ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಶಂಕರಚಾರ್ಯರ ಮಠದ ಕೆಲ ಸ್ವಾಮೀಜಿಗಳು ರಾಜಕೀಯಕ್ಕಾಗಿ ಅಯೋಧ್ಯೆಯ ರಾಮಮಂದಿರ ವಿಚಾರದಲ್ಲಿ ಅಪಸ್ವರ ಎತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಠದಲ್ಲಿನ ಕೆಲ ಸ್ವಾಮೀಜಿಗಳ ರಾಜಕೀಯ ಸಿದ್ಧಾಂತಗಳು ಜನರಿಗೆ ಗೊತ್ತಿವೆ. ಮೋದಿಯನ್ನು ಸೋಲಿಸಲೇ ಬೇಕು ಎಂದು ಹೋರಾಟ ಮಾಡಿದ ಕೆಲ ಸ್ವಾಮೀಜಿಗಳು ಇದರಲ್ಲಿ ಇದ್ದಾರೆ. ಅವರಿಂದ ಬೇರೆ ಏನನ್ನು ನಿರೀಕ್ಷೆ ಮಾಡಲು ಸಾಧ್ಯ ಹೇಳಿ ಎಂದು ಪ್ರಶ್ನಿಸಿದರು.
ಪರಿಪೂರ್ಣವಾದ ಜ್ಞಾನ ಇಲ್ಲಅಯೋಧ್ಯೆಯಲ್ಲಿ ನಿರ್ಮಿಸಿರುವ ರಾಮಮಂದಿರ ಪೂರ್ಣವಾಗಿಲ್ಲ ಎನ್ನುವವರಿಗೆ ಪರಿಪೂರ್ಣವಾದ ಜ್ಞಾನ ಇಲ್ಲ. ಯಾವ ದೇವಸ್ಥಾನಗಳು ಒಂದೇ ಕಾಲದಲ್ಲಿ ಪೂರ್ಣವಾಗುವುದಿಲ್ಲ. ಕಾಲದಿಂದ ಕಾಲಕ್ಕೆ ಅವು ಪೂರ್ಣವಾಗುತ್ತವೆ. ದೇವಸ್ಥಾನದ ಗರ್ಭಗುಡಿಯ ಪ್ರಾಣ ಪ್ರತಿಷ್ಠಾಪನೆ ಬಹಳ ಮುಖ್ಯ. ಉಳಿದ ಕಾಮಗಾರಿಗಳು ಬಹಳಷ್ಟು ವರ್ಷ ನಡೆಯುತ್ತವೆ. ಹಿಂದಿನ ಎಲ್ಲಾ ರಾಜ ಮನೆತನದವರು ಕಟ್ಟಿಸಿದ ದೇವಸ್ಥಾನ ವಿಚಾರ ಗೊತ್ತಿದ್ದರೆ ಅಪೂರ್ಣ ಎನಿಸುವುದಿಲ್ಲ ಎಂದು ಅವರು ತಿರುಗೇಟು ನೀಡಿದರು.
ಓಲೈಸಲು ಮಾತುಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ವಿಚಾರದಲ್ಲಿ ಡಿಸಿಎಂ ಸ್ಥಾನದ ಆಸೆಗಾಗಿ ಸಚಿವ ಕೆ.ಎನ್. ರಾಜಣ್ಣ ಅಸಬಂದ್ಧ ಮಾತು ಆಡುತ್ತಿದ್ದಾರೆ. ವಾಲ್ಮೀಕಿ ಸಮುದಾಯದವರು ಶ್ರೀರಾಮನನ್ನು ಎದೆಯ ಗೂಡಿನಲ್ಲಿ ಇಟ್ಟುಕೊಂಡಿರುತ್ತಾರೆ. ರಾಜಣ್ಣ ಅದೇ ಸಮುದಾಯಕ್ಕೆ ಸೇರಿದವರು. ಇಂತಹವರು ಟಿಪ್ಪು ಜಯಂತಿ ಆಚರಿಸಿದ ಸಿಎಂ ಸಿದ್ದರಾಮಯ್ಯರನ್ನು ಓಲೈಸಲು ಇಲ್ಲಸಲ್ಲದ ಮಾತು ಆಡುತ್ತಿದ್ದಾರೆ. ಇಂತವರಿಗೆಲ್ಲಾ ಜನರೇ ಉತ್ತರ ಕೊಡುತ್ತಾರೆ ಎಂದು ಅವರು ತಿಳಿಸಿದರು.