ಸಾರಾಂಶ
ಜೈಶ್ರೀರಾಮ್ ಮಂದಿರವಲ್ಲೇ ಕಟ್ಟಿದೆವು ಕೃತಿ ಬಿಡುಗಡೆ
ಕನ್ನಡಪ್ರಭ ವಾರ್ತೆ ದಾವಣಗೆರೆಅಯೋಧ್ಯೆಯ ಶ್ರೀರಾಮ ಮಂದಿರ ಕೇವಲ ಮಂದಿರವಾಗಿರದೇ, ದೇಶದ ಸಂಸ್ಕೃತಿ, ಸಂಸ್ಕಾರವಷ್ಟೇ ಅಲ್ಲ, ಈ ದೇಶದ ಅಸ್ಮಿತೆಯ ಸಂಕೇತವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ತಿಳಿಸಿದರು.
ನಗರದ ನಿಟುವಳ್ಳಿಯ ಶ್ರೀ ಸೋಮೇಶ್ವರ ಶಾಲೆಯ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ಜೈಶ್ರೀರಾಮ್ ಮಂದಿರವಲ್ಲೇ ಕಟ್ಟಿದೆವು ಶ್ರೀರಾಮ ಜನ್ಮಭೂಮಿಗಾಗಿ ನಡೆದ 496 ವರ್ಷಗಳ ಹೋರಾಟ ಪರಿಚಯಿಸುವ ಸಂಗ್ರಹ ಯೋಗ್ಯ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಶ್ರೀರಾಮ ಮಂದಿರ ಶತಶತಮಾನಗಳ ಕನಸಾಗಿದ್ದು, ಜ.22ರಂದು ಅದು ಸಾಕಾರಗೊಳ್ಳುತ್ತಿರುವುದು ಭಾರತದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡುವ ಕ್ಷಣಗಳಾಗಿವೆ ಎಂದರು.ಪಾರಂಪರಿಕ, ಪಾರಿವಾರಿಕತೆಯ ಸಂಕೇತ ಶ್ರೀರಾಮ ಮಂದಿರ. ಈ ಎಲ್ಲಾ ಹೋರಾಟಗಳ ಪ್ರತೀಕ, ಹೋರಾಟದ ಫಲವಾಗಿ ಪ್ರಾಣ ಪ್ರತಿಷ್ಠಾಪನೆ, ಶ್ರೀರಾಮ ಮಂದಿರ ಲೋಕಾರ್ಪಣೆಯಾಗುತ್ತಿದೆ. ಇದು ಭಾರತೀಯರಷ್ಟೇ ಅಲ್ಲ, ಇಡೀ ಜಗತ್ತಿನ ಸಮಸ್ತ ರಾಮಭಕ್ತರ ಬದುಕಿನ ಮಹತ್ವದ ಕ್ಷಣಗಳು, ಭಕ್ತರ ಬದುಕಿನ ನಿಜವಾದ ಹಬ್ಬದ ಕ್ಷಣಗಳಾಗಿವೆ ಎಂದು ಹೇಳಿದರು.
ಶ್ರೀರಾಮ ಮಂದಿರದ ಮೇಲೆ ಶತಮಾನಗಳ ಹಿಂದೆ ನಡೆದ ದಾಳಿಯಿಂದ ಹಿಡಿದು, ಈಚಿನವರೆಗೆ ಲಕ್ಷಾಂತರ ಜನರು ತ್ಯಾಗ, ಬಲಿದಾನ ಮಾಡಿದ್ದಾರೆ. ಕಡೆಗೂ ಶ್ರೀರಾಮನ ಸಂಕಲ್ಪವೋ, ಕೋಟ್ಯಾಂತರ ಭಕ್ತರ ಪ್ರಾರ್ಥನೆಯ ಫಲವೋ ಎಂಬಂತೆ ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿಯಲ್ಲೇ ಪ್ರಭು ಶ್ರೀರಾಮಚಂದ್ರನ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಈಗಾಗಲೇ ಪ್ರಾಣ ಪ್ರತಿಷ್ಠಾಪನೆ, ಮಂದಿರ ಉದ್ಘಾಟನೆ ಪೂರ್ವದ ಧಾರ್ಮಿಕ ಕಾರ್ಯಗಳೂ ಸಾಗಿವೆ ಎಂದು ತಿಳಿಸಿದರು.ಜೈ ಶ್ರೀರಾಮ ಮಂದಿರವಲ್ಲೇ ಕಟ್ಟುದೆವು ಕೃತಿಯಲ್ಲಿ ಶ್ರೀರಾಮ ಜನ್ಮಭೂಮಿಗಾಗಿ ಆಯಾ ಕಾಲಕ್ಕೆ ನಡೆದ ಘಟನೆಗಳನ್ನು ಎಳೆ ಎಳೆಯಾಗಿ ಬಿಡಿಸಿಡುವ ಪ್ರಯತ್ನವನ್ನು ಈ ಕೃತಿಯ ಮೂಲಕ ಸಂಪಾದಕ ರಮೇಶ ಕುಮಾರ ನಾಯಕ್ ಮಾಡಿದ್ದಾರೆ. ಪ್ರತಿಯೊಬ್ಬರೂ ಮಹತ್ವದ ಈ ಕೃತಿಯನ್ನು ಓದಿ, ಮಂದಿರ ಹೋರಾಟದ ಹಿನ್ನೆಲೆ, ಮಹತ್ವ ಅರಿಯಬೇಕು ಎಂದು ಕಿವಿಮಾತು ಹೇಳಿದರು.
