ಸಾರಾಂಶ
ಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು, ವಿಕಲಚೇತನರಿಗೆ ಹಾಗೂ ಹಿರಿಯನಾಗರಿಕರಿಗೆ ಮತದಾನದ ಜಾಗೃತಿ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಪುತ್ತೂರು
ಹಿರಿಯ ನಾಗರಿಕರಿಗೆ ಹಾಗೂ ವಿಶೇಷಚೇತನರಿಗೆ ಮನೆಯಿಂದಲೇ ಮತಚಲಾಯಿಸುವ ವ್ಯವಸ್ಥೆಯನ್ನು ಈ ಬಾರಿಯೂ ಚುನಾವಣಾ ಆಯೋಗ ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಶೇ.೪೦ ಕ್ಕಿಂತ ಹೆಚ್ಚಿನ ಅಂಗವೈಕಲ್ಯವಿರುವ ವಿಶೇಷ ಚೇತನರ ಪಟ್ಟಿ ಈಗಾಗಲೇ ಸಿದ್ಧವಾಗಿದ್ದು ಮನೆಯಿಂದಲೇ ಮತಚಲಾಯಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಪುತ್ತೂರು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹನಮ ರೆಡ್ಡಿ ಹೇಳಿದರು.ಅವರು ಶನಿವಾರ ಪುತ್ತೂರು ತಾ.ಪಂ. ಸಭಾಂಗಣದಲ್ಲಿ ದ.ಕ. ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಸ್ವೀಪ್ ಸಮಿತಿ, ಪುತ್ತೂರು ತಾಲೂಕು ಪಂಚಾಯಿತಿ ಹಾಗೂ ವಿಕಲಚೇತನರ ಸೇವಾ ಕೇಂದ್ರದ ಸಹಯೋಗದಲ್ಲಿ ವಿಕಲಚೇತನರ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು, ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು, ವಿಕಲಚೇತನರಿಗೆ ಹಾಗೂ ಹಿರಿಯನಾಗರಿಕರಿಗೆ ಮತದಾನದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿಮ್ಮ ಕಾರ್ಯವ್ಯಾಪ್ತಿಯಲ್ಲಿನ ಎಲ್ಲ ವಿಶೇಷಚೇತನರು ಮತದಾನದಲ್ಲಿ ಪಾಲ್ಗೊಳ್ಳಬೇಕು. ಅವಶ್ಯಕ ಎಲ್ಲ ಸೌಕರ್ಯಗಳನ್ನು ಚುನಾವಣೆ ಪೂರ್ವವಾಗಿ ಈಗಾಗಲೇ ಮತಗಟ್ಟೆಗಳಲ್ಲಿ ವಿಶೇಷಚೇತನರಿಗೆ ಅನುಕೂಲಕರವಾಗಲು ರಾಂಪ್ ಇನ್ನಿತರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.ತಾಪಂ ಯೋಜನಾಧಿಕಾರಿ ಸುಕನ್ಯಾ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಬಳಿಕ ಬನ್ನಿ ಮತದಾನ ಕೇಂದ್ರಕ್ಕೆ ಎಂಬ ಕರಪತ್ರವನ್ನು ವಿತರಿಸಲಾಯಿತು. ಈ ಸಂದರ್ಭ ವಿಕಲಚೇತನರ ತಾಲೂಕು ನೋಡಲ್ ಅಧಿಕಾರಿ ವಾಣಿಶ್ರೀ, ಪುತ್ತೂರು ತಾಪಂ ಸ್ವೀಪ್ ಸಂಯೋಜಕಿ ತುಳಸಿ, ಪುತ್ತೂರು ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ನವೀನ್ ಕುಮಾರ್, ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು ಉಪಸ್ಥಿತರಿದ್ದರು.