ಶಿಕ್ಷಣಕ್ಕೆ ಪ್ರೋತ್ಸಾಹ ಜೊತೆಗೆ ಮಾನಸಿಕ ಒತ್ತಡ ಹಾಕುವುದು ಹೆಚ್ಚಾಗಿದೆ

| Published : Jul 13 2025, 01:18 AM IST

ಶಿಕ್ಷಣಕ್ಕೆ ಪ್ರೋತ್ಸಾಹ ಜೊತೆಗೆ ಮಾನಸಿಕ ಒತ್ತಡ ಹಾಕುವುದು ಹೆಚ್ಚಾಗಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಕೇವಲ ಅಂಕ ಒಡೆಯಲು ಪ್ರೇರಣೆ ನೀಡಬಾರದು. ಇದರಿಂದ ಶಿಕ್ಷಣದ ಮೌಲ್ಯ ಹೆಚ್ಚಾಗಲು ಸಾಧ್ಯವಿಲ್ಲ

ಕನ್ನಡಪ್ರಭ ವಾರ್ತೆ ಮೈಸೂರುಇಂದು ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಜೊತೆಗೆ ಮಾನಸಿಕ ಒತ್ತಡ ಹಾಕುವ ಸನ್ನಿವೇಶ ಪೋಷಕರಿಂದ ಹೆಚ್ಚಾಗುತ್ತಿದೆ. ಇದು ಸರಿಯಲ್ಲ ಎಂದು ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್ ತಿಳಿಸಿದರು.ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಗ್ರಾಮೀಣ ಶಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‌ಎಲ್‌ಎಚ್‌ ಪಿ) ಮತ್ತು ಚೈಲ್ಡ್ ಫಂಡ್ ಇಂಟರ್ ನ್ಯಾಷನಲ್ ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ಶಿಕ್ಷಣ ಪ್ರತಿ‌ ಮಗುವಿನ ಮೂಲಭೂತ ಹಕ್ಕು ಕುರಿತು ಜಾಗೃತಿ ಹಾಗೂ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.‌ಕೇವಲ ಅಂಕ ಒಡೆಯಲು ಪ್ರೇರಣೆ ನೀಡಬಾರದು. ಇದರಿಂದ ಶಿಕ್ಷಣದ ಮೌಲ್ಯ ಹೆಚ್ಚಾಗಲು ಸಾಧ್ಯವಿಲ್ಲ. ಇಂಗ್ಲಿಷ್ ಮಾಧ್ಯಮದ ವ್ಯಾಮೋಹ ಜಾಸ್ತಿಯಾಗಿದ್ದು, ಪೋಷಕರ ಆಯ್ಕೆ ಕೇವಲ ಎಂಜಿನಿಯರ್ ಮತ್ತು ಮೆಡಿಕಲ್‌ ಗಳಿಗೆ ಮಾತ್ರ ಸೀಮಿತವಾಗಿದೆ. ಈ ಮನೋಭಾವ ಬದಲಾಗಬೇಕು. ಇದರಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುದಲಿದ್ದು, ಅವರಲ್ಲಿನ ಪ್ರತಿಭೆ ನಶಿಸುತ್ತದೆ ಎಂದು ಅವರು ಎಚ್ಚರಿಸಿದರು.ಮಕ್ಕಳ ಶೈಕ್ಷಣಿಕ ಪ್ರಗತಿ ನಿಂತ ನೀರಲ್ಲ. ಹರಿಯುವ ನೀರು. ವಿದ್ಯಾರ್ಥಿಗಳು ಭವಿಷ್ಯದ ಸಾಧನಗೆ ನಿರಂತರ ಶ್ರಮ, ಪ್ರಯತ್ನ ಇರಬೇಕು. ಇದರಿಂದ ಕನಸು ನನಸು ಮಾಡಿಕೊಳ್ಳಬಹುದು. ಸಮಾಜದ ಪ್ರತಿಯೊಬ್ಬರಲ್ಲಿಯೂ ಶಿಕ್ಷಣದ ಅರಿವು ಮೂಡಬೇಕು. ಶಿಕ್ಷಣದಿಂದ ಜೀವನದಲ್ಲಿ ಬದಲಾವಣೆ ಸಾಧ್ಯ. ನಾವು 21ನೇ ಶತಮಾನದಲ್ಲಿದ್ದು, ಅಭಿವೃದ್ಧಿ ಪಥದಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ ಅಕ್ಷರ ಜ್ಞಾನ ಪಡೆಯಬೇಕೆಂದು ಮನವರಿಕೆ ಮಾಡಿಕೊಡುವ ಸನ್ನಿವೇಶ ಇದಲ್ಲ ಎಂದು ಅವರು ಹೇಳಿದರು.