ಸರ್ಕಾರಗಳ ನೀತಿಯಿಂದ ವಿಳಂಬ:ಕೃತಿಯ ಸಂಪಾದಕ ರಮೇಶ ಕುಮಾರ ನಾಯಕ್ ಮಾತನಾಡಿ, ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಮಂದಿರ ಕಟ್ಟಲು 496 ವರ್ಷಗಳ ಕಾಲ ಸುಧೀರ್ಘ ಹೋರಾಟ ನಡೆಸಬೇಕಾಗಿದ್ದು ನಮ್ಮ ದುರ್ಧೈವ. ಇದಕ್ಕೆ ನಮ್ಮನ್ನು ಆಳಿದ ಸರ್ಕಾರಗಳ ನೀತಿಗಳೂ ಕಾರಣ. ತುಷ್ಟೀಕರಣ, ಓಲೈಕೆ ರಾಜಕೀಯದಿಂದಾಗಿ ಶ್ರೀರಾಮ ಮಂದಿರ ನಿರ್ಮಿಸಲು ವಿಳಂಬವಾಯಿತು. ಅದೇ ರೀತಿ ನ್ಯಾಯಾಂಗದ ವಿಳಂಬವೂ ಆಗಿದೆ. ಸತತ 134 ವರ್ಷಗಳ ನಿರಂತರ ಹೋರಾಟದ ಫಲವಾಗಿ ನಮಗೆ ನ್ಯಾಯ ಸಿಕ್ಕಿದೆ ಎಂದರು.
ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಶ್ರೀ ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ಸುರೇಶ, ಸಂಘದ ಹಿರಿಯರಾದ ಕೆ.ಬಿ.ಶಂಕರ ನಾರಾಯಣ, ಮಾಜಿ ಶಾಸಕ ಟಿ.ಗುರುಸಿದ್ದನಗೌಡ, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ ಸೇರಿ ಅನೇಕರಿದ್ದರು. ಅನುಶ್ರೀ ಬಳಗದ ವೀಣಾ ಹೆಗಡೆ ತಂಡವು ಶ್ರೀರಾಮನ ಕುರಿತ ಹಾಡುಗಳ ಗಾಯನ ನಡೆಸಿಕೊಟ್ಟಿತು. ಮಂದಿರ ಹಿಂದೂಗಳ ಏಕತೆಯ ಸಂಕೇತಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವುದು ಕೇವಲ ಶ್ರೀರಾಮ ಮಂದಿರ ಅಲ್ಲ. ಅದು ರಾಷ್ಟ್ರೀಯ, ಧಾರ್ಮಿಕ, ಹಿಂದೂಗಳ ಏಕತೆಯ ಸಂಕೇತ. ಶ್ರೀರಾಮ ಮಂದಿರಕ್ಕಾಗಿ ಕಳೆದ 496 ವರ್ಷಗಳ ಸುದೀರ್ಘ ಹೋರಾಟದ ಕುರಿತಂತೆ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ಶ್ರೀರಾಮ ಮಂದಿರ ಭಾರತೀಯರಷ್ಟೇ ಅಲ್ಲ, ಜಗತ್ತಿನಾದ್ಯಂತ ಇರುವ ಶ್ರೀರಾಮ ಭಕ್ತರ ಆರಾಧನಾ ಕ್ಷೇತ್ರವೂ ಆಗಿದೆ. ಮತ್ತೆ ಅಯೋಧ್ಯೆಯಲ್ಲಿ ಮತ್ತೆ ರಾಮ ರಾಜ್ಯವನ್ನು ಕಾಣುತ್ತಿದ್ದೇವೆ.
ರಮೇಶ ಕುಮಾರ ನಾಯಕ್, ಕೃತಿಯ ಸಂಪಾದಕ