ಸಾರಾಂಶ
ಚನ್ನಪಟ್ಟಣ: ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಚರ್ಚಾ ಕೌಶಲ್ಯ, ಪ್ರಜಾಪ್ರಭುತ್ವದ ಪ್ರಕ್ರಿಯೆಗಳ ಅರಿವು ಮೂಡಿಸುವಲ್ಲಿ ಅಣಕು ಸಂಸತ್ ಅಧಿವೇಶನ ಸಹಕಾರಿಯಾಗಿದೆ ಎಂದು ಬಾಲು ಪಬ್ಲಿಕ್ ಶಾಲೆಯ ಜಂಟಿ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯಂ ಅಭಿಪ್ರಾಯಪಟ್ಟರು.ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಅಣಕು ಸಂಸತ್ ಅಧಿವೇಶನ ಉದ್ಘಾಟಿಸಿ ಮಾತನಾಡಿದ ಅವರು,
ಪ್ರಜಾಪ್ರಭುತ್ವದ ಆಶಯ, ನೀತಿ ನಿರೂಪಣೆಯಲ್ಲಿ ಸಂಸತ್ತಿನ ಪಾತ್ರ ಪ್ರಕ್ರಿಯೆಗಳ ಕುರಿತು ವಿದ್ಯಾರ್ಥಿ ದೆಸೆಯಲ್ಲಿಯೇ ಅರಿವು ಮೂಡಿಸುವುದು ಅಗತ್ಯ. ಆದ್ದರಿಂದ ವಿಧಾನಸಭಾ ಹಾಗೂ ಅಣಕು ಸಂಸತ್ ಅಧಿವೇಶನ ಆಯೋಜಿಸಲಾಗುತ್ತಿದೆ. ಇದರಿಂದ ನಮ್ಮ ಶಾಸಕಾಂಗ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ವಿದ್ಯಾರ್ಥಿಗಳಿಗೆ ಅರಿವಾಗುತ್ತದೆ ಎಂದರು.ವಿದ್ಯಾರ್ಥಿ ಹಂತದಲ್ಲೇ ನಾಯಕತ್ವ ಗುಣ ಬೆಳೆಸಿಕೊಂಡಲ್ಲಿ, ನಿಮ್ಮ ಮುಂದಿನ ಭವಿಷ್ಯ ಉತ್ತಮಗೊಳ್ಳುತ್ತದೆ. ಪಠ್ಯದ ಜತೆಯಲ್ಲಿ ಸಾಮಾಜಿಕ ಕಾರ್ಯವಿಧಾನಗಳ ಕುರಿತು ಅರಿತುಕೊಂಡಲ್ಲಿ ಅದು ಮುಂದೆ ನಿಮ್ಮ ನೆರವಿಗೆ ಬರುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯೆಯ ಜತೆಗೆ ಸಾಮಾಜಿಕ ಚಿಂತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಶಾಲೆ ಇಂಥ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಂದ ಅಧಿವೇಶನ: ಶಾಲೆಯ ೮ ಮತ್ತು ೯ನೇ ತರಗತಿಯ ವಿದ್ಯಾರ್ಥಿಗಳು ಅಣುಕು ಸಂಸತ್ ಅಧಿವೇಶನ ನಡೆಸಿಕೊಟ್ಟರು.ಸಂಸತ್ ಅಧಿವೇಶನ ಮಾದರಿಯಲ್ಲಿ ಸ್ಪೀಕರ್ ಪೀಠ, ಆಡಳಿತ ಪಕ್ಷ, ವಿರೋಧ ಪಕ್ಷಗಳ ಆಸನಗಳನ್ನು ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಪ್ರಧಾನಿ, ಸಚಿವರು, ವಿರೋಧ ಪಕ್ಷದ ನಾಯಕ, ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ಪಾತ್ರಗಳನ್ನು ನಿಭಾಯಿಸಿದರು.
