ಶಾಲಾ ಮಕ್ಕಳಿಗೆ ಪೋಕ್ಸೋ ಕಾಯ್ದೆ ಅರಿವು ಅವಶ್ಯ: ವಕೀಲ ಬಸವರಾಜ್

| Published : Aug 26 2024, 01:37 AM IST

ಶಾಲಾ ಮಕ್ಕಳಿಗೆ ಪೋಕ್ಸೋ ಕಾಯ್ದೆ ಅರಿವು ಅವಶ್ಯ: ವಕೀಲ ಬಸವರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ರೋಟರಿ ಪೂರ್ವ ಆಂಗ್ಲ ಶಾಲೆಯಲ್ಲಿ ಏರ್ಪಡಿಸಿದ್ದ ಮಕ್ಕಳಿಗೆ ಪೋಕ್ಸೋ ಕಾಯ್ದೆ ಹಾಗೂ ಬಾಲ್ಯ ವಿವಾಹ ತಡೆಗಟ್ಟುವ ಕಾಯ್ದೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹಾಗೂ ಪೋಷಕರಿಗೆ ಲೈಂಗಿಕ ದೌರ್ಜನ್ಯದಿಂದ ಸಂರಕ್ಷಣೆ ಪಡೆಯುವ ಕಾಯ್ದೆ 2012 (ಪೋಕ್ಸೋ) ಹಾಗೂ ಬಾಲ್ಯ ವಿವಾಹ ನಿಷೇದ ಕಾಯ್ದೆ 2006ರ ಕುರಿತು ಅರಿವು ಮೂಡಿಸುವುದು ಶಾಲಾ ಆಡಳಿತ ಮಂಡಳಿಗಳ ಹಾಗೂ ಶಿಕ್ಷಕರ ಜವಾಬ್ದಾರಿ ಎಂದು ವಕೀಲ ಬಸವರಾಜ್ ಅಭಿಪ್ರಾಯಪಟ್ಟರು.

ನಗರದ ರೋಟರಿ ಪೂರ್ವ ಆಂಗ್ಲ ಶಾಲೆಯಲ್ಲಿ ಏರ್ಪಡಿಸಿದ್ದ ಮಕ್ಕಳಿಗೆ ಪೋಕ್ಸೋ ಕಾಯ್ದೆ ಹಾಗೂ ಬಾಲ್ಯ ವಿವಾಹ ತಡೆಗಟ್ಟುವ ಕಾಯ್ದೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಅದರಲ್ಲೂ ಹದಿಹರೆಯದ ಮಕ್ಕಳಿಗೆ, ಬಂಧುಗಳು ಅಥವಾ ಶಿಕ್ಷಕರು ತಮ್ಮ ಮೈಯನ್ನು ಮುಟ್ಟುವಾಗ ಬ್ಯಾಡ್ ಟಚ್ ಮತ್ತು ಗುಡ್ ಟಚ್ ಮೂಲಕ ಮುಟ್ಟುತ್ತಾರೆಯೇ ಎಂಬುದರ ವ್ಯತ್ಯಾಸ ತಿಳಿದುಕೊಂಡಿರುವುದು ಬಹಳ ಮುಖ್ಯ. ತಮ್ಮ ತಂದೆ-ತಾಯಿ ಅಥವಾ ಸ್ವಂತ ಸಹೋದರ-ಸಹೋದರಿಯರ ಹೊರತಾಗಿ ಇತರರ ಜೊತೆಗೆ ವ್ಯವಹರಿಸುವಾಗ ಈ ಪರಿಜ್ಞಾನ ಹೊಂದಿರಬೇಕೆಂದು ತಿಳಿಸಿದರು.

ಈ ಬಗ್ಗೆ ಸೂಕ್ತ ವಿಡಿಯೋವನ್ನು ಪ್ರದರ್ಶಿಸುವುದರ ಮೂಲಕ ಮಕ್ಕಳಿಗೆ ಹಾಗೂ ಪೋಷಕರಿಗೆ ಈ ಅಂಶಗಳನ್ನು ಮನದಟ್ಟು ಮಾಡಿದರು. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಬಾಲ್ಯ ವಿವಾಹ ಪದ್ಧತಿ ಕಡಿಮೆಯಾಗುತ್ತಿದ್ದರೂ, ಕೆಲವು ಪ್ರದೇಶಗಳ ಹಾಗೂ ಕೆಲವು ತೀರಾ ಹಿಂದುಳಿದ ವರ್ಗಗಳಲ್ಲಿ ಬಾಲ್ಯ ವಿವಾಹ ಪದ್ಧತಿ ಜೀವಂತ ಇರುವುದು ಅತ್ಯಂತ ದುರದೃಷ್ಟಕರ ಸಂಗತಿ ಎನ್ನುತ್ತಾ, ಹೆಣ್ಣು ಮಕ್ಕಳು 18 ವರ್ಷಕ್ಕಿಂತ ಮುಂಚೆ ಮತ್ತು ಗಂಡು ಮಕ್ಕಳು 21 ವರ್ಷಕ್ಕಿಂತ ಮುಂಚೆ ವಿವಾಹ ಮಾಡುವುದು ಅವರ ಆರೋಗ್ಯ ಹಾಗೂ ಕಾನೂನು ದೃಷ್ಟಿಯಿಂದ ಸೂಕ್ತವಲ್ಲ ಎಂದು ಕಿವಿ ಮಾತು ಹೇಳಿದರು.

ಟ್ರಸ್ಟ್‌ನ ಉಪಾಧ್ಯಕ್ಷ ಡಾ.ಪರಮೇಶ್ವರ್ ಡಿ. ಶಿಗ್ಗಾಂವ್ ಮಾತನಾಡಿ, ಮಕ್ಕಳ ಲೈಂಗಿಕ ಶೋಷಣೆ ತಡೆಗಟ್ಟಲು ಅವರಿಗೆ ಈ ಕಾಯ್ದೆ ಅರಿವಿನ ಮಹತ್ವ ಎಷ್ಟರ ಮಟ್ಟಿಗೆ ಅವಶ್ಯಕ ಎಂಬುದನ್ನು ತಿಳಿಸುತ್ತಾ, ಶಾಲೆಯಲ್ಲಿ ಈ ಸಂಬಂಧದ ದೂರು ಪರಿಶೀಲಿಸಲು ಒಂದು ಸಮಿತಿಯನ್ನು ರಚಿಸಲಾಗುವುದು ಎಂದರು.

ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ಅರುಣ್ ದೀಕ್ಷಿತ್‍ರವರು ಸಮಾರಂಭವನ್ನು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಎಂ.ಚಂದ್ರಶೇಖರಯ್ಯ ಮಾತನಾಡಿದರು.

ರೋಟರಿ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಟ್ರಸ್ಟ್ ಖಜಾಂಚಿ ಜಿ. ವಿಜಯ್ ಕುಮಾರ್ ಹಾಗೂ ಪ್ರಾಂಶುಪಾಲ ಸೂರ್ಯನಾರಾಯಣನ್ ಮತ್ತಿತರರು ಉಪಸ್ಥಿತರಿದ್ದರು.