ಸಾರಾಂಶ
ಹೊನ್ನಾವರ:
ಮೂರವರೆ ಲಕ್ಷ ಜನರ ಬಲಿ ತೆಗೆದುಕೊಂಡ 500 ವರ್ಷಗಳ ಸುದೀರ್ಘ ಹೋರಾಟ ಇಂದು ತಾರ್ಕಿಕ ಅಂತ್ಯಕಂಡಿದೆ. ರಾಮ ಎಂಬ ಮಂತ್ರಕ್ಕೆ ಭಾವನೆಗಳು ಭಿತ್ತಿದಾಗ ಅದು ರಣಮಂತ್ರವಾಗುತ್ತೆ. ಇಂದು ಆ ಕಾರ್ಯವಾಗಿದೆ. ಇದಕ್ಕೆ ಅಯೋಧ್ಯೆ ಸಾಕ್ಷಿಯಾಗಿದ್ದು ಇದೊಂದು ವಿರೋಚಿತ ಇತಿಹಾಸ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಹಿನ್ನೆಲೆ ತಾಲೂಕಿನ ಕರ್ಕಿಯಲ್ಲಿ ನಡೆದ ಶ್ರೀರಾಮೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.ಇಂದು ಕೇವಲ ರಾಮಮಂದಿರ ಉದ್ಘಾಟನೆಯಲ್ಲ. ಸಾವಿರ ವರ್ಷಗಳ ದೌರ್ಜನ್ಯದ ಪರಂಪರೆಗೆ ಅಂತ್ಯ ಹಾಡಿದ ಕ್ಷಣ. ಈ ಮೂಲಕ ಹಿಂದೂ ಸಮಾಜ ತಲೆ ಎತ್ತಿ ನಿಂತಿದೆ. ಒಮ್ಮೆ ಈ ಸಮಾಜ ಎದ್ದು ನಿಂತರೆ ಜಗತ್ತು ನಮ್ಮ ಕಾಲಿಗೆ ಬಿಳಲೇಬೇಕು. ರಾಮಮಂದಿರ ಉದ್ಘಾಟನೆಗಿಂತ ಮುಂಚೇನೆ ಜಗತ್ತು ಭಾರತದ ನೇತೃತ್ವವನ್ನು ಒಪ್ಪಿಕೊಳ್ಳಲು ತಯಾರಾಗಿಬಿಟ್ಟಿತ್ತು. ಇದು ಭಗವಂತನ ನಿರ್ಣಯ. ಸಾವಿರ ವರ್ಷದ ಅಪಮಾನದ ಬದುಕಿನಿಂದ ಈ ಸಮಾಜ ಹೊರಗಡೆ ಬರುತ್ತಿದೆ. ಈ ಸಮಾಜ ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲಬೇಕು ಎನ್ನುವುದು ಭಗವಂತನ ಸಂಕಲ್ಪ. ಆ ಸಂಕಲ್ಪಕ್ಕೆ ನಾವೆಲ್ಲ ಪುರಾವೆಗಳು, ಸಾಕ್ಷಿಗಳು ಇದಕ್ಕೆ ಹೆಮ್ಮೆ ಪಡಬೇಕು ಎಂದರು.ರಾಮಮಂದಿರ ಹಿಂದೂ ಸಮಾಜ ಕಟ್ಟಿರುವ ದೇವಸ್ಥಾನ, ಸರ್ಕಾರ ಕಟ್ಟಿರುವ ದೇವಸ್ಥಾನ ಅಲ್ಲ. ನಮ್ಮನ್ನು ಜಾತಿ, ಊರು, ಬಣ್ಣದ ಹೆಸರಿನಲ್ಲಿ ಒಡೆದಿದ್ದರು. ಇಂದು ಕೂಡ ಬಹುತೇಕ ಆ ಒಡಕಿನ ನಿದ್ದೆಯಿಂದ ಹೊರಗಡೆ ಬಂದಿಲ್ಲ. ನಾನೊಬ್ಬ ಹಿಂದೂ ಎಂದು ಹೇಳಬೇಕಾದರೆ ನೆನಪು ಮಾಡಿಕೊಳ್ಳಬೇಕು. ನಮ್ಮನ್ನು