ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತಹ ವಿಜ್ಞಾನದ ಜಾಗೃತಿ ಅಗತ್ಯ: ಡಾ.ವಿಜಯಲಕ್ಷ್ಮಿ

| Published : Feb 08 2025, 12:30 AM IST

ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತಹ ವಿಜ್ಞಾನದ ಜಾಗೃತಿ ಅಗತ್ಯ: ಡಾ.ವಿಜಯಲಕ್ಷ್ಮಿ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕ ಸಮಾಜದಲ್ಲಿ ತ್ವರಿತಗತಿಯಲ್ಲಿ ಜೀವನ ಶೈಲಿ ಬದಲಾಗುತ್ತಿದೆ. ಇದರಿಂದಾಗಿ ಅನೇಕ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಸ್ವಸ್ಥ್ಯ ಆರೋಗ್ಯ ಕಾಯ್ದುಕೊಳ್ಳಲು ಮತ್ತು ನಿವಾರಣೆಗೆ ದೈಹಿಕ ಪರಿಶ್ರಮ ಅಗತ್ಯವಾಗಿದೆ. ಇದರೊಂದಿಗೆ ಆರೋಗ್ಯ ರಕ್ಷಣೆಗೆ ಮುಂದಾಗುವುದು ಅನಿವಾರ್ಯವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ದೈಹಿಕ ಶಿಕ್ಷಣ ಮತ್ತು ಅದಕ್ಕೆ ಸಂಬಂಧಿಸಿದಂತಹ ವಿಜ್ಞಾನದ ಜಾಗೃತಿ ಅಗತ್ಯ ಎಂದು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕಿ ಡಾ.ಎ.ಎಚ್.ಎಂ. ವಿಜಯಲಕ್ಷ್ಮಿ ತಿಳಿಸಿದರು.

ನಗರದ ಪಡುವಾರಹಳ್ಳಿಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ದೈಹಿಕ ಶಿಕ್ಷಣ ಮತ್ತು ಸಂಬಂಧಿತ ವಿಜ್ಞಾನ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಆರೋಗ್ಯಕ್ಕೆ ದೇಹದ ಚಲನವಲನ ಅಗತ್ಯವಾಗಿದೆ. ಕೈ ಮತ್ತು ಕಾಲುಗಳು ಚಲನಶೀಲವಾಗಿದ್ದರೆ, ದೇಹದ ಎಲ್ಲಾ ಅಂಗಾಂಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತವೆ. ಇದರಿಂದ ದೇಹದ ಒಳಗಿನ ಅಂಗಗಳು ಸಹ ಉತ್ತಮವಾಗಿ ಕೆಲಸ ಮಾಡಲು ಸಾಧ್ಯ ಎಂದರು.

ಆಧುನಿಕ ಸಮಾಜದಲ್ಲಿ ತ್ವರಿತಗತಿಯಲ್ಲಿ ಜೀವನ ಶೈಲಿ ಬದಲಾಗುತ್ತಿದೆ. ಇದರಿಂದಾಗಿ ಅನೇಕ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಸ್ವಸ್ಥ್ಯ ಆರೋಗ್ಯ ಕಾಯ್ದುಕೊಳ್ಳಲು ಮತ್ತು ನಿವಾರಣೆಗೆ ದೈಹಿಕ ಪರಿಶ್ರಮ ಅಗತ್ಯವಾಗಿದೆ. ಇದರೊಂದಿಗೆ ಆರೋಗ್ಯ ರಕ್ಷಣೆಗೆ ಮುಂದಾಗುವುದು ಅನಿವಾರ್ಯವಾಗಿದೆ ಎಂದರು.

