ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು ತಾಯಿಯ ಹೊಟ್ಟೆಯಲ್ಲಿರುವ ಮಗುವಿನಿಂದ ಹಿಡಿದು ಶವ ಆಗುವವರೆಗೂ ನಾವೆಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಗ್ರಾಹಕರಾಗಿದ್ದೇವೆ ಎಂದು ಶಿವಮೊಗ್ಗ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಆರ್.ಅವಿನ್ ಅಭಿಪ್ರಾಯಪಟ್ಟರು.
ಹೊಳೆಹೊನ್ನೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ಪರಿಹಾರ ಆಯೋಗ ಮತ್ತು ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಆಹಾರ ಗುಣಮಟ್ಟ ಪ್ರಾಧಿಕಾರ, ಕಾನೂನು ಮಾಪನಶಾಸ್ತ್ರ ಇಲಾಖೆ ಹಾಗೂ ಶಿವಮೊಗ್ಗದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜೊತೆಯಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ- 2023 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಲಾಭ ಮಾಡುವ ಉದ್ದೇಶದಿಂದಲೇ ಎಲ್ಲರೂ ವ್ಯಾಪಾರ, ವ್ಯವಹಾರ ಆರಂಭಿಸುತ್ತಾರೆ. ಈ ಮಧ್ಯೆ ಗ್ರಾಹಕರ ಹಕ್ಕುಗಳ ಅರಿವು ಇರುವುದು ಅಗತ್ಯ ಎಂದರು.ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ರಾಜು.ಹೆಚ್.ಎಸ್ ಮಾತನಾಡಿ, ಅಳತೆ ಮತ್ತು ತೂಕದಲ್ಲಿ ಹೇಗೆ ನಾವು ಎಚ್ಚರ ವಹಿಸಬೇಕು. ಉತ್ಪನ್ನವನ್ನು ಕೊಳ್ಳುವಾಗ ಅದರ ಉತ್ಪಾದಕರು, ತೂಕ, ಉತ್ಪಾದನಾ ದಿನಾಂಕ, ಬೆಲೆ ಹೀಗೆ ಅನೇಕ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂಬುದನ್ನು ತಿಳೆಸಿದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆಹಾರ ಸುರಕ್ಷತಾ ಅಧಿಕಾರಿ ಸೋಮೇಶ್ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರಾಸಾಯನಿಕ ಮುಕ್ತ, ಒಳ್ಳೆಯ ಆಹಾರಗಳನ್ನು ಹೇಗೆ ಆಯ್ದುಕೊಳ್ಳಬೇಕು ಮತ್ತು ಹೇಗೆ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿಸಿಕೊಟ್ಟರು.ಮುಖ್ಯ ಅತಿಥಿ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಚಾಲಕ ಎಂ.ಎಂ. ಜಯಸ್ವಾಮಿ ಮಾತನಾಡಿ, ಗ್ರಾಹಕರು ತಮಗೆ ಅನ್ಯಾಯವಾದದ್ದು ಅರಿವಿಗೆ ಬಂದೊಡನೆ ಹೇಗೆ ಕಾನೂನಿನ ಮೊರೆ ಹೋಗಬೇಕು ಎಂಬುದನ್ನು ವಿವರಿಸಿದರು.
ಪ್ರಾಂಶುಪಾಲರಾದ ಡಾ.ಪ್ರತಿಭಾ ಕೆ.ಆರ್. ಅಧ್ಯಕ್ಷತೆ ವಹಿಸಿ, ರ್ಯಾವುದೇ ಕಾನೂನು ಇದ್ದರೂ ಅದಕ್ಕೆ ಮೊರೆಹೋಗುವ ಮುನ್ನ ಎಚ್ಚರ ವಹಿಸಬೇಕು. ಇದರಿಂದ ಸಮಯ, ಹಣದ ತೊಂದರೆಗಳನ್ನು ತಡೆಗಟ್ಟಬಹುದು. ಕಾನೂನು ಮಾಡಿದರೆ ಸಾಲದು, ಅದನ್ನು ಅರಿತು ನಡೆದಾಗ ಮಾತ್ರ ಅನ್ಯಾಯ ತಡೆಗಟ್ಟಬಹುದು ಎಂದರು.ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ರವಿ, ಛಾಯಾಶ್ರೀ, ಡಾ.ಚಂದ್ರ ಶೇಕರ್, ಮಂಜುಳಾ ಮತ್ತು ಬೋಧಕ, ಬೋಧಕೇತರು ಇದ್ದರು. ರಾಷ್ಟ್ರೀಯ ಸೇವಾ ಯೋಜನೆ, ಘಟಕ-2ರ ಕಾರ್ಯಕ್ರಮಾಧಿಕಾರಿ ಡಾ.ರಾಜುನಾಯ್ಕ ಎಸ್ ಸ್ವಾಗತಿಸಿದರು. ರೇಂಜರ್ಸ್ ಘಟಕದ ಸಂಚಾಲಕ ಡಾ.ಸಂಗೀತಾ ಬಗಲಿ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನೆ, ಘಟಕ-1ರ ಕಾರ್ಯಕ್ರಮಾಧಿಕಾರಿ ರುದ್ರಮುನಿ ಎಚ್. ಕಾರ್ಯಕ್ರಮ ನಿರೂಪಣೆ ಮಾಡಿದರು.
- - --2ಎಚ್ಎಚ್ಆರ್ ಪಿ1:
ಶಿವಮೊಗ್ಗ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಾಹಕರ ದಿನ-2023 ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.