ಗೋರಬಂಜಾರ ಸಂಘಟನೆಗೆ ಜಾಗೃತಿ ರಥಯಾತ್ರೆ

| Published : Mar 01 2025, 01:03 AM IST

ಸಾರಾಂಶ

ಗೋರಸೇನಾ ರಾಷ್ಟ್ರೀಯ ಸಂಘಟನೆ ಹಾಗೂ ರಾಜ್ಯ ಘಟಕದಿಂದ ಗೋರ ಬಂಜಾರ ಸಮುದಾಯದ ಹಕ್ಕು, ಪ್ರಗತಿ, ಪರಿವರ್ತನೆಗಾಗಿ ಮಾ.4 ರಿಂದ 10ರ ವರೆಗೆ ಬೀದರನಿಂದ ಬೆಂಗಳೂರುವರೆಗೆ ಜನಜಾಗೃತಿ ಸೇವಾ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಸಮಾಜದ ಮುಖಂಡ ಡಾ.ಬಾಬುರಾಜೇಂದ್ರ ನಾಯಿಕ‌ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಗೋರಸೇನಾ ರಾಷ್ಟ್ರೀಯ ಸಂಘಟನೆ ಹಾಗೂ ರಾಜ್ಯ ಘಟಕದಿಂದ ಗೋರ ಬಂಜಾರ ಸಮುದಾಯದ ಹಕ್ಕು, ಪ್ರಗತಿ, ಪರಿವರ್ತನೆಗಾಗಿ ಮಾ.4 ರಿಂದ 10ರ ವರೆಗೆ ಬೀದರನಿಂದ ಬೆಂಗಳೂರುವರೆಗೆ ಜನಜಾಗೃತಿ ಸೇವಾ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಸಮಾಜದ ಮುಖಂಡ ಡಾ.ಬಾಬುರಾಜೇಂದ್ರ ನಾಯಿಕ‌ ಹೇಳಿದರು.