ಅನಾರೋಗ್ಯಕ್ಕೆ ಕಾರಣವಾಗುತ್ತಿರುವ ಆಹಾರ ಕ್ರಮ ಬದಲಿಸಿಕೊಳ್ಳಬೇಕಿದೆ. ಬೀದಿ ಬದಿಯ ಆಹಾರಗಳು ಬಾಯಿಗೆ ರುಚಿ ಕೊಡುತ್ತವೆಯೇ ಹೊರತು, ದೇಹಕ್ಕೆ ಶಕ್ತಿಯನ್ನು ಕೊಡುವುದಿಲ್ಲ. ಇದರಿಂದ ಜಂಕ್ ಫುಡ್‌ ಗಳನ್ನು ತ್ಯಜಿಸಿ ದೇಹಕ್ಕೆ ಶಕ್ತಿಯನ್ನು ಕೊಡುವ ನೈಸರ್ಗಿಕ ಆಹಾರವನ್ನು ಸೇವಿಸಬೇಕು ಎಂದು ಅವರು ಸಲಹೆ ನೀಡಿದರು.

ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಡಾ. ಅಭಿಲಾಷ್ ಮಾತನಾಡಿ, ಮನುಷ್ಯನ ಆರೋಗ್ಯ ಕಾಪಾಡಲು ದೈಹಿಕ ಪರಿಶ್ರಮವೇ ಮುಖ್ಯವಾಗಿದೆ. ಆಹಾರ ಕ್ರಮ, ಜೀವನ ಶೈಲಿಗಳನ್ನು ಆದಷ್ಟು ಆಧುನಿಕತೆಯಿಂದ ದೂರವಿಟ್ಟು ಸಾಮಾನ್ಯರ ರೀತಿಯಲ್ಲಿ ಚಟುವಟಿಕೆಗಳ ಮೂಲಕ ಆರೋಗ್ಯ ಕಾಯ್ದುಕೊಳ್ಳಬೇಕು. ಆಗ ಮಾತ್ರ ವಿವಿಧ ರೋಗಗಳಿಂದ ದೂರವಿರಲು ಸಾಧ್ಯ ಎಂದು ತಿಳಿಸಿದರು.

ಇದೇ ವೇಳೆ ದೈಹಿಕ ಶಿಕ್ಷಣ ಮತ್ತು ಆರೋಗ್ಯ ಕುರಿತು ವಿವಿಧ ಲೇಖಕರು ಬರೆದ ಸಂಶೋಧನಾ ಗ್ರಂಥವನ್ನು ಸಮ್ಮೇಳನದ ಸ್ಮರಣ ಸಂಚಿಕೆ ರೂಪದಲ್ಲಿ ಬಿಡುಗಡೆಗೊಳಿಸಲಾಯಿತು. ಖೋಖೋ ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರ್ತಿ ಚೈತ್ರಾ ಅವರನ್ನು ಗೌರವಿಸಿ, ಕಾಲೇಜು ವತಿಯಿಂದ 5 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಯಿತು.

ಫ್ರಾನ್ಸ್ ದೇಶದ ಪ್ರೊ. ಮೊಹಮ್ಮದ್ ತಾರೇಖ್ ಮಲಾಸ್, ತಮಿಳುನಾಡಿನ ಅಳಗಪ್ಪ ವಿವಿ ದೈಹಿಕ ಶಿಕ್ಷಣ ಮತ್ತು ಆರೋಗ್ಯ ವಿಭಾಗದ ಮುಖ್ಯಸ್ಥ ಪ್ರೊ. ಮಣಿಯಳಗು, ಕಾಲೇಜಿನ ಪ್ರಾಂಶುಪಾಲ ಪ್ರೊ. ಸೋಮಣ್ಣ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಆರ್. ನಳಿನಾ, ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಎಚ್.ಬಿ. ರವಿಕುಮಾರ್, ಸಂಘಟನಾ ಕಾರ್ಯದರ್ಶಿ ಡಾ.ಬಿ. ರಮಣಿ, ಪ್ರಾಧ್ಯಾಪಕರಾದ ಡಾ. ಕೃಷ್ಣಸ್ವಾಮಿ, ಪ್ರೊ. ಸೌಮ್ಯ, ಪ್ರೊ.ಕೆ.ಎ. ತೇಜಸ್ವಿನಿ, ಡಾ. ನಿರಂಜನಬಾಬು, ಉದಯಕುಮಾರ್, ಮುತ್ತುರಾಜ್, ರವಿಶಂಕರ್ ಮೊದಲಾದವರು ಇದ್ದರು.