ಅಯೋಧ್ಯೆ ಶ್ರೀರಾಮ ದರ್ಬಾರಿನಲ್ಲಿರುವ ಶ್ರೀರಾಮ‌, ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಆಂಜನೇಯ ವಿಗ್ರಹಗಳಿಗೆ ತೊಡಿಸಲಾದ ಬೆಲೆಬಾಳುವ ಚಿನ್ನಾಭರಣಗಳನ್ನು ಉಡುಪಿಯಲ್ಲಿ ತಯಾರಿಸಲಾಗಿವೆ.

ಉಡುಪಿ: ಮಂಗಳವಾರ ಅಯೋಧ್ಯೆ ರಾಮಮಂದಿರದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮ ದ್ವಜಾರೋಹಣದ ಸಂದರ್ಭದಲ್ಲಿ, ಶ್ರೀರಾಮ ದರ್ಬಾರಿನಲ್ಲಿರುವ ಶ್ರೀರಾಮ‌, ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಆಂಜನೇಯ ವಿಗ್ರಹಗಳಿಗೆ ತೊಡಿಸಲಾದ ಬೆಲೆಬಾಳುವ ಚಿನ್ನಾಭರಣಗಳನ್ನು ಉಡುಪಿಯಲ್ಲಿ ತಯಾರಿಸಲಾಗಿವೆ.

ರಾಮಮಂದಿರದ ಮೊದಲು ಮಹಡಿಯಲ್ಲಿ ಶ್ರೀ ರಾಮ ಪಟ್ಟಾಭಿಷೇಕದ ದೃಶ್ಯವನ್ನು ಬಿಂಬಿಸುವ ಈ ಸುಂದರ ವಿಗ್ರಹಗಳಿವೆ. ಈ ವಿಗ್ರಹಗಳಿಗೆ ಲಕ್ಷಾಂತರ ರು. ಬೆಲೆಬಾಳುವ ಚಿನ್ನಾಭರಣಗಳನ್ನು ಮಂಗಳವಾರ ತೊಡಿಸಲಾಯಿತು.

ರಾಮ ಮಂದಿರದ ಟ್ರಸ್ಟ್‌ನ ಮನವಿಯಂತೆ ಉಡುಪಿಯ ಪ್ರಸಿದ್ಧ ಪರಂಪರಾಗತ ಚಿನ್ನಾಭರಣ ತಯಾರಕರಾದ ಸ್ವರ್ಣ ಜ್ಯುವೆಲ್ಪರ್ಸ್ ನವರು ಕೇವಲ‌ 10 ದಿನಗಳಲ್ಲಿ ಈ ಆಭರಣಗಳನ್ನು ತಯಾರಿಸಿ ಕೊಟ್ಟಿದ್ದಾರೆ. ಸೋಮವಾರ ಸಂಸ್ಥೆಯ ಗುಜ್ಜಾಡಿ ದೀಪಕ್ ನಾಯಕ್ ಮತ್ತಿತರರು ಅಯೋಧ್ಯೆಗೆ ತೆರಳಿ ಈ ಆಭರಣಗಳನ್ನು ಶಿಲಾ ವಿಗ್ರಹಳಿಗೆ ತೊಡಿಸಿದ್ದಾರೆ.

ಈ ಬಗ್ಗೆ ಸಂಸ್ಥೆಯ ಹಿರಿಯರಾದ ಗುಜ್ಜಾಡಿ ರಾಮದಾಸ ನಾಯಕರು ಅತೀವ ಸಂತಸ ವ್ಯಕ್ತಪಡಿಸಿದ್ದು, ಇದೊಂದು ಅಪೂರ್ವ ಅವಕಾಶ ಗುರುಹಿರಿಯರ ಪುಣ್ಯದಿಂದ ಲಭಿಸಿದೆ. ಅಯೋಧ್ಯೆ ಮಂದಿರ ಪೂರ್ಣಗೊಂಡು ಪ್ರಧಾನಿ ಅವರಿಂದ ಭಗವಾಧ್ವಜಾರೋಹಣದ ಹೊತ್ತಲ್ಲೇ ಈ ಆಭರಣ ತಯಾರಿಯ ಅವಕಾಶ ದೊರೆತದ್ದು ನಮ್ಮ ‘ಸ್ವರ್ಣ’ ಕುಟುಂಬಕ್ಕೆ ಶಾಶ್ವತ ಸ್ಮರಣೀಯ ಕ್ಷಣವಾಗಿದೆ ಎಂದಿದ್ದಾರೆ.

ಈ ಹಿಂದೆ ಸ್ವರ್ಣ ಸಂಸ್ಥೆಯು ಕಾಶಿ ಮಠಾಧೀಶರ ಆದೇಶದಂತೆ ಆಯೋಧ್ಯೆ ರಾಮನಿಗೆ ಬೆಳ್ಳಿ ಪಲ್ಲಕ್ಕಿ, ಸ್ವರ್ಣ ಅಟ್ಟೆ ಪ್ರಭಾವಳಿ, ಕಂಠೀಹಾರ ಇತ್ಯಾದಿಗಳನ್ನು ನಿರ್ಮಿಸುವ ಅವಕಾಶವೂ ದೊರೆತಿತ್ತು. ಈಗ ರಾಮ ಪಟ್ಟಾಭಿಷೇಕದ ಎಲ್ಲಾ ವಿಗ್ರಹಗಳಿಗೆ ಕಾಲಿನ ನೂಪುರ, ಕಂಠೀಹಾರ, ಕಿರೀಟ, ಕರ್ಣ ಕುಂಡಲ ಮುಂತಾದೆಲ್ಲಾ ಆಭರಣಗಳನ್ನು ತಯಾರಿಸಿ ತೊಡಿಸಲಾಗಿದೆ.