ಅಣಕು ಸಂಸತ್ತಿನಲ್ಲಿ ಭಾರತೀಯ ಕೃಷಿ ಪದ್ಧತಿ, ರೈತರ ಸಮಸ್ಯೆಗೆ ಆಧುನಿಕ ಪರಿಹಾರ, ಇಂದಿನ ಶಿಕ್ಷಣ ಪದ್ಧತಿ ಹಾಗೂ ಸುಧಾರಣೆ, ನಿರುದ್ಯೋಗ ಸಮಸ್ಯೆ ಹಾಗೂ ಕೃತಕ ಬುದ್ಧಿಮತ್ತೆಯಿಂದ ತಲೆದೋರಬಹುದಾದ ಸಮಸ್ಯೆಗಳು ಹಾಗೂ ಪರಿಹಾರ, ಹೆಚ್ಚುತ್ತಿರುವ ತ್ಯಾಜ್ಯ ವಸ್ತುಗಳ ನಿರ್ವಹಣೆ ಹಾಗೂ ಅದರ ಸದ್ಬಳಕೆ, ರೈಲ್ವೆ ಕ್ಷೇತ್ರದಲ್ಲಿ ತಂತ್ರಜ್ಞಾನದ ಪ್ರಗತಿ, ಒಳಜಾತಿ ಮೀಸಲಾತಿ ಅನಿವಾರ್ಯತೆ ಹಾಗೂ ಪ್ರಯೋಜನಗಳು, ಆರೋಗ್ಯದಲ್ಲಿ ಸುಧಾರಣೆ ವಿಶೇಷವಾಗಿ ಹೆಣ್ಣು ಮಕ್ಕಳ ಸರ್ವಿಕಲ್ ಕ್ಯಾನ್ಸರ್‌ಗೆ ಲಸಿಕೆಯ ಅವಶ್ಯಕತೆ ಸೇರಿದಂತೆ ಪ್ರಮುಖ ಅಂಶಗಳ ಕುರಿತು ಸ್ಥೂಲವಾಗಿ ಚರ್ಚೆ ನಡೆಸಲಾಯಿತು.ಶಾಲೆಯ ಜಂಟಿ ಕಾರ್ಯದರ್ಶಿ ವಿ. ಬಾಲಸುಬ್ರಮಣ್ಯಂ ಅಣಕು ಸಂಸತ್ತಿನ ಸಭಾಪತಿಗಳಾಗಿದ್ದರು.
ರಾಮನಗರದ ಹೋಲಿ ಕ್ರೆಸೆಂಟ್ ಇಂಗ್ಲಿಷ್ ಶಾಲೆಯ ಅಧ್ಯಕ್ಷರಾದ ಶಾಜೀಯ, ಕಾರ್ಯದರ್ಶಿ ಅಲ್ತಾಫ್ ಅಹಮದ್, ಮಾಯಗೊಂಡನಹಳ್ಳಿಯ ಶಾಲೆಯ ಕಾರ್ಯದರ್ಶಿ ಬಾಲಗಂಗಾಧರ ಮೂರ್ತಿ, ಬಾಲು ಪಬ್ಲಿಕ್ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ವಿ.ವೆಂಕಟಸುಬ್ಬಯ್ಯ ಶೆಟ್ಟಿ, ಶಾಲೆಯ ಧರ್ಮದರ್ಶಿ ಕವಿತಾ ಬಾಲಸುಬ್ರಹ್ಮಣ್ಯಂ, ಮುಖ್ಯೋಪಾಧ್ಯಾಯನಿ ಕವಿತಾ ಎಸ್., ಆಡಳಿತಾಧಿಕಾರಿ ಮೆಹರ್ ಸುಲ್ತಾನ, ಶಾಲೆ ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.ಪೊಟೋ೧೬ಸಿಪಿಟಿ೪: ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಅಣುಕು ಸಂಸತ್ ಅಧಿವೇಶನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು.