ಸಾರಾಂಶ
ದೊಡ್ಡಬಳ್ಳಾಪುರ: ನಾಗರಿಕರು, ಯುವಜನತೆ ಜವಾಬ್ದಾರಿಯಿಂದ ಅರಣ್ಯವನ್ನು ಸಂರಕ್ಷಿಸಬೇಕು. ಯುವಕರು ಚಾರಣ ಮಾಡುವ ಸಮಯದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ವಲಯ ಅರಣ್ಯಾಧಿಕಾರಿ ಹಂಸವಿ ತಿಳಿಸಿದರು.
ದೊಡ್ಡಬಳ್ಳಾಪುರ: ನಾಗರಿಕರು, ಯುವಜನತೆ ಜವಾಬ್ದಾರಿಯಿಂದ ಅರಣ್ಯವನ್ನು ಸಂರಕ್ಷಿಸಬೇಕು. ಯುವಕರು ಚಾರಣ ಮಾಡುವ ಸಮಯದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ವಲಯ ಅರಣ್ಯಾಧಿಕಾರಿ ಹಂಸವಿ ತಿಳಿಸಿದರು.
ತಾಲೂಕಿನ ಚೀಲೇನಳ್ಳಿ ಅರಣ್ಯ ಪ್ರದೇಶದಲ್ಲಿ ಯುವ ಸಂಚಲನ ಚಾರಿಟಬಲ್ ಟ್ರಸ್ಟ್, ದೊಡ್ಡಬಳ್ಳಾಪುರ ವಲಯ ಅರಣ್ಯ ಇಲಾಖೆ ಹಾಗೂ ಎಸ್ ಜೆ ಆರ್ ಸಿ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಹುಲುಕುಡಿ ಬೆಟ್ಟದ ಚಾರಣ ಹಾಗೂ ನೇರ ಬೀಜ ಬಿತ್ತನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೀಜ ಬಿತ್ತನೆಯನ್ನು 8 ರಿಂದ 10 ಎಕರೆ ಅರಣ್ಯ ಪ್ರದೇಶದಲ್ಲಿ 16 ಬಗೆಯ ವೈವಿಧ್ಯವುಳ್ಳ ಅಂಕೋಲೆ, ತಪ್ಸಿ, ಹಿಪ್ಪೆ, ಮಡ್ಡಿಮರ, ಸೀತಾಪಲ, ತಾರೆ, ಕಿರು ಬಿದಿರು, ಕಕ್ಕೆ, ಬಿಕ್ಕೆ, ಬಿಲ್ವರ, ಬೂರಗ, ಗೋಣಿ, ಬಸರೆ, ಅಮಟೆ, ಬಿಳಿದಾಳೆ, ಹಲಸು ಬೀಜಗಳನ್ನು ನೆಡುವ ಕುರಿತು ತಿಳಿಸಿ, ಅರಣ್ಯ ಇಲಾಖೆಯ ಮಹತ್ವ ಮತ್ತು ಅರಣ್ಯ ಸಂರಕ್ಷಣೆಯಲ್ಲಿ ಇಲಾಖೆಯ ಪಾತ್ರವನ್ನು ವಿವರಿಸಿದರು.
ಟ್ರಸ್ಟ್ ಅಧ್ಯಕ್ಷ ಚಿದಾನಂದಮೂರ್ತಿ ಮಾತನಾಡಿ, ತಂಡ ಹಲವಾರು ವರ್ಷಗಳಿಂದ ದೊಡ್ಡಬಳ್ಳಾಪುರ ಅರಣ್ಯದಲ್ಲಿ ಇಲಾಖೆಯು ನೀಲಗಿರಿ ತೆರವುಗೊಳಿಸಿದ ಜಾಗದಲ್ಲಿ ಪರ್ಯಾಯ ಅರಣ್ಯೀಕರಣವನ್ನು ಇಲಾಖೆ ಹಾಗೂ ಕಾಲೇಜುಗಳ ಸಹಯೋಗದೊಂದಿಗೆ ಆಯೋಜಿಸುತ್ತಾ ಬಂದಿದೆ. ಜೊತೆಗೆ ಈ ಮಾದರಿಯಲ್ಲಿ ಬಿತ್ತಿದ ಬೀಜದಲ್ಲಿ ಶೇ.90ರಷ್ಟು ಉತ್ತಮ ಫಲಿತಾಂಶದ ಮೂಲಕ ಸಾವಿರಾರು ಮರಗಳು ಬೆಳೆದಿರುವ ಫಲವನ್ನು ಪಡೆಯಲಾಗಿದೆ. ಹುಲುಕುಡಿ ಬೆಟ್ಟದ ಇತಿಹಾಸ, ವೈವಿಧ್ಯತೆ ಹಾಗೂ ಸ್ಥಳೀಯ ಸಸ್ಯಗಳ ಮಹತ್ವವನ್ನು ಅರಿತುಕೊಳ್ಳುವುದು ಅಗತ್ಯ. ಬೀಜ ಬಿತ್ತನೆಗೆ ತಂದಿರುವ 16 ಬಗೆಯ ಬೀಜಗಳ ಬಗ್ಗೆ ತಿಳಿದು, ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವದ ಬಗ್ಗೆ ಸಂವಾದ ನಡೆಸುವಂತೆ ತಿಳಿಸಿದರು.ಕಾಲೇಜಿನ ಪ್ರಾಂಶುಪಾಲ ಕಾಂತರಾಜು ಮಾತನಾಡಿ, ಕಾಲೇಜಿನ ಎನ್ನೆಸ್ಸೆಸ್ ಹಾಗೂ ಎಕೋ ಕ್ಲಬ್ ಸ್ವಯಂಸೇವಕರು ತಮ್ಮ ಪರಿಸರ ಕಾಳಜಿ ವ್ಯಕ್ತಪಡಿಸುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.
ಅರಣ್ಯ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿಗಳಾದ ಲಕ್ಷ್ಮೀ, ಬಾಲಶಂಕರ್, ನಿಂಗಪ್ಪ ಜವಲಗಟ್ಟಿ, ಕಾಲೇಜಿನ ಎನ್.ಎಸ್.ಎಸ್ ಸಂಚಾಲಕರಾದ ಮಮತಾ ಸಾಲಿಮಟ್, ಉದಯ್ ಹಾಗೂ ಹಳೆಯ ವಿದ್ಯಾರ್ಥಿಗಳು ಮತ್ತು ಟ್ರಸ್ಟ್‌ನ ಪದಾಧಿಕಾರಿಗಳಾದ ನವೀನ್, ಕಿರಣ್ ಹಾಜರಿದ್ದರು.7ಕೆಡಿಬಿಪಿ2-
ದೊಡ್ಡಬಳ್ಳಾಪುರದ ಯುವ ಸಂಚಲನ ಚಾರಿಟಬಲ್ ಟ್ರಸ್ಟ್, ದೊಡ್ಡಬಳ್ಳಾಪುರ ವಲಯ ಅರಣ್ಯ ಇಲಾಖೆ ವತಿಯಿಂದ ಹುಲುಕುಡಿ ಬೆಟ್ಟ ಚಾರಣ ಮತ್ತು ಚೀಲೇನಳ್ಳಿ ಅರಣ್ಯ ಪ್ರದೇಶದಲ್ಲಿ ನೇರ ಬೀಜ ಬಿತ್ತನೆ ಕಾರ್ಯಕ್ರಮ ನಡೆಯಿತು.