಗುತ್ತಿದೆ. ಕಳೆದ ವರ್ಷ ನಿಗದಿ ಮಾಡಿದ್ದ ಹೆಚ್ಚುವರಿ ಹಣ ಪ್ರತಿ ೧೫೦ ರು.ಗಳನ್ನು ಇನ್ನೂ ಪಾವತಿಸಿಲ್ಲ. ಸರ್ಕಾರದೊಂದಿಗಿನ ದ್ವಿಪಕ್ಷೀಯ ಒಪ್ಪಂದ ಪತ್ರವನ್ನು ಜಾರಿ ಮಾಡದೆ ವಂಚನೆ ಮಾಡುತ್ತಿದ್ದಾರೆ. ಸಕ್ಕರೆ ಇಳುವರಿಯನ್ನು ಕಡಿಮೆ ತೋರಿಸಿ ಮೋಸ ಮಾಡಲಾಗುತ್ತಿದೆ. ಕಬ್ಬಿನ ತೂಕದಲ್ಲೂ ವಂಚಿಸಲಾಗುತ್ತಿದೆ. ಕಾರ್ಖಾನೆಯ ಮುಂಭಾಗ ತೂಕದ ಯಂತ್ರವನ್ನು ಸ್ಥಾಪನೆ ಮಾಡಬೇಕು, ಕಬ್ಬು ತೂಕ ಮಾಡಿ, ಕೂಡಲೇ ರೈತರಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಬೇಕು. ಕಬ್ಬು ಕಟಾವು ನೆಪದಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದನ್ನು ನಿಲ್ಲಿಸಬೇಕು, ವಿದ್ಯುತ್ ಅವಘಡಗಳಿಂದ ಸುಟ್ಟ ಕಬ್ಬಿಗೆ ಶೇ.೨೫ ರಷ್ಟು ಕಡಿತ ನಿಲ್ಲಿಸಬೇಕು ಇದಕ್ಕೂ ಎಫ್‌ಆರ್‌ಪಿ ಹಣವನ್ನು ಪೂರ್ತಿಯಾಗಿ ನೀಡಬೇಕು. ಈ ಬಾರಿ ಕಬ್ಬು ಉತ್ಪಾದನೆ ಕಡಿಮೆ ಇದೆ. ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ. ಬೇರೆಬೇರೆ ಜಿಲ್ಲೆ ರಾಜ್ಯಗಳಿಂದ ಕಬ್ಬಿಗೆ ಬೇಡಿಕೆ ಹೆಚ್ಚಿದೆ. ಎಲ್ಲರೂ ಕಬ್ಬು ಖರೀದಿಸಲು ಮುಂದಾಗುತ್ತಿದ್ದಾರೆ. ಎಕೆರೆಗೆ ೮ ಸಾವಿರ ರು. ಪ್ರೋತ್ಸಾಹ ಧನವನ್ನು ನೀಡಲು ಮುಂದಾಗುತ್ತಿದ್ದಾರೆ. ಜು.೩೧ ರಂದು ಕಬ್ಬಿನ ಕಾರ್ಖಾನೆಗಳನ್ನು ತೆರೆಯುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡುವವರೆಗೂ ರೈತರು ಸಾವಧಾನದಿಂದ ಇರಬೇಕು, ಯಾವುದೇ ಕಾರಣಕ್ಕೂ ಕಬ್ಬು ಕಟಾವು ಮಾಡಬಾರದು, ಈ ಜಾಗೃತಿಯನ್ನು ಮೂಡಿಸುವ ಸಲುವಾಗಿ ನಾವು ಪ್ರತಿ ರೈತರಿಗೂ ಈ ಸಂದೇಶ ತಲುಪಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಘದ ವತಿಯಿಂದ ಜು.೩೦ ಕ್ಕೆ ಕುಂತೂರಿನ ಸಕ್ಕರೆ ಕಾರ್ಖಾನೆ ಬಳಿ ಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ. ಇದಕ್ಕೆ ಕಬ್ಬು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.ತಾಲೂಕು ಅಧ್ಯಕ್ಷ ಗೌಡಹಳ್ಳಿ ಷಡಕ್ಷರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೆಲ್ಲಹಳ್ಳಿ ಚಂದ್ರಶೇಖರಮೂರ್ತಿ, ಮೂಕಹಳ್ಳಿ ಮಹದೇವಸ್ವಾಮಿ, ಕಿನಕಹಳ್ಳಿ ಬಸವಣ್ಣ, ಉಡಿಗಾಲ ರೇವಣ್ಣ, ಮೂಡ್ಲುಪುರ ಶಿವಮೂರ್ತಿ, ಮೂಕಹಳ್ಳಿ ಶಿವಕುಮಾರ್, ಬಾಲು, ಹೊಂಗನೂರು ದೊರೆಸ್ವಾಮಿ ಬಸವಲಿಂಗಪ್ಪ, ನಾಗರಾಜ್, ದೇವರಾಜ್, ನೀಲಕಂಠಪ್ಪ, ಸಿದ್ದೇಶ್ ಸೇರಿದಂತೆ ಹಲವರು ಇದ್ದರು.