ನಗರದಲ್ಲಿ ಗೋರಸೇನಾ ಸಂಘಟನೆ ವತಿಯಿಂದ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋರ ಬಂಜಾರ ಜನಾಂಗ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಜನಜಾಗೃತಿ ಮತ್ತು ಜನಾಂದೋಲನ ರಥಯಾತ್ರೆ ನಡೆಸಲಾಗುತ್ತಿದೆ. ಈ ಹಿನ್ನೆಲೆ ಸುಮಾರು 200 ವಾಹನಗಳಲ್ಲಿ ಸಮಾಜದ 2 ಸಾವಿರ ಜನರೊಂದಿಗೆ ಮಾ.5 ರಂದು ಸಂಜೆ ಸಿಂದಗಿ ಮೂಲಕ ವಿಜಯಪುರ ಜಿಲ್ಲೆಗೆ ರಥಯಾತ್ರೆ ಆಗಮಿಸಲಿದೆ. ಅಂದು ರಾತ್ರಿ ದೇವರ ಹಿಪ್ಪರಗಿಯಲ್ಲಿ ಜನ ಜಾಗೃತಿ ಸಭೆ ನಡೆಸಿ ವಾಸ್ತವ್ಯ ಮಾಡಲಾಗುವುದು. ಮಾ.6 ರಂದು ಬೆಳಗ್ಗೆ ನಗರದ ಅಲ್ಲಾಪುರ ತಾಂಡಾ ಬಳಿ ಸೇವಾಲಾಲ್ ಸರ್ಕಲ್ ಮೂಲಕ ನಗರ ಪ್ರವೇಶಿಸಲಿದೆ. ಬಂಜಾರಾ ಕ್ರಾಸ್, ವಾಟರ್ ಟ್ಯಾಂಕ್, ಮಹಾತ್ಮಾಗಾಂಧಿ ವೃತ್ತದ ಮೂಲಕ ಬೃಹತ್ ಯಾತ್ರೆಯನ್ನು ನಡೆಸಲಾಗುವುದು. ಬಳಿಕ ಬಸವನ ಬಾಗೇವಾಡಿ ಮಾರ್ಗವಾಗಿ ಯಾದಗಿರಿ ಜಿಲ್ಲೆಗೆ ರಥಯಾತ್ರೆ ತೆರಳಲಿದೆ ಎಂದು ಮಾಹಿತಿ ನೀಡಿದರು. ಗೋರಸೇನಾ ಬಂಜಾರಾ ಸಮಾಜದ ಸಾಂಸ್ಕೃತಿಕ ಚಳುವಳಿಯಾಗಿ ಕಳೆದ ಒಂದೂವರೆ ದಶಕದಿಂದ ರಾಷ್ಟ್ರದಾದ್ಯಂತ ಚಳುವಳಿಯನ್ನು ನಡೆಸುತ್ತಿದೆ. ಸಂಘಟನೆಯ ರಾಜ್ಯಾಧ್ಯಕ್ಷ ಬಾಳಾಸಾಹೇಬ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಜನಜಾಗೃತಿ ಸೇವಾ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಸೇವಾ ಯಾತ್ರೆಯ ಮೂಲ ಉದ್ದೇಶ ಸಮಾಜವನ್ನು ಸಂಘಟಿಸುವುದು, ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವುದಾಗಿದೆ. ಬಂಜಾರಾ ಸಮಾಜವನ್ನು ಎಲ್ಲಾ ರಾಜ್ಯಗಳಲ್ಲಿ ಎಲ್ಲಾ ಪಕ್ಷಗಳು ತಮ್ಮ ಅನುಕೂಲಕ್ಕೆ ಬಳಸಿಕೊಂಡಿವೆ. ಒಳಮೀಸಲಾತಿಯ ಪೆಟ್ಟಿನ ಕುರಿತು, ಶೈಕ್ಷಣಿಕ ಪ್ರಾಮುಖ್ಯತೆ ಸೇರಿದಂತೆ ಹಲವು ವಿಚಾರಗಳ ಕುರಿತು ಜನಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.ಗೋರಸೇನಾ ರಾಷ್ಟ್ರೀಯ ಸಂಘಟನೆ ಜಿಲ್ಲಾಧ್ಯಕ್ಷ ಅರುಣ ನಾಯಿಕ ಮಾತನಾಡಿ, ಮಾ. 4ರಿಂದ 10ರ ವರೆಗೆ ಸಂಚರಿಸುವ ಜನಜಾಗೃತಿ ರಥಯಾತ್ರೆಯೂ ರಾಜ್ಯದ 15 ಜಿಲ್ಲೆಗಳಲ್ಲಿ ಸಂಚರಿಸಲಿದೆ. ಬಂಜಾರಾ ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲವುದೇ ಈ ರಥಯಾತ್ರೆಯ ಉದ್ಧೇಶವಾಗಿದೆ. ಸಮಾಜದ ಜನರು ಗುಳೆ ಹೋಗುವುದರಿಂದ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಜನತೆ ಮೂಢನಂಬಿಕೆಯಿಂದ ಸಂಕಷ್ಟದಲ್ಲಿದ್ದಾರೆ. ಗೋರ ಬಂಜಾರ ಸಮಾಜದಲ್ಲಿ ಬಡತನ, ಅಜ್ಞಾನ, ಅನಕ್ಷರತೆ ಇರುವುದರಿಂದ ಅನ್ಯ ಜನರು ನಮ್ಮ ವಿರುದ್ಧ ಕುತಂತ್ರ ಮಾಡುತ್ತಿದ್ದಾರೆ. ನಮ್ಮವರು ಯಾರೂ ಸಂಘಟನಾತ್ಮಕವಾಗಿ ಒಂದಾಗುತ್ತಿಲ್ಲ. ಹೀಗಾಗಿ ಈ ಜಾಗೃತಿ ನಡೆಸಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ತಾಂಡಾಗಳ ಮುಖಂಡರು, ಯುವಕರು ಆಗಮಿಸಬೇಕು ಎಂದು ಮನವಿ ಮಾಡಿದರು.ಸಮಾಜದ ಮುಖಂಡರಾದ ಸುರೇಶ ಬಿಜಾಪುರ, ಸುರೇಶ ಚವ್ಹಾಣ, ಸಾಹಿತಿ ಇಂದುಮತಿ ಲಮಾಣಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಸುರೇಖಾ ರಾಠೋಡ, ಬಾಬು ಚವ್ಹಾಣ, ವಿನೋದ ರಾಠೋಡ ಉಪಸ್ಥಿತರಿದ್ದರು.