ಇಳಕಲ್ ಸೀರೆಯಲ್ಲಿ ಅರಳಿದ ಅಯೋಧ್ಯೆಯ ರಾಮ ಮಂದಿರ

| Published : Jan 19 2024, 01:47 AM IST

ಇಳಕಲ್ ಸೀರೆಯಲ್ಲಿ ಅರಳಿದ ಅಯೋಧ್ಯೆಯ ರಾಮ ಮಂದಿರ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಇಳಕಲ್ಲನ ಮೇಘರಾಜ ಗುದ್ದಟ್ಟಿ ಅವರು ಸೀರೆಯಲ್ಲಿಯೇ ಶ್ರೀರಾಮ ಮಂದಿರವನ್ನು ನಿರ್ಮಿಸಿದ್ದಾರೆ. ಜ.22ರಂದು ಶ್ರೀರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಇಳಕಲ್ಲ ಸೀರೆಯಲ್ಲಿ ಶ್ರೀರಾಮ ಮಂದಿರ ತಯಾರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಇಳಕಲ್ಲ

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಪ್ರತಿಷ್ಠಾಪನೆ ಅಂಗವಾಗಿ ಹಲವರು ನಾನಾ ರೀತಿಯ ಭಕ್ತಿಯನ್ನು ಅರ್ಪಿಸುತ್ತಿದ್ದಾರೆ. ಆದರೆ, ಇಲ್ಲೊಬ್ಬ ನೇಕಾರನೊಬ್ಬ ಸೀರೆಯಲ್ಲಿಯೇ ಶ್ರೀ ರಾಮ ಮಂದಿರವನ್ನು ತಯಾರಿಸಿ ಎಲ್ಲರನ್ನು ತನ್ನತ್ತ ಸೆಳೆದಿದ್ದಾನೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ಲನ ಮೇಘರಾಜ ಗುದ್ದಟ್ಟಿ ಅವರು ಸೀರೆಯಲ್ಲಿಯೇ ಶ್ರೀರಾಮ ಮಂದಿರವನ್ನು ನಿರ್ಮಿಸಿದ್ದಾರೆ. ನೇಕಾರಿಕೆಯಲ್ಲಿಯೇ ತಮ್ಮ ಬದುಕು ಕಂಡುಕೊಂಡಿರುವ ಮೇಘರಾಜ ಅವರು ಈ ಹಿಂದೆ ಹಲವಾರು ವಿಧದ ಚಿತ್ರಗಳನ್ನು ಸೀರೆಯಲ್ಲಿ ತಯಾರಿಸಿದ್ದರು. ಈಗ ಜ.22ರಂದು ಶ್ರೀರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಇಳಕಲ್ಲ ಸೀರೆಯಲ್ಲಿ ಶ್ರೀರಾಮ ಮಂದಿರ ತಯಾರಿಸಿದ್ದಾರೆ.

ಈ ಹಿಂದೆಯೂ ಕೂಡ ಮೇಘರಾಜ ಅವರು ಸಂದರ್ಭಕ್ಕೆ ತಕ್ಕಂತೆ ನಾನಾ ರೀತಿಯಲ್ಲಿ ಇಳಕಲ್ಲ ಸೀರೆಯಲ್ಲಿ ಚಿತ್ರಗಳನ್ನು ರೂಪಿಸಿದ್ದರು. ಈ ಹಿಂದೆ ಅವರು ರಾಷ್ಟ್ರಧ್ವಜ ನಿರ್ಮಿಸಿದ್ದರು. ಪುನೀತರಾಜ್‌ಕುಮಾರ್‌ ಅವರು ನಿಧನರಾಗಿದ್ದ ಸಂದರ್ಭದಲ್ಲಿ ಅವರ ಸವಿನೆನಪಿಗಾಗಿ ಇಳಕಲ್ಲ ಸೀರೆಯಲ್ಲಿ ಅಪ್ಪು ಚಿತ್ರವನ್ನು ನೇಯ್ದಿದ್ದರು. ಅಲ್ಲದೆ, ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಚಂದ್ರಯಾನ-3 ಚಿತ್ರ ಬಿಡಿಸಿದ್ದರು. ಅಲ್ಲದೆ, ಕಾಂತಾರ ಚಿತ್ರ ಜಗತ್ತಿನಾದ್ಯಂತ ಯಶಸ್ವಿಯಾದ ಹಿನ್ನೆಲೆಯಲ್ಲಿ ಅದಕ್ಕೆ ಆಸ್ಕರ್‌ ಪ್ರಶಸ್ತಿ ಸಿಗಲೆಂದು ಕಾಂತಾರ ಚಿತ್ರವನ್ನೂ ಅವರು ಸೀರೆಯಲ್ಲಿ ಹೆಣೆದಿದ್ದರು. ಅದರಂತೆ ಐಪಿಎಲ್‌ನಲ್ಲಿ ಆರ್‌ಸಿಬಿ ಗೆಲ್ಲಲಿ ಎಂದು ಆರ್‌ಸಿಬಿ ಚಿತ್ರವನ್ನೂ ಕೂಡ ಇಳಕಲ್ಲ ಸೀರೆಯಲ್ಲಿ ತಯಾರಿಸಿದ ಹೆಗ್ಗಳಿಕೆ ಇವರದು.

------

ಕೋಟ್‌....

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ನಾಲ್ಕು ದಿನಗಳಲ್ಲಿ ಇಳಕಲ್ಲ ಸೀರೆಯಲ್ಲಿ ಶ್ರೀರಾಮಮಂದಿರ ಚಿತ್ರದ ಸೀರೆ ಹೆಣೆದಿರುವೆ. ಅಯೋಧ್ಯೆಯಲ್ಲಿ ಇದನ್ನು ಮ್ಯೂಸಿಯಂನಲ್ಲಿ ಇಡುವುದಾದರೆ, ಇದನ್ನು ಅಲ್ಲಿಗೆ ಉಚಿತವಾಗಿ ನೀಡುತ್ತೇನೆ.

- ಮೇಘರಾಜ ಗುದ್ದಟ್ಟಿ, ಇಳಕಲ್ಲ ಸೀರೆ ತಯಾರಕ, ಇಳಕಲ್ಲ