ಸಾರಾಂಶ
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕೊಡಗು ಜಿಲ್ಲಾ ಘಟಕದ ವತಿಯಿಂದ ಪೊನ್ನಂಪೇಟೆ ಸಾಯಿ ಶಂಕರ ಕಾಲೇಜಿನಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ದಿನ ಆಚರಣೆ ನಡೆಯಿತು.
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಬಾಲ್ಯದಿಂದಲೇ ಸಂಸ್ಕೃತಿ, ರಾಷ್ಟ್ರ ಭಕ್ತಿ ಯುವ ಮನಸ್ಸಿನಲ್ಲಿ ಜಾಗೃತವಾಗಬೇಕು. ಪೂರ್ವ ಇತಿಹಾಸ ಚರಿತ್ರ ನಿರ್ಮಾಣ ಮಾಡಿರುವ ಚಿಂತಕರ ಪರಿಕಲ್ಪನೆ ನನಸಾಗಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯ ಕಾರಿಣಿ ಸದಸ್ಯ ರಾಮ್ ಅಭಿಪ್ರಾಯಪಟ್ಟಿದ್ದಾರೆ.ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕೊಡಗು ಜಿಲ್ಲಾ ಘಟಕದ ವತಿಯಿಂದ ಪೊನ್ನಂಪೇಟೆ ಸಾಯಿ ಶಂಕರ ಕಾಲೇಜಿನಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ದಿನ ಆಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಭಾರತ ಸುಸಂಸ್ಕೃತ ವಿದ್ಯಾವಂತ ಪಾಂಡಿತ್ಯ ಪಡೆದ ರಾಷ್ಟ್ರವಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಅಸಂಖ್ಯಾತ ಯುವ ಪಡೆ ತನ್ನ ತಾಯಿ ಮಣ್ಣಿನ ಋಣ ತೀರಿಸಲು ತ್ಯಾಗ ಬಲಿದಾನಗಳನ್ನು ಮಾಡಿದೆ. ದೇಶಕ್ಕಾಗಿ ಮಡಿದ ನಮ್ಮ ಪೂರ್ವ ಸಹೋದರರನ್ನು ನೆನಪಿಸುವ ಮನಸ್ಸು ನಮ್ಮಲ್ಲಿ ಜಾಗೃತವಾಗಬೇಕು ಎಂದರು.
ಸ್ಥಿರ ಮನಸ್ಸಿನಿಂದ ಸಮಾಜದಲ್ಲಿ ಬರುವ ವಿವಿಧ ಸ್ಥರಗಳ ಸಮಸ್ಯೆಗಳನ್ನು ಎದುರಿಸುವ ಛಲ ಹೊಂದಿರಬೇಕಾದ ಮನಸ್ಥಿತಿ ಪ್ರಸ್ತುತ ಸಮಯಕ್ಕೆ ಮುಖ್ಯವಾಗಿದೆ. ಪಠ್ಯ ಪುಸ್ತಕದಲ್ಲಿ ಬರುವ ವಿಷಯಗಳಿಗೆ ಮಾತ್ರ ಸೀಮಿತವಾಗದೆ, ಬಾಹ್ಯ ವಿಷಯಗಳಿಗೂ ಒಲವು ತೋರುವಂತಾಗಬೇಕು ಎಂದು ಕರೆ ನೀಡಿದರು.ಎಬಿವಿಪಿ ಕೊಡಗು ಜಿಲ್ಲಾ ಪ್ರಮುಖ್ ಅಂಬಿಕ ಉತ್ತಪ್ಪ ಮಾತನಾಡಿ, ಯುವ ಸಮೂಹವು ದೇಶದ ಭದ್ರ ಬುನಾದಿ. ಇಂದಿನ ಯುವ ಪೀಳಿಗೆ ಮಾದಕ ವಸ್ತುಗಳ ವೈಸನಿಗಳಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಮಾಜ ಯುವ ಸಮೂಹವನ್ನು ನೋಡುವ ಪರಿ ವಿಭಿನ್ನವಾಗಿದೆ. ಮಾದಕ ದ್ರವ್ಯ ಉಪಯೋಗದಿಂದ ಸಮಾಜದಲ್ಲಿ ನಡೆಯುವ ಎಲ್ಲಾ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಯುವ ಸಮುದಾಯದ ಪಾತ್ರ ಗಣನೀಯವಾಗಿ ಕಾಣಿಸಿಕೊಂಡಿದೆ. ಇದಕ್ಕೆ ಅಂತ್ಯ ಹಾಡಬೇಕು. ವಿದ್ಯಾರ್ಥಿ ಜೀವನದಲ್ಲಿ ಆರಂಭಿಸಿದ ಪಿಡುಗು ಜೀವನವನ್ನೇ ಕೊನೆಗಾಣಿಸುತ್ತದೆ ಎಂದು ತಿಳಿಯಬೇಕು ಎಂದರು.ಈ ನಿಟ್ಟಿನಲ್ಲಿ ಯುವ ಸಮೂಹವು ಮಾದಕವಸ್ತುಗಳ ಉಪಯೋಗ ತ್ಯಜಿಸಬೇಕು. ಉತ್ತಮ ಬಾಂಧವ್ಯ ಸೃಷ್ಟಿ ಮಾಡಬೇಕು. ಉತ್ತಮ ಸಮಾಜ ನಿರ್ಮಾಣ ಮಾಡುವತ್ತ ಚಿಂತನೆ ನಡೆಸುವಂತಾಗಬೇಕು. ಮೊಬೈಲ್ ಬಳಕೆ ಕಡಿಮೆಗೊಳಿಸಿ ಸಾಹಿತ್ಯ, ಪತ್ರಿಕೆ ಓದು ಇನ್ನಿತರ ಹವ್ಯಾಸಗಳನ್ನು ರೂಢಿಸಿಕೊಂಡಲ್ಲಿ ಉತ್ತಮ ಆರೋಗ್ಯ ಹೊಂದಬಹುದು ಎಂದು ಹೇಳಿದರು.
ಸಾಯಿ ಶಂಕರ್ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲ ತಿಮ್ಮಯ್ಯ ಮತ್ತು ನಾರಾಯಣ್ ಹಾಜರಿದ್ದರು.