ಬಳ್ಳಾರಿ ವಿವಿಯಲ್ಲಿ ಪ್ರಥಮ ಚಿಕಿತ್ಸೆ ಕುರಿತು ಜಾಗೃತಿ

| Published : Jul 18 2025, 12:45 AM IST

ಸಾರಾಂಶ

ನಗರದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಜೀವ ವಿಜ್ಞಾನ ಸಭಾಂಗಣದಲ್ಲಿ ವಿದ್ಯಾರ್ಥಿ ಕಲ್ಯಾಣ ಘಟಕ ಹಾಗೂ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರಥಮ ಚಿಕಿತ್ಸೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಗರದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಜೀವ ವಿಜ್ಞಾನ ಸಭಾಂಗಣದಲ್ಲಿ ವಿದ್ಯಾರ್ಥಿ ಕಲ್ಯಾಣ ಘಟಕ ಹಾಗೂ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರಥಮ ಚಿಕಿತ್ಸೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಚಾಲನೆ ನೀಡಿ ಮಾತನಾಡಿದ ಭಾರತೀಯ ರೆಡ್ ಕ್ರಾಸ್ ಬಳ್ಳಾರಿ ಜಿಲ್ಲಾ ಶಾಖೆಯ ಎಂ.ಎ. ಶಕೀಬ್ ಜೀವ ರಕ್ಷಣೆ ಮಾಡಿಕೊಳ್ಳುವಲ್ಲಿ ಪ್ರಥಮ ಚಿಕಿತ್ಸೆ ವಹಿಸುವ ಮಹತ್ವದ ಪಾತ್ರ ಕುರಿತು ವಿವರಿಸಿದರು.

ಜೀವ ಉಳಿಸಲು, ಅನಾರೋಗ್ಯ ತಡೆಗಟ್ಟಲು ಹಾಗೂ ವೃತ್ತಿಪರ ವೈದ್ಯಕೀಯ ಸಹಾಯ ಉತ್ತೇಜಿಸಲು ಪ್ರಥಮ ಚಿಕಿತ್ಸೆ ನಿರ್ಣಾಯಕವಾಗಿದೆ. ಆಕಸ್ಮಿಕವಾಗಿ ಕಾಯಿಲೆಗಳು ಅಥವಾ ಗಾಯಗಳಿಗೆ ತಕ್ಷಣದ ಸಹಾಯದ ಮಹತ್ವ ತಿಳಿಯಬೇಕು. ಇದರಿಂದ ತುರ್ತು ಪರಿಸ್ಥಿತಿಯನ್ನು ಹತೋಟಿಗೆ ತರಬಹುದು ಎಂದು ಹೇಳಿದರು. ಇದೇ ವೇಳೆ ಪ್ರಥಮ ಚಿಕಿತ್ಸೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.

ವಿವಿ ಕುಲಸಚಿವ ನಾಗರಾಜು ಸಿ. ಮಾತನಾಡಿ, ವಿದ್ಯಾರ್ಥಿಗಳು ಪ್ರಥಮ ಚಿಕಿತ್ಸೆಯ ವಿವಿಧ ಆಯಾಮಗಳನ್ನು ಕಲಿತುಕೊಂಡು ಬೇರೆಯವರಿಗೂ ಕಲಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು.

ವಿವಿಯ ಕುಲಪತಿ ಪ್ರೊ. ಎಂ. ಮುನಿರಾಜು, ವಿದ್ಯಾರ್ಥಿಗಳು ರಕ್ತ ನೀಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ನಿರ್ದಿಷ್ಟ ಪರಿಸ್ಥಿತಿಯನ್ನು ಆಧರಿಸಿ ಪ್ರಥಮ ಚಿಕಿತ್ಸೆ ನೀಡಬೇಕು. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಪ್ರತಿಯೊಬ್ಬರು ಪ್ರಥಮ ಚಿಕಿತ್ಸೆಯ ಜ್ಞಾನ ಹೊಂದಿರಬೇಕು ಎಂದು ತಿಳಿಸಿದರು.

ವಿದ್ಯಾರ್ಥಿ ಕಲ್ಯಾಣ ಘಟಕ ನಿರ್ದೇಶಕ ಡಾ. ಶಶಿಕಾಂತ ಎಚ್. ಮಜಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.