ಅಯೋಧ್ಯೆ ಮಂತ್ರಾಕ್ಷತಾ ಕಲಶ ಮೆರವಣಿಗೆ ಅದ್ಧೂರಿ

| Published : Jan 15 2024, 01:48 AM IST

ಸಾರಾಂಶ

ಅಯೋಧ್ಯೆಯಿಂದ ಆಗಮಿಸಿದ ಮಂತ್ರಾಕ್ಷತಾ ಕಲಶವನ್ನು ಅತ್ಯಂತ ಸಂಭ್ರಮದಿಂದ ನಗರದ ಚವ್ಹಾಟಗಲ್ಲಿ, ಟೆಂಗಿನಕೇರಿ ಗಲ್ಲಿ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಪಲ್ಲಕ್ಕಿ ಮೆರವಣಿಗೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಅಯೋಧ್ಯೆಯಿಂದ ಆಗಮಿಸಿದ ಮಂತ್ರಾಕ್ಷತಾ ಕಲಶವನ್ನು ಅತ್ಯಂತ ಸಂಭ್ರಮದಿಂದ ನಗರದ ಚವ್ಹಾಟಗಲ್ಲಿ, ಟೆಂಗಿನಕೇರಿ ಗಲ್ಲಿ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಪಲ್ಲಕ್ಕಿ ಮೆರವಣಿಗೆ ಮಾಡಲಾಯಿತು.

ಅಯೋಧ್ಯೆಯ ಪ್ರಭು ಶ್ರೀರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಆಗಮಿಸಿದ ಮಂತ್ರಾಕ್ಷತಾ ಕಲಶವನ್ನು ಡೋಲು ನಾದ ಹಾಗೂ ಜೈ ಶ್ರೀರಾಮ್ ಘೋಷಣೆಗಳೊಂದಿಗೆ ಮಂತ್ರಾಕ್ಷತಾ ಮೆರವಣಿಗೆ ನಡೆಸಲಾಯಿತು.

ಈ ಕಲಶಕ್ಕೆ ಭಕ್ತರಿಂದ ಪೂಜೆ ಸಲ್ಲಿಸಲಾಯಿತು. ಚವಾಟಗಲ್ಲಿಯ ಶ್ರೀ ಮಾರುತಿ ಮಂದಿರ ದೇವಸ್ಥಾನದಿಂದ ಡೊಳ್ಳು ಬಾರಿಸುತ್ತ ಮೆರವಣಿಗೆ ನಡೆಸಲಾಯಿತು. ಮಹಿಳೆಯರು ಅಕ್ಷತಾ ಕಲಶವನ್ನು ತಲೆಯ ಮೇಲೆ ಹೊತ್ತು ಯಾತ್ರೆಯಲ್ಲಿ ಪಾಲ್ಗೊಂಡರು. ವಿವಿಧೆಡೆ ಯಾತ್ರೆಗೆ ಅದ್ಧೂರಿ ಸ್ವಾಗತ ಮಾಡಿಕೊಳ್ಳಲಾಯಿತು. ಶ್ರೀರಾಮ ಮಂತ್ರಾಕ್ಷತಾ ಕಲಶ ಪಲ್ಲಕ್ಕಿ ಹಾದು ಹೋಗುವ ಮಾರ್ಗಗಳಲ್ಲಿ ರಂಗೋಲಿ ಬಿಡಿಸಲಾಗಿತ್ತು. ಅಂಗಳದಲ್ಲಿ ದೀಪಗಳನ್ನು ಬೆಳಗಿಸಲಾಗಿತ್ತು . ಮನೆ ಮನೆಗೆ ತೆರಳಿ ಕಲಶಕ್ಕೆ ಪೂಜೆ ಸಲ್ಲಿಸಲಾಯಿತು. ಹೂವಿನ ರಂಗೋಲಿ, ಜತೆಗೆ ವಿವಿಧೆಡೆ ಪಟಾಕಿ ಸಿಡಿಸಲಾಯಿತು. ಹಲಗಿ, ವಾರಕರಿ ಸಂಪ್ರದಾಯದ ಸಕಲ ವಾದ್ಯಗಳೊಂದಿಗೆ ಡಂಗುರ ಡಣಗರಿ ಡೊಳ್ಳು ಬಾರಿಸುವ ಮೂಲಕ ಚವಟ್ ಗಲ್ಲಿ, ಶೆಟ್ಟಿ ಗಲ್ಲಿಯಲ್ಲಿ ಸಕಲ ವಾದ್ಯಗಳೊಂದಿಗೆ ಶ್ರೀರಾಮ ಅಕ್ಷತಾ ಕಲಶದ ಮೆರವಣಿಗೆ ಪುಷ್ಪವೃಷ್ಟಿಯಲ್ಲಿ ನೆರವೇರಿತು.