ನಮ್ಮ ಪರಿಚಯವೇ ಇಲ್ಲದೆ ಇರುವ ರೀತಿಯಲ್ಲಿ ಹೊಡೆದು ಮಣ್ಣು ಮಾಡಬೇಕು ಎಂದು ಹೊರಟಿದ್ದರು. ಆದರೆ ಆ ಭಗವಂತನ ಸಂಕಲ್ಪ ಬೇರೆ ಇವತ್ತು. ಎದ್ದು ನಿಂತು ಕೊಂಡಿದ್ದೇವೆ ,ಗೆದ್ದು ನಿಂತುಕೊಂಡಿದ್ದೇವೆ. ಇನ್ನು ಯಾರಿಂದಲು ತಡೆಯಲು ಸಾಧ್ಯ ಇಲ್ಲ ಎಂದರು.ಹಿಂದೂ ಸಮಾಜ ಮಲಗಿದ್ದರೆ ಕುಂಭಕರ್ಣ, ಎದ್ದರೆ ರಣಭೈರವ. ಇದು ಅಂತ ಹಿಂದೂ ಸಮಾಜ ಎದ್ದು ನಿಂತುಕೊಳ್ಳಲು ಪ್ರಾರಂಭವಾಗಿದೆ. ಇನ್ನು ಮತ್ತೆ ನಮ್ಮನ್ನ ತಡೆಯಲು ಜಗತ್ತಿನಲ್ಲಿ ಯಾರಿಂದಲೂ ಸಾಧ್ಯ ಇಲ್ಲ ಎಂದು ಹೇಳಿದರು.ಮಾಜಿ ಜಿಪಂ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ಭಾರತವನ್ನು ವಿಶ್ವ ಗುರುವನ್ನಾಗಿಸಿದ ಪ್ರಧಾನಿ ನರೇಂದ್ರ ಮೋದಿ ಇಂದು ಶ್ರೀ ರಾಮಲಲ್ಲಾ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ಮಾಡಿದ್ದಾರೆ. ಭವ್ಯವಾದ ರಾಮ ಮಂದಿರ ತಲೆ ಎತ್ತಿ ನಿಂತಿದೆ. ತನ್ಮೂಲಕ ದೇಶದ ಸ್ವಾಭಿಮಾನ ತಲೆ ಎತ್ತಿ ನಿಂತಹ ಅಪೂರ್ವವಾದ ಕ್ಷಣವನ್ನು ನಾವೆಲ್ಲ ಕಣ್ತುಂಬಿಕೊಂಡಿದ್ದೇವೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಉದ್ಯಮಿ ವೆಂಕಟ್ರಮಣ ಹೆಗಡೆ ಕವಲಕ್ಕಿ, ಗ್ರಾಪಂ ಸದಸ್ಯರಾದ ಸತೀಶ್ ಹೆಬ್ಬಾರ್, ಶ್ರೀಕಾಂತ ಮೊಗೇರ್ ಉಪಸ್ಥಿತರಿದ್ದರು.ಜೈ ಶ್ರೀರಾಮ ಎನ್ನುವುದು ನಮ್ಮ ಪಾರ್ಲಿಮೆಂಟ್‌ಲ್ಲಿ ಮೊಳಗುತ್ತಿದೆಯೋ ಗೊತ್ತಿಲ್ಲ. ಆದರೆ ಯುಕೆ ಪಾರ್ಲಿಮೆಂಟ್, ನೆದರ್ ಲ್ಯಾಂಡ್, ಹಂಗೇರಿ, ಆಸ್ಟ್ರೇಲಿಯಾದಂತಹ ಕೆಲವು ದೇಶಗಳಲ್ಲಿ ಜೈ ಶ್ರೀರಾಮ್ ಘೋಷಣೆ ಮೊಳಗುತ್ತಿದೆ. ರಾಮ ಭಜನೆ ಆಂದೋಲನವಾಗಿ ರೂಪುಗೊಂಡಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.