ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವೇದಿಕೆಯಲ್ಲಿ ಆಯೋಜಿಸಿದ್ದ ಆಯುಧ ಪೂಜೋತ್ಸವ, ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜನಮನಸೂರೆಗೊಂಡಿತು.ಪೂಜೋತ್ಸವ ಹಿನ್ನೆಲೆ ಪಟ್ಟಣದ ಎಲ್ಲ ಪ್ರತಿಮೆಗಳನ್ನು ಶುಚಿಗೊಳಿಸಿ, ತಳಿರು ತೋರಣಗಳಿಂದ ಸಿಂಗರಿಸಿ, ಮಾಲಾರ್ಪಣೆ ನೆರವೇರಿಸಲಾಯಿತು. ಬೆಳಗ್ಗೆ ಮೋಟಾರ್ ಯೂನಿಯನ್‌ನ ಕಚೇರಿಯಲ್ಲಿ ಪೂಜೆ ನೆರವೇರಿಸುವ ಮೂಲಕ ಪ್ರಸಕ್ತ ವರ್ಷದ ಕಾರ್ಯಕ್ರಮಗಳಿಗೆ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಚಾಲನೆ ನೀಡಿದರು.
ನಂತರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಿ, ಖಾಸಗಿ ಬಸ್ ನಿಲ್ದಾಣದ ವೇದಿಕೆಯಲ್ಲಿ ಆಯುಧ ಪೂಜಾ ಸಮಾರಂಭಕ್ಕೆ ಚಾಲನೆ ನೀಡಲಾಯಿತು.ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಸಾಮೂಹಿಕವಾಗಿ ಆಚರಣೆಗೊಳ್ಳುವ ಹಬ್ಬಗಳಿಂದ ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ. ಈ ನಿಟ್ಟಿನಲ್ಲಿ ಮೋಟಾರ್ ಯೂನಿಯನ್‌ನಿಂದ ಕಳೆದ 47 ವರ್ಷಗಳಿಂದಲೂ ಜನೋತ್ಸವದಂತೆ ಆಯುಧ ಪೂಜಾ ಸಮಾರಂಭವನ್ನು ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಸಂಘದ ಸದಸ್ಯರಾದ ಸುಲೈಮಾನ್, ರಾಮಚಂದ್ರ ಸೇರಿದಂತೆ ಸಾಮಾಜಿಕ ಕ್ಷೇತ್ರದ ಸೇವೆಗಾಗಿ ಲೈನ್‌ಮೆನ್ ಸದಾಶಿವ ಜಾದವ್, ಹಾಕಿ ತರಬೇತುದಾರ ಜನಾರ್ಧನ್ ಅವರನ್ನು ಸನ್ಮಾನಿಸಲಾಯಿತು.ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಗೆ ತಾಲೂಕು ಮಟ್ಟದಲ್ಲಿ ನೃತ್ಯ ಸ್ಪರ್ಧೆ, ಕಾಲೇಜು ಮತ್ತು ಸಾರ್ವಜನಿಕ ವಿಭಾಗದಲ್ಲಿ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ ನಡೆದು ವಿಜೇತರಿಗೆ ನಗದು ಬಹುಮಾನ ವಿತರಿಸಲಾಯಿತು. ಮಧ್ಯಾಹ್ನ ಜೇಸೀ ವೇದಿಕೆ ಬಳಿಯಲ್ಲಿ ಸಾವಿರಾರು ಮಂದಿಗೆ ಅನ್ನ ಸಂತರ್ಪಣೆ ನೆರವೇರಿತು. ಇದರೊಂದಿಗೆ ಅಲಂಕೃತ ವರ್ಕ್ಶಾಪ್, ವಾಹನಗಳ ಸ್ಪರ್ಧೆಯನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ರಾತ್ರಿ ಬೆಂಗಳೂರಿನ ವಿ.ಪಿ.ಆರ್. ಈವೆಂಟ್ಸ್ ತಂಡದಿಂದ ಮೂಡಿಬಂದ ಸಂಗೀತ ರಸಮಂಜರಿ ಕಾರ್ಯಕ್ರಮ ರಂಜಿಸಿತು. ಭಕ್ತಿ ಗೀತೆ, ಚಲನ ಚಿತ್ರಗೀತೆಗಳ ಗಾಯನ ಗಮನ ಸೆಳೆಯಿತು. ತಡರಾತ್ರಿಯವರೆಗೂ ಯುವ ಸಮೂಹ ಸಂಗೀತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿತು. ಕಿರುತೆರೆಯ ಸರಿಗಮಪ, ಕನ್ನಡ ಕೋಗಿಲೆ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ನ ವಿವಿಧ ಕಲಾವಿದರು ಸಂಗೀತ ರಸದೌತಣ ಉಣಬಡಿಸಿದರು.ಅಧ್ಯಕ್ಷತೆಯನ್ನು ಮೋಟಾರ್ ಯೂನಿಯನ್ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ವಹಿಸಿದ್ದರು. ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ಜಿ.ಪಂ. ಮಾಜಿ ಸದಸ್ಯ ಬಿ.ಜೆ. ದೀಪಕ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸದಸ್ಯ ಬಿ.ಆರ್. ಮಹೇಶ್, ಹಿಂದೂ ಜಾಗರಣಾ ವೇದಿಕೆ ಉಮೇಶ್, ಸೂಡಾ ಅಧ್ಯಕ್ಷ ಕೆ.ಎ. ಆದಂ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್, ಕೆಟಿಡಿಓ ಅಧ್ಯಕ್ಷ ವಸಂತ್ ಆಚಾರ್ಯ, ಸಿಆರ್‌ಪಿಎಫ್‌ನ ನಿವೃತ್ತ ಅಧಿಕಾರಿ ಮಂಜುನಾಥ್, ಜೇಸಿ ಮಾಜಿ ಅಧ್ಯಕ್ಷೆ ಎಂ.ಎ. ರುಬೀನಾ, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ, ಸಂಘದ ಪದಾಧಿಕಾರಿಗಳಾದ ಕೆ.ಜಿ. ಸುರೇಶ್, ಎ.ಪಿ. ವೀರರಾಜು, ಭರತ್, ವಿನ್ಸಿ, ರಂಗಸ್ವಾಮಿ, ಸುನಿಲ್ ಹಾನಗಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))