ಸಾರಾಂಶ
ದೇಶದಲ್ಲಿಯೇ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಸಂಘದ ಶಾಖೆಗಳನ್ನು ಮಾಡಿದ ಮೊದಲ ತಾಲೂಕು ಪುತ್ತೂರು. ಈ ಕಾರಣಕ್ಕೆ ಇಲ್ಲಿನ ಪ್ರತಿಯೊಂದು ಕೆಲಸವೂ ಅಚ್ಚುಕಟ್ಟಾಗಿ ನಡೆಯುತ್ತದೆ. ಪ್ರಸ್ತುತ ೪ ಕೋಟಿ ರು. ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿರುವ ಜಿಲ್ಲಾ ಕಾರ್ಯಾಲಯವೂ ಮುಂದಿನ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಗೋಪಾಲ್ ಜೀ ಹೇಳಿದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಅಯೋಧ್ಯೆಯ ರಾಮಮಂದಿರ ಕಾಮಗಾರಿ ಸಂಪೂರ್ಣಗೊಂಡಿಲ್ಲ. ಇನ್ನೂ ಹಲವಾರು ಕಾಮಗಾರಿಗಳು ನಡೆಯಬೆಕಾಗಿದೆ. ಅಯೋಧ್ಯೆಯ ಈ ಕೆಲಸಗಳು ಸಂಪೂರ್ಣಗೊಳ್ಳಲು ಒಂದೂವರೆ ವರ್ಷ ಬೇಕು. ರಾಮಮಂದಿರದ ಆವರಣದಲ್ಲಿ ೬ ದೇವಾಲಯಗಳು, ವಾಲ್ಮೀಕಿ, ವಸಿಷ್ಠ ಮುಂತಾದ ಸಂತರ ಮಂಟಪಗಳು, ಜಟಾಯು ಪುತ್ಥಳಿ ಮತ್ತಿತರ ಕಾಮಗಾರಿಗಳು ನಡೆಯಬೇಕಾಗಿದೆ ಎಂದು ಶ್ರೀರಾಮಮಂದಿರ ನಿರ್ಮಾಣದ ಉಸ್ತುವಾರಿ, ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಕಾರ್ಯದರ್ಶಿ ಗೋಪಾಲ್‌ಜಿ ಹೇಳಿದರು.ಅವರು ಬುಧವಾರ ವಿಶ್ವ ಹಿಂದೂ ಪರಿಷದ್ ಕರ್ನಾಟಕ, ವಿಶ್ವ ಹಿಂದೂ ಪರಿಷದ್ ಪುತ್ತೂರು ಕಟ್ಟಡ ನಿರ್ಮಾಣ ಸಮಿತಿ ವತಿಯಿಂದ ಪುತ್ತೂರಿನಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ಕಾರ್ಯಾಲಯಕ್ಕೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿಯೇ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಸಂಘದ ಶಾಖೆಗಳನ್ನು ಮಾಡಿದ ಮೊದಲ ತಾಲೂಕು ಪುತ್ತೂರು. ಈ ಕಾರಣಕ್ಕೆ ಇಲ್ಲಿನ ಪ್ರತಿಯೊಂದು ಕೆಲಸವೂ ಅಚ್ಚುಕಟ್ಟಾಗಿ ನಡೆಯುತ್ತದೆ. ಪ್ರಸ್ತುತ ೪ ಕೋಟಿ ರು. ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿರುವ ಜಿಲ್ಲಾ ಕಾರ್ಯಾಲಯವೂ ಮುಂದಿನ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದರು.ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಸನಾತನ ಸಂಸ್ಕೃತಿ ಬೆಳೆಸುವ ಕೇಂದ್ರಗಳನ್ನು ತೆರೆಯುವುದು ಅನಿವಾರ್ಯ. ಅಲ್ಲಿ ಹಿಂದೂ ಧರ್ಮದ ಪ್ರಗತಿಗೆ ಪೂರಕವಾದ ಕೆಲಸಗಳು ಆಗಬೇಕು. ಅದಕ್ಕೆ ದಾನಿಗಳ ಕೊಡುಗೆಯೂ ಪೂರಕವಾಗಿರಬೇಕು ಎಂದರು.
ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಮಾತನಾಡಿ, ಸಹನೆ, ತಾಳ್ಮೆ ಹಿಂದೂ ಸಮಾಜದ ಗೌರವವೂ ಹೌದು, ದೌರ್ಬಲ್ಯವೂ ಹೌದು. ವಿಶ್ವ ಹಿಂದೂ ಪರಿಷತ್ ಸಮಾಜವನ್ನು ಏಕೀಕೃತಗೊಳಿಸುವ ಕೆಲಸ ಮಾಡಿದೆ. ಇದರ ಕಾರ್ಯಕರ್ತರು ಯಾವತ್ತೂರು ಸ್ಥಾನಮಾನ, ಗೌರವ ಅಪೇಕ್ಷಿಸಿಲ್ಲ. ಹಿಂದೂ ಧರ್ಮ ವಿರೋಧಿಗಳಿಗಿಂತ ಸ್ವಧರ್ಮೀಯರಿಂದಲೇ ಸವಾಲು ಎದುರಿಸುತ್ತಿದೆ. ಈ ಸ್ಥಿತಿ ಬದಲಾಗಬೇಕು ಎಂದರು.ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘಚಾಲಕ್ ವಿನಯಚಂದ್ರ ಉಜಿರೆ, ವಿಹಿಂಪ ಪ್ರಖಂಡ ವಿಹಿಂಪ ಪ್ರಾಂತ ಕಾರ್ಯದರ್ಶಿ ಯು. ಪೂವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ನ್ಯಾಯವಾದಿ ಎನ್. ಸುಬ್ರಹ್ಮಣ್ಯ ಕೊಳತ್ತಾಯ ಉಪಸ್ಥಿತರಿದ್ದರು.