ಮನೆಯೇ ಮೊದಲ ಪಾಠಶಾಲೆ. ಇಲ್ಲಿಂದಲೇ ಕಲಿಕೆ ಪ್ರಾರಂಭವಾಗಬೇಕು. ಮಾತೃ ಭಾಷೆ ಎಂಬುದು ತಾಯಿಯ ಭಾಷೆ. ಮಗುವಿನ ಸರ್ವಾಗೀಂಣ ಬೆಳವಣಿಗೆಗೆ ಶಿಕ್ಷಣ ಅಗತ್ಯವಾಗಿದ್ದು, ಜೀವನದಲ್ಲಿ ಶಿಕ್ಷಣ ಮತ್ತು ಮೌಲ್ಯ ಎರಡು ಮುಖ್ಯ. ಸಮಾಜದ ಮುಖ್ಯವಾಹಿನಿಗೆ ಬರುತ್ತಿರುವಂತಹ ಕೆಲವು ಜನಾಂಗಗಳು ಇಂದಿಗೂ ಶಿಕ್ಷಣದಿಂದ ವಂಚಿತವಾಗಿವೆ ಎಂದು ಅವರು ವಿಷಾದಿಸಿದರು.ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿ ವಿತರಿಸಲಾಯಿತು. ಶಿಕ್ಷಣ ಪ್ರತಿ ಮಗುವಿನ ಮೂಲಭೂತ ಹಕ್ಕು ಕುರಿತು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿಚಾರ ಮಂಡಿಸಿದರು.ಹೆಚ್ಚುವರು ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು, ರಾಜ್ಯ ಮಾಹಿತಿ ಹಕ್ಕು ಆಯೋಗದ ಮಾಜಿ ಆಯುಕ್ತ ಚಂದ್ರೇಗೌಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎಸ್‌.ಟಿ. ಜವರೇಗೌಡ, ಚೈಲ್ಡ್‌ ಫಂಡ್ ಇಂಟರ್‌ ನ್ಯಾಷನಲ್‌ ಕಾರ್ಯಕ್ರಮ ತಜ್ಞೆ ಶೈನಿ ಜಾಕೋಬ್, ಆರ್‌ಎಲ್‌ಎಚ್‌ ಪಿ ಕಾರ್ಯದರ್ಶಿ ಪ್ರೊ.ವಿ.ಕೆ. ಜೋಸ್‌, ನಿರ್ದೇಶಕಿ ಸರಸ್ವತಿ ಮೊದಲಾದವರು ಇದ್ದರು.----ಕೋಟ್...ರಾಜ್ಯ ಸರ್ಕಾರ 45 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲೆ ನಡೆಸುತ್ತಿದ್ದು, 23 ಸಾವಿರ ಶಾಲೆಗಳಲ್ಲಿ ಶೇ.30 ರಷ್ಟು ದಾಖಲಾತಿ, ಹಾಜರಾತಿ ಕಡಿಮೆ ಇದೆ. ಸರ್ಕಾರಿ, ಖಾಸಗಿ, ಅನುದಾನಿತ ಶಾಲೆ ಒಳಗೊಂಡಂತೆ ಒಟ್ಟು 70 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಿವೆ. ಪೂರ್ವ ಪ್ರಾಥಮಿಕ ಶಾಲೆಗಳು ಪ್ರಾರಂಭಿಸಲಾಗಿದೆ.- ತನ್ವೀರ್ ಸೇಠ್, ಶಾಸಕ----ಜೀವನದಲ್ಲಿ ಬಡವರಾಗಿದ್ದರೂ ಪರವಾಗಿಲ್ಲ, ಶಿಕ್ಷಣದಲ್ಲಿ ಶ್ರೀಮಂತರಾಗಿರಬೇಕು. ಸಮಾಜದಲ್ಲಿ ಗೌರವಯುತ ಬದುಕಿಗೆ ಶಿಕ್ಷಣ ಅಗತ್ಯ. ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಶಿಕ್ಷಣ ಒದಗಿಸಬೇಕು.- ಡಾ.ಪಿ. ಶಿವರಾಜು, ಹೆಚ್ಚುವರಿ ಜಿಲ್ಲಾಧಿಕಾರಿ