ಸಾರಾಂಶ
ನಮ್ಮ ಹಳೇ ಶೈಲಿಯ ಸಾಂಸ್ಕೃತಿಕ ಚಟುವಟಿಕೆಗಳು, ಸಂಗೀತ, ಸಾಹಿತ್ಯ, ಸಂಸ್ಕೃತಿ, ಜಾನಪದ ಕಲೆಗಳನ್ನು ಪೋಷಿಸಿ ಬೆಳೆಸಬೇಕಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ದಾವಣಗೆರೆಯಲ್ಲಿ ಹೇಳಿದ್ದಾರೆ.
- ರಾಜ್ಯೋತ್ಸವ ಪ್ರಯುಕ್ತ ಸುವರ್ಣ ಸಂಭ್ರಮ ಕಾರ್ಯಕ್ರಮ - - - ದಾವಣಗೆರೆ: ನಮ್ಮ ಹಳೇ ಶೈಲಿಯ ಸಾಂಸ್ಕೃತಿಕ ಚಟುವಟಿಕೆಗಳು, ಸಂಗೀತ, ಸಾಹಿತ್ಯ, ಸಂಸ್ಕೃತಿ, ಜಾನಪದ ಕಲೆಗಳನ್ನು ಪೋಷಿಸಿ ಬೆಳೆಸಬೇಕಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹೇಳಿದರು.
ಇಲ್ಲಿಯ ಗ್ಲಾಸ್ ಹೌಸ್‌ನಲ್ಲಿ ಜಿಲ್ಲಾಡಳಿತ ವತಿಯಿಂದ 69ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ 2024ರ ನವೆಂಬರ್ ತಿಂಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಸುವರ್ಣ ಸಂಭ್ರಮ ಸಮಾರಂಭದಲ್ಲಿ ಅವರು ಮಾತನಾಡಿದರು.ಇಂದಿನ ಮಕ್ಕಳಿಗೆ, ಯುವಕರಿಗೆ ಹಳೇ ಕಲೆಗಳ ಬಗ್ಗೆ ತಿಳಿಸಬೇಕು. ಇದರಿಂದ ನಮ್ಮ ದೇಶ, ನಾಡಿನ ಪುರಾತನ ಕಲಾ ಸಂಸ್ಕೃತಿ ಉಳಿಸಿ, ಬೆಳೆಸಲು ಸಾಧ್ಯ. ಇಂತಹ ಕಲೆಗಳನ್ನು ಪ್ರದರ್ಶಿಸಲು ಜಿಲ್ಲಾಡಳಿತ ರಾಜ್ಯೋತ್ಸವ ಅಂಗವಾಗಿ ಸುವರ್ಣ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ. ನವೆಂಬರ್ ತಿಂಗಳಲ್ಲಿಯೇ ಇಂತಹ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಶ್ಲಾಘನೀಯ ಎಂದರು.
ಮಹಾಪೌರ ಕೆ.ಚಮನ್ ಸಾಬ್ ಮಾತನಾಡಿ, ಇಡೀ ಏಷ್ಯಾ ಖಂಡದಲ್ಲಿಯೇ ನಂಬರ್-1 ಆಗಿ ಗುರುತಿಸುವಂತಹ ಗಾಜಿನ ಮನೆಯನ್ನು ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಶ್ರಮದಿಂದ ನಿರ್ಮಾಣವಾಗಿದೆ. ಜಿಲ್ಲಾಡಳಿತದಿಂದ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಸುವರ್ಣ ಸಂಭ್ರಮ ಕಾರ್ಯಕ್ರಮಗಳು ನಡೆಯುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ ಎಂದರು.ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ, ತಹಸೀಲ್ದಾರ್ ಡಾ.ಅಶ್ವಥ್, ಉಪ ಮಹಾಪೌರ ಸೋಗಿ ಶಾಂತಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಹಾಜರಿದ್ದರು.
ನಗರದ ಚೇತನ್ ಕುಮಾರ್ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ, ಇಂಚನ ಮತ್ತು ದರ್ಶನ ಅವರಿಂದ ಸ್ಯಾಕ್ಸೋಪೋನ್ ವಾದನ, ಬಾಲಿ ಜಂಬೆ ಮತ್ತು ಸಂಗಡಿಗರು ಜಂಬೆ ಝಲಕ್ ಹಾಗೂ ಕಡಬಗೆರೆ ಶ್ರೀನಿವಾಸ್ ಅವರಿಂದ ಜಾನಪದ ಜಾದೂ ಕಾರ್ಯಕ್ರಮ ನಡೆಸಿಕೊಟ್ಟರು.- - - -9ಕೆಡಿವಿಜಿ50:
ದಾವಣಗೆರೆಯ ಗ್ಲಾಸ್ ಹೌಸ್‌ನಲ್ಲಿ ನಡೆದ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಮಾತನಾಡಿದರು.