ಡಿಸಿಸಿ ಬ್ಯಾಂಕ್‌ ಅಕ್ರಮ ನೇಮಕಾತಿ ಉನ್ನತ ತನಿಖೆಗೆ ಆಯನೂರು ಮಂಜುನಾಥ್‌ ಆಗ್ರಹ

| Published : Jun 28 2024, 12:48 AM IST

ಡಿಸಿಸಿ ಬ್ಯಾಂಕ್‌ ಅಕ್ರಮ ನೇಮಕಾತಿ ಉನ್ನತ ತನಿಖೆಗೆ ಆಯನೂರು ಮಂಜುನಾಥ್‌ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಡಿಸಿಸಿ ಬ್ಯಾಂಕ್‌ನ 98 ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಇಡೀ ನೇಮಕ ಪ್ರಕ್ರಿಯೆಯನ್ನೇ ಉಲ್ಲಂಘಿಸಲಾಗಿದೆ. ಲಿಖಿತ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಪ್ರಶ್ನೆ ಪತ್ರಿಕೆಗಳನ್ನು ಕೂಡ ವಾಪಸ್ ಪಡೆಯಲಾಗಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಿಜೆಪಿ ಆಡಳಿತಾವಧಿಯಲ್ಲಿ ಡಿಸಿಸಿ ಬ್ಯಾಂಕ್‌ನ 98 ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆಗ್ರಹಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪರೀಕ್ಷಾ ಪದ್ಧತಿಯೇ ಸರಿ ಇರಲಿಲ್ಲ. ಲಿಖಿತ ಪರೀಕ್ಷೆಯನ್ನು ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಯಾವುದಾದರೂ ಶಿಕ್ಷಣ ಸಂಸ್ಥೆಗೆ ನೀಡಬೇಕಿತ್ತು. ಯಾರ ಒಪ್ಪಿಗೆಯೂ ಇಲ್ಲದೇ ಅಧ್ಯಕ್ಷರು ಅಧಿಕಾರಿಗಳೊಂದಿಗೆ ಸೇರಿಕೊಂಡು ಅಕ್ಕಮಹಾದೇವಿ ವಿವಿಗೆ ನೀಡಲಾಗಿತ್ತು. ಅವರು ಒಪ್ಪಿಗೆ ಕೊಡುವ ಮುನ್ನವೇ ಆ ವಿವಿಗೆ 40 ಲಕ್ಷ ರು. ಪಾವತಿಸಲಾಗಿದೆ ಎಂದು ದೂರಿದರು. ಇಡೀ ನೇಮಕ ಪ್ರಕ್ರಿಯೆಯನ್ನೇ ಉಲ್ಲಂಘಿಸಲಾಗಿದೆ. ಲಿಖಿತ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಪ್ರಶ್ನೆ ಪತ್ರಿಕೆಗಳನ್ನು ಕೂಡ ವಾಪಸ್ ಪಡೆಯಲಾಗಿದೆ. ಪರೀಕ್ಷೆಯಲ್ಲಿ ಪಡೆದಿ ರುವ ಮೆರಿಟ್ ಅಂಕಗಳನ್ನು ಆಡಳಿತ ಮಂಡಳಿಗೆ ಮಂಡಿಸಿರುವುದಿಲ್ಲ. ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನಕ್ಕೆ ಮಾಹಿತಿಯನ್ನೂ ನೀಡಿಲ್ಲ ಎಂದು ಆರೋಪಿಸಿದರು.

ಸಂದರ್ಶನದ ಕರೆ ಪತ್ರ ನೀಡದೇ ದೂರವಾಣಿ ಮೂಲಕ ಕರೆಸಿಕೊಂಡು ಸಂದರ್ಶನ ಮಾಡಲಾಗಿದೆ. ಆದೇಶವನ್ನೂ ಕೂಡ ಅಂಚೆ ಮೂಲಕ ಮಾಡದೇ ಖುದ್ದಾಗಿ ಕರೆಸಿ ಕೊಂಡು ಮಾಡಲಾಗಿದೆ. ಇವೆಲ್ಲವೂ ನಿಯಮಕ್ಕೆ ವಿರುದ್ಧವಾಗಿವೆ ಎಂದರು.

ನೇಮಕಗೊಂಡ 98 ಉದ್ಯೋಗಿಗಳಿಗೆ ಇನ್ನೂ ಪ್ರೊಬೇಷನರಿ ಇರುವಾಗಲೇ ಅವರಿಗೆ ತಮ್ಮದೇ ಬ್ಯಾಂಕ್‌ನಿಂದ ಸಾಲ ಮಂಜೂರು ಮಾಡಲಾಗಿದೆ. ವಿಚಿತ್ರ ಎಂದರೆ ಈ ಸಾಲ ಏಕಕಾಲದಲ್ಲಿ ಬಿಡುಗಡೆಯಾಗಿ ಏಕ ಕಾಲದಲ್ಲೇ ಡ್ರಾ ಕೂಡ ಆಗಿದೆ ಎಂದು ದೂರಿದರು.

ಈ ಹಣ ಪೂರ್ವ ನಿಗದಿಯಂತೆ ಲಂಚ ಕೊಡಲು ಸಾಲ ನೀಡಲಾಗಿದೆ. ಬ್ಯಾಂಕಿನ ಇತಿಹಾಸದಲ್ಲಿ ಲಂಚಕ್ಕಾಗಿ ಸಾಲ ಮಂಜೂರು ಮಾಡಿದ್ದು ಇದೇ ಮೊದಲು ಎಂದು ಆರೋಪಿಸಿದರು.

ಇನ್ನು, ಜುಲೈ 1, 2021 ರಿಂದ ಮಾರ್ಚ್ 30, 2022 ರವರೆಗಿನ ತುಟ್ಟಿಭತ್ಯೆ ಬಾಕಿ ಮೊತ್ತ ಸುಮಾರು 1.06 ಕೋಟಿ ರು.ಗಳನ್ನು ಕೂಡ ಮೊದಲು ನೌಕರರ ಉಳಿತಾಯ ಖಾತೆಗೆ ಜಮಾ ಮಾಡಿ ಅದೇ ದಿನ ಉಳಿತಾಯ ಖಾತೆಯಿಂದ ಹಣ ವಾಪಸ್ ಪಡೆದು ಆಡಳಿತ ಮಂಡಳಿಯ ಕೆಲ ನಿರ್ದೇಶಕರಿಗೆ ಮತ್ತು ಅಧ್ಯಕ್ಷರಿಗೆ ಹಂಚಲಾಗಿದೆ. ಹಣದ ವಿಲೇವಾರಿ ಕೂಡ ಒಂದೇ ದಿನ ನಡೆದಿರುವುದು ಅನುಮಾನಕ್ಕೆ ಆಸ್ಪದವಾಗಿದೆ ಎಂದರು.

ಜೂ.28ರಂದು ಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಯ ಚುನಾವಣೆ ನಡೆಯಲಿದೆ. ಇದಕ್ಕಾಗಿ ಭಾರಿ ಪೈಪೋಟಿ ಕೂಡ ಇದೆ. ಇಲ್ಲಿ ನಡೆದ ಅವ್ಯವಹಾರವನ್ನು ಮುಚ್ಚಿ ಹಾಕಲು ಸಂಸದರು ಮತ್ತು ಕೆಲ ಬಿಜೆಪಿ ಶಾಸಕರು ಪ್ರಯತ್ನಿಸುತ್ತಿದ್ದಾರೆ. ಹಣದ ಹೊಳೆಯನ್ನೇ ಹರಿಸಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನೇ ಗೆಲ್ಲಿಸುವಂತೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ತಾವು ಈ ಕೇಸ್‌ನಲ್ಲಿ ಸಿಕ್ಕಿ ಹಾಕಿಕೊಳ್ಳಬಹುದು ಎಂಬ ಭಯ ಕೂಡ ಅವರಿಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆರ್. ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ಎಸ್.ಟಿ. ಹಾಲಪ್ಪ, ಸಿ.ಎಸ್. ಚಂದ್ರ ಭೂಪಾಲ್, ಯು. ಶಿವಾನಂದ್, ಶಿ.ಜು. ಪಾಶಾ, ಜಿ.ಡಿ. ಮಂಜುನಾಥ್, ಉದ್ಯೋಗ ವಂಚಿತ ಮಂಜುನಾಥ್ ಡಿ. ಅರಗವಳ್ಳಿ ಇದ್ದರು.