ಸಾರಾಂಶ
ಶಂಕರಪುರ ಜೆಎಂಜೆ ಸಭಾಂಗಣದಲ್ಲಿ ಬೆಳ್ಮಣ್ ರೋಟರಿಯ ಮುಂದಾಳತ್ವದಲ್ಲಿ ರೋಟರಿ ವಲಯ ೫ರ ೨೦೨೫-೨೬ನೇ ಸಾಲಿನ ನೂತನ ಅಧ್ಯಕ್ಷ ಕಾರ್ಯದರ್ಶಿಗಳಿಗೆ ‘ನಾವಿಕ’ ಜವಾಬ್ದಾರಿಗಳ ಅರಿವು ತರಬೇತಿ ಕಾರ್ಯಾಗಾರ ನೆರವೇರಿತು.
ಕನ್ನಡಪ್ರಭ ವಾರ್ತೆ ಕಾಪು
೧೨೦ ವರ್ಷಗಳ ಸೇವಾ ಇತಿಹಾಸ ಹೊಂದಿರುವ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ಬೆಳವಣಿಗೆಯಲ್ಲಿ ನಿರಂತರ ಬದಲಾವಣೆ ಎನ್ನುವುದು ಮೂಲಮಂತ್ರ. ಪ್ರತೀ ವರ್ಷ ಹೊಸ ನಾಯಕತ್ವದಲ್ಲಿ ಹೊಸ ಯೋಚನೆ, ಹೊಸ ಯೋಜನೆಗಳು ಸಮರ್ಥವಾಗಿ ಅನುಷ್ಠಾನಗೊಳಿಸಲು ನಾಯಕರಿಗೆ ನಿರಂತರ ತರಬೇತಿ ಅನಿವಾರ್ಯ. ರೋಟರಿಯ ಸಮರ್ಥ ನಾಯಕತ್ವಕ್ಕೆ ಜವಾಬ್ದಾರಿಗಳ ಅರಿವು ಅಗತ್ಯ ಎಂದು ರೋಟರಿ ಅ.ಜಿ.೩೧೮೦ ಇದರ ಮಾಜಿ ಗವರ್ನರ್ ಡಾ.ಭರತೇಶ್ ಆದಿರಾಜ್ ಕಾರ್ಕಳ ಹೇಳಿದರು.ಅವರು ಶಂಕರಪುರ ಜೆಎಂಜೆ ಸಭಾಂಗಣದಲ್ಲಿ ಬೆಳ್ಮಣ್ ರೋಟರಿಯ ಮುಂದಾಳತ್ವದಲ್ಲಿ ಜರುಗಿದ ರೋಟರಿ ವಲಯ ೫ರ ೨೦೨೫-೨೬ನೇ ಸಾಲಿನ ನೂತನ ಅಧ್ಯಕ್ಷ ಕಾರ್ಯದರ್ಶಿಗಳಿಗೆ ಏರ್ಪಡಿಸಿದ ‘ನಾವಿಕ’ ಜವಾಬ್ದಾರಿಗಳ ಅರಿವು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಮಣ್ ರೋಟರಿ ಅಧ್ಯಕ್ಷ ಮುರಲೀಧರ ಜೋಗಿ ವಹಿಸಿ ಸ್ವಾಗತಿಸಿದರು. ನಿಯೋಜಿತ ವಲಯ ಸಹಾಯಕ ಗವರ್ನರ್ ವಿಘ್ನೇಶ್ ಶೆಣೈ ಪ್ರಾಸ್ತಾವಿಕ ಮಾತುಗಳಲ್ಲಿ ಕಾರ್ಯಾಗಾರದ ಉದ್ದೇಶ, ನೂತನ ವರ್ಷದ ಯೋಜನೆ ಮತ್ತು ಆಶಯಗಳ ಬಗ್ಗೆ ಮಾಹಿತಿ ನೀಡಿದರು. ವಲಯ ತರಬೇತುದಾರ ಶೈಲೇಂದ್ರ ರಾವ್, ವಲಯ ಸೇನಾನಿ ಸುರೇಶ್ ನಾಯಕ್ ಶುಭ ಹಾರೈಸಿದರು. ವಿವಿಧ ವಿಷಯಗಳ ತರಬೇತುದಾರರಾದ ಮೋಹನದಾಸ್ ಪೈ, ಅಶೋಕ್ ಕುಮಾರ್ ಶೆಟ್ಟಿ, ಅಮಿತ್ ಅರವಿಂದ್, ಪ್ರಸನ್ನ ಕೆ.ಬಿ., ಅಲೆನ್ ವಿನಯ್ ಲೂವಿಸ್, ನೂತನ ಅಧ್ಯಕ್ಷ ಕಾರ್ಯದರ್ಶಿಗಳ ಕರ್ತವ್ಯ, ನಿರ್ವಹಣೆ, ಕ್ರಿಯಾಶೀಲತೆಯ ಬಗ್ಗೆ ಮಾಹಿತಿ ನೀಡಿದರು.ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರೋಟರಿ ಮಾಜಿ ಸಹಾಯಕ ಗವರ್ನರ್ ಕೆ.ಸತ್ಯೇಂದ್ರ ಪೈ ತರಬೇತಿ ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು.ರೋಟರಿ ಕಾರ್ಯದರ್ಶಿ ರಾಜೇಶ್ ಸಾಲಿಯಾನ್ ವೇದಿಕೆಯಲ್ಲಿದರು. ವಲಯದ ನೂತನ ಅಧ್ಯಕ್ಷ, ಕಾರ್ಯದರ್ಶಿಗಳು, ಮಾಜಿ ಸಹಾಯಕ ಗವರ್ನರ್‌ಗಳು ಉಪಸ್ಥಿತರಿದ್ದರು. ಮರ್‍ವಿನ್ ಮೆಂಡೋನ್ಸಾ ನಿರೂಪಿಸಿದರು. ನಿಯೋಜಿತ ವಲಯ ಕಾರ್ಯದರ್ಶಿ ಆಲ್ವಿನ್ ನೇರಿ ಪಿಂಟೊ ವಂದಿಸಿದರು.