ರಾಮನಗರ: ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಯ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಕಾನೂನು ಜಾಗೃತಿ ಮೂಡಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ಎಂ.ಎಚ್. ಅಣ್ಣಯ್ಯನವರ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಶಾಂತಿನಿಕೇತನ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 (ಪೋಕ್ಸೋ) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಾನೂನು ಬಾಹಿರವಾಗಿ ವಿವಾಹ ವಯಸ್ಸಿಗೂ ಮುನ್ನ ಮದುವೆ ಮಾಡುವುದು ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಅಪರಾಧವಾಗಿದೆ. ಬಾಲ್ಯದಲ್ಲೇ ಮದುವೆ ಮಾಡುವುದರಿಂದ ಮಕ್ಕಳ ಭವಿಷ್ಯ ಹಾಗೂ ಕುಟುಂಬದ ಗೌರವಕ್ಕೂ ಧಕ್ಕೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕಾನೂನಿನ ಚೌಕಟ್ಟಿನಲ್ಲಿಯೇ ನಡೆದುಕೊಳ್ಳಬೇಕು ಎಂದರು.
ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿಸುವ ಬದಲು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಅವರು ಐಎಎಸ್, ಕೆಎಎಸ್ ಸೇರಿದಂತೆ ವಿವಿಧ ರೀತಿಯ ಉನ್ನತ ಹುದ್ದೆಗಳನ್ನು ಅಲಂಕರಿಸುವ ಅವಕಾಶಗಳಿರುತ್ತವೆ, ಬಾಲ್ಯದಲ್ಲಿ ವಿವಾಹ ಮಾಡಿ ಮಕ್ಕಳ ಭವಿಷ್ಯವನ್ನು ಹಾಳು ಮಾಡದೆ ಶಾಲೆ-ಕಾಲೇಜುಗಳಿಗೆ ಕಳುಹಿಸಿ ಉತ್ತಮ ಶಿಕ್ಷಣ ಕೊಡಿಸಬೇಕೆಂದು ಹೇಳಿದರು.ಪ್ರೀತಿ-ಪ್ರೇಮದ ಹೆಸರಿನಲ್ಲಿ ಮಕ್ಕಳನ್ನು ದಾರಿ ತಪ್ಪಿಸುವುದು, ಮೋಸಗೊಳಿಸುವುದು ಅಥವಾ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು ಪೋಕ್ಸೋ ಕಾಯ್ದೆಯಡಿ ಗಂಭೀರ ಅಪರಾಧವಾಗಿದೆ. ಅಪ್ರಾಪ್ತ ವಯಸ್ಸಿನ ಹುಡುಗ-ಹುಡುಗಿಯರು ಪರಸ್ಪರ ಓಡಿ ಹೋಗುವುದು ಅಥವಾ ವಿವಾಹದ ಪ್ರಯತ್ನ ನಡೆಸುವುದು ಕಾನೂನು ಬಾಹಿರವಾಗಿದ್ದು ಅಂತಹ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಪೋಷಕರು ಮಕ್ಕಳ ಭವಿಷ್ಯ ರೂಪಿಸಲು ಕಷ್ಟಪಟ್ಟು ಶ್ರಮಿಸುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಕಾನೂನುನನ್ನು ಪಾಲಿಸುವ ಮೂಲಕ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಬೇಕು. ವಾಹನ ಚಲಾಯಿಸುವವರು ಕಾನೂನುಬದ್ಧ ವಯಸ್ಸು ಪೂರ್ಣಗೊಳಿಸಿ ಚಾಲನಾ ಪರವಾನಗಿ ವಿಮೆ ಸೇರಿದಂತೆ ವಾಹನದ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಅಣ್ಣಯ್ಯನವರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಾಂತಿನಿಕೇತನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವಿಕ್ ಪ್ರಿಯತಮ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಕೆ. ಕೆಂಪಯ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲರಾದ ಸ್ಮಿತಾ ಮತ್ತಿತರರು ಉಪಸ್ಥಿತರಿದ್ದರು.
ಬಾಕ್ಸ್ ................ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ
ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸಲು ಜಿಲ್ಲೆಯ ನ್ಯಾಯಾಧೀಶರು ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಜಾಗೃತಿ ಮೂಡಿಸಿದರು.ನಗರದ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜಿ.ಲೋಕೇಶ್,
ಭಾರತೀಯ ಸಂಸ್ಕೃತಿ ವಿದ್ಯಾಪೀಠ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಿ.ಆರ್.ಸವಿತಾ, ಬೇತೇಲ್ ಪದವಿ ಪೂರ್ವ ಕಾಲೇಜಿನಲ್ಲಿ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ.ಎಂ.ನಿವೇದಿತಾ, ಯೂನಿವರ್ಸಲ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಧಾನ ನ್ಯಾಯಾಧೀಶರಾದ ಅವಿನಾಶ್ ಚಿಂದು ಹಾಗೂ ನ್ಯೂ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಅಪರ ಸಿವಿಲ್ ನ್ಯಾಯಾಧೀಶರಾದ ಸಿ.ಪುಟ್ಟರಾಜ ಕಾರ್ಯಕ್ರಮ ಉದ್ಘಾಟಿಸಿ ಅರಿವು ಮೂಡಿಸಿದರು.ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 (ಪೋಕ್ಸೋ) ಜೊತೆಗೆ ನಾಲ್ಸಾ ಸಹಾಯವಾಣಿ 15100, ಮಕ್ಕಳ ಸಹಾಯವಾಣಿ 1098, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಉಚಿತ ಕಾನೂನು ಸೇವೆಗಳ ಕುರಿತು ವಿಶೇಷವಾಗಿ ಕಾನೂನು ಅರಿವು ಮೂಡಿಸಲಾಯಿತು.27ಕೆಆರ್ ಎಂಎನ್ 3.ಜೆಪಿಜಿ
ರಾಮನಗರದ ಶಾಂತಿನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 (ಪೋಕ್ಸೋ) ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಅಣ್ಣಯ್ಯನವರ ಮಾತನಾಡಿದರು.