ಸಾರಾಂಶ
ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವುದು ದುರ್ದೈವದ ಸಂಗತಿಯಾಗಿದೆ.
ಕುಮಟಾ: ಇತ್ತೀಚಿನ ದಿನಗಳಲ್ಲಿ ಮಾದಕ ವ್ಯಸನಗಳಿಗೆ ಅತಿ ಸಣ್ಣ ವಯಸ್ಸಿನಲ್ಲಿ ದಾಸರಾಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ತಾಲೂಕು ಆಸ್ಪತ್ರೆ ಆಪ್ತ ಸಮಾಲೋಚಕ ಪ್ರದೀಪ ನಾಯ್ಕ ಹೇಳಿದರು.ಇಲ್ಲಿನ ಡಾ.ಎ.ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಯೂನಿಯನ್ ವಿಭಾಗ ಹಾಗೂ ಎನ್‌ಎಸ್‌ಎಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಉಪನ್ಯಾಸ ಮಾಡಿದರು.
ಶಾಲಾ ಕಾಲೇಜು ಹಂತದಲ್ಲೇ ದುಶ್ಚಟಗಳಿಂದ ಅನೇಕ ವಿದ್ಯಾರ್ಥಿಗಳು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಈ ಬಗ್ಗೆ ವಿದ್ಯಾರ್ಥಿ ದೆಸೆಯಿಂದಲೇ ಜಾಗೃತಿಯ ಅಗತ್ಯವಿದೆ. ಆರೋಗ್ಯ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ ಉತ್ತರ ಕನ್ನಡ ಜಿಲ್ಲೆಯೂ ಹೆಚ್ಚು ದುರ್ವ್ಯಸನಿಗಳ ಸಂಖ್ಯಾ ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದು ಅತ್ಯಂತ ಬೇಸರದ ಸಂಗತಿ. ಈ ಕುರಿತು ನಾವೆಲ್ಲರೂ ಗಂಭೀರವಾಗಿ ಆಲೋಚಿಸುವ ಮೂಲಕ ಶಾಲಾ-ಕಾಲೇಜುಗಳಲ್ಲಿ ಹಾಗೂ ಸಮಾಜದಿಂದ ಇದನ್ನು ನಿರ್ಮೂಲನೆ ಮಾಡಲು ಪಣತೊಡಬೇಕು. ಆರೋಗ್ಯ ಇಲಾಖೆ ಕಾಲಕಾಲಕ್ಕೆ ನಶಾಮುಕ್ತಿಗಾಗಿ ಆಯೋಜಿಸುವ ಕಾರ್ಯಕ್ರಮಗಳನ್ನು ಜನರಿಗೆ ವಿದ್ಯಾರ್ಥಿಗಳಿಗೆ ತಲುಪಿಸಬೇಕು. ಎಲ್ಲರೂ ನಶಾ ಮುಕ್ತರಾಗಿ ಮುನ್ನಡೆಯಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎನ್.ಡಿ.ನಾಯ್ಕ ಮಾತನಾಡಿ, ನಮ್ಮ ಮಹಾವಿದ್ಯಾಲಯದ ಆವರಣವನ್ನು ತಂಬಾಕು ನಿಷೇಧ ವಲಯವನ್ನಾಗಿ ಘೋಷಿಸಿದ್ದು ಮಾತ್ರವಲ್ಲದೆ ಕಾಲಕಾಲಕ್ಕೆ ಈ ಕುರಿತು ವಿದ್ಯಾರ್ಥಿಗಳಲ್ಲಿ ದುಶ್ಚಟಗಳ ಕುರಿತು ಅರಿವು ಮೂಡಿಸುವ ಉಪನ್ಯಾಸ ಕಾರ್ಯಕ್ರಮಗಳು ಜಾಗೃತಿ ಕಾರ್ಯಕ್ರಮಗಳು ಜಾಗೃತಿ ಜಾಥಾ ಮೊದಲಾದವುಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ವಿದ್ಯಾರ್ಥಿಗಳು ಜಾಗೃತರಾಗಿ ದುಶ್ಚಟಗಳಿಂದ ದೂರವಾಗುವುದರ ಮೂಲಕ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಮುನ್ನುಡಿ ಬರೆಯಬೇಕು ಎಂದರು.
ಯೂನಿಯನ್ ಕಾರ್ಯಾಧ್ಯಕ್ಷ ಡಾ ಅರವಿಂದ ನಾಯಕ ವೇದಿಕೆಯಲ್ಲಿದ್ದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ಮಂಜುನಾಥ ವೆರ್ಣೇಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಪರಿಚಯಿಸಿ, ಸ್ವಾಗತಿಸಿದರು. ಪ್ರಜ್ಞಾ ಭಟ್ ವಂದಿಸಿದರು. ನಶಾ ಮುಕ್ತ ಸಮಾಜದ ನಿರ್ಮಾಣಕ್ಕೆ ಪ್ರತಿಜ್ಞಾವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಯಿತು.