ಇಲ್ಲಿನ ಬಹುತೇಕ ಸಣ್ಣ ಹಾಗೂ ಬೃಹತ್ ಕೈಗಾರಿಕೆಗಳು, ