ಸಾರಾಂಶ
ಕುಷ್ಟಗಿ: ಭ್ರೂಣಹತ್ಯೆ ಮಹಾ ಅಪರಾಧ, ಭ್ರೂಣ ಹತ್ಯೆ ನಿಲ್ಲಿಸಬೇಕು ಎಂದು ಸೀಮಂತ ಕಾರ್ಯಕ್ರಮಕ್ಕೆ ಬಂದ ಸಂಬಂಧಿಕರು ಹಾಗೂ ಅತಿಥಿಗಳಿಗೆ ಅರಿವು ಮೂಡಿಸುವ ಮೂಲಕ ಭ್ರೂಣಹತ್ಯೆ ತಡೆಗೆ ಕುಟುಂಬವೊಂದು ವಿನೂತನ ಪ್ರಯತ್ನ ನಡೆಸಿದೆ.ಹೌದು, ತಾಲೂಕಿನ ಕಡೇಕೊಪ್ಪ ಗ್ರಾಮದ ನಿವಾಸಿಯಾದ ನಿಂಗಪ್ಪ ಜಿಗೇರಿ ಎಂಬವರು ತಮ್ಮ ಪತ್ನಿ ರೇಖಾ ಅವರ ಸೀಮಂತ ಕಾರ್ಯಕ್ರಮಕ್ಕೆ ಬಂದ ಸಂಬಂಧಿಕರು, ಅತಿಥಿಗಳಿಗೆ ಈ ಕುರಿತು ಜಾಗೃತಿ ಮೂಡಿಸಿದ್ದು, ಶ್ಲಾಘನೆ ವ್ಯಕ್ತವಾಗಿದೆ.ಈ ಕುರಿತು ನಿಂಗಪ್ಪ ಜಿಗೇರಿ ಮಾತನಾಡಿ, ಇತ್ತೀಚೆಗೆ ಹಲವು ಕಡೆಗಳಲ್ಲಿ ಭ್ರೂಣ ಲಿಂಗಪತ್ತೆ ಮತ್ತು ಭ್ರೂಣಹತ್ಯೆ ಪ್ರಕರಣಗಳು ಕೇಳಿಬರುತ್ತಿವೆ. ಹುಟ್ಟಿದ ಮಗು ಗಂಡೇ ಆಗಲಿ ಹೆಣ್ಣೆ ಆಗಲಿ ನಮ್ಮ ಮಗು ಎಂದು ಜೋಪಾನ ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ ಎಂದರು.ಕಳೆದ ವರ್ಷ ನಡೆದ ವಿಧಾನಸಭೆಯ ಚುನಾವಣೆಯ ಪೂರ್ವದಲ್ಲಿ ಅವರ ಮದುವೆಯ ಸಂದರ್ಭದಲ್ಲೂ ಕಡ್ಡಾಯ ಮತದಾನದ ಕುರಿತು ಜಾಗೃತಿ ಮೂಡಿಸಿದ್ದರು. ಈಗ ಸೀಮಂತ ಕಾರ್ಯಕ್ರಮದ ಸಂದರ್ಭದಲ್ಲಿ ಭ್ರೂಣಹತ್ಯೆ ಮಾಡಬಾರದು ಎಂದು ಜಾಗೃತಿ ಮೂಡಿಸಿದ್ದಾರೆ.ಸೀಮಂತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿಯೂ ಭ್ರೂಣಹತ್ಯೆ ಮಹಾ ಅಪರಾಧ, ಭ್ರೂಣ ಹತ್ಯೆ ನಿಲ್ಲಿಸಬೇಕು ಎಂದು ಮುದ್ರಿಸಲಾಗಿದೆ.