ಸಾರಾಂಶ
ಬೆಸ್ಕಾಂ ರಾಮನಗರದ ವಿಭಾಗದಿಂದ ವಿದ್ಯುತ್ ಅವಘಡಗಳ ಬಗ್ಗೆ ಜಾಗೃತಿ ಜಾಥಾ । ನಿಗಮದ ಅಧಿಕಾರಿ, ಅಭಿಯಂತರರು ಭಾಗಿ
ಕನ್ನಡಪ್ರಭ ವಾರ್ತೆ ರಾಮನಗರಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ರಾಮನಗರ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಿದ್ಯುತ್ ಅವಘಡ, ಸುರಕ್ಷತಾ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬುಧವಾರ ರಾಮನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಿ ಜನರಲ್ಲಿ ಅರಿವು ಮೂಡಿಸಿದರು.
ನಗರದ ಹಳೇ ಬಸ್ ನಿಲ್ದಾಣದ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ಸಾರ್ವಜನಿರನ್ನು ಉದ್ದೇಶಿಸಿ ಮಾತನಾಡಿದ ಬೆಸ್ಕಾಂ ರಾಮನಗರ ವಿಭಾಗ ಕಾರ್ಯನಿರ್ವಾಹಕ ಅಭಿಯಂತರ ನಾಗರಾಜು, ವಿದ್ಯುತ್ ಸುರಕ್ಷತೆ ಬಗ್ಗೆ ಸರಿಯಾದ ಅರಿವಿಲ್ಲದೇ ಸಾರ್ವಜನಿಕವಾಗಿ ಅನೇಕ ವಿದ್ಯುತ್ ಅಫಘಾತ, ಅವಘಡಗಳನ್ನು ಕಾಣುತ್ತಿದ್ದೇವೆ. ಇದಕ್ಕೆ ಸಾರ್ವಜನಿಕರಲ್ಲಿ ಸರಿಯಾದ ಮಾಹಿತಿ ಕೊರತೆ ಕಾರಣ ಎಂದರು.ಜನರಿಗೆ ಸರಿಯಾದ ಮಾಹಿತಿ, ವಿದ್ಯುತ್ ಅಫಘಾತ ತಡೆಗಟ್ಟುವಿಕೆ, ಅಫಘಾತ ಆದ ಸಂದರ್ಭದಲ್ಲಿ ಅನುಸರಣೆ ಮಾಡಬೇಕಿರುವ ಕ್ರಮ, ವಹಿಸಬೇಕಾದ ಜಾಗೃತಿ, ಸಾರ್ವಜನಿಕರು ಪ್ರತೀ ಕ್ಷಣ ಇರಬೇಕಾದ ಎಚ್ಚರ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜಾಥಾದ ಮೂಲಕ ಸಾರ್ವಜನಿಕರು, ಗ್ರಾಹಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಇದರ ಜೊತೆಗೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ, ಚರ್ಚಾಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯುತ್ ಅಫಘಾತಗಳು, ಅವಘಡಗಳ ಬಗ್ಗೆ ತಿಳಿಹೇಳುವ ಕೆಲಸ ಬೆಸ್ಕಾಂನಿಂದ ಮಾಡಲಾಗುತ್ತಿದೆ. ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಗಳು ನಡೆಸುವ ಗ್ರಾಮಸಭೆಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ, ಮಾಹಿತಿ ನೀಡುವ ಕೆಲಸ ಮಾಡಲಾಗುತ್ತದೆ ಎಂದರು.ಚಾಮುಂಡೇಶ್ವರಿ ದೇವಾಲಯದ ಆವರಣದಿಂದ ಹೊರಟ ಜಾಥಾ ಎಂ.ಜಿ. ರಸ್ತೆ, ಹಳೇ ಬಸ್ ನಿಲ್ದಾಣ, ಮುಖ್ಯರಸ್ತೆಗಳಲ್ಲಿ ಸಂಚರಿಸಿತು. ಧ್ವನಿವರ್ಧಕದಲ್ಲಿ ತಿಳುವಳಿಕೆ ಮತ್ತು ಮಾಹಿತಿ ಪತ್ರ ಹಿಡಿದು ಜನಪದ ಡೊಳ್ಳು ಮುಖಾಂತರ ಮೆರವಣಿಗೆಯಲ್ಲಿ ಸಾಗಿದರು.
ಎಂ.ಜಿ.ರಸ್ತೆ, ಅರಳೀಮರ ವೃತ್ತ, ಕಾಮಣ್ಣನಗುಡಿ ಸರ್ಕಲ್, ಹಳೇ ಬಸ್ ನಿಲ್ದಾಣ, ಐಜೂರು ಸರ್ಕಲ್‌ನಲ್ಲಿ ಒಂದೊಂದು ಕಡೆ ನಿಂತು ಮಾತನಾಡಿ, ಜನರಿಗೆ ವಿದ್ಯುತ್ ಸುರಕ್ಷತೆಗೆ ಅನುಸರಿಸಬೇಕಾದ ಕ್ರಮಗಳು, ಬೆಸ್ಕಾಂ ಜವಾಬ್ದಾರಿ ಹಾಗೂ ಸಾರ್ವಜನಿಕರ ಪಾತ್ರಗಳ ಬಗ್ಗೆ ಅಧಿಕಾರಿಗಳು ತಿಳಿಸಿಕೊಟ್ಟರು.ಜಾಥಾದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ರಾಮನಗರ ವಿಭಾಗ ಕೃಷ್ಣಮೂರ್ತಿ, ಚನ್ನಪಟ್ಟಣ ಚಿದಾನಂದ್, ಬೇವೂರು ಪುಟ್ಟಸ್ವಾಮಿ, ಚಂದನ, ಸಹಾಯಕ ಅಭಿಯಂತರರಾದ ಪ್ರಭಾಕರ್, ಹರ್ಷ, ಪ್ರಸಾದ್, ಕೃಷ್ಣಪ್ರಸಾದ್, ಕಿರಿಯ ಅಭಿಯಂತರರಾದ ಶೀಲಾ, ಚಂದ್ರಶೇಖರ್, ದಿಲೀಪ್, ಸಂದೇಶ್, ಪ್ರಕಾಶ್ ಹಾಜರಿದ್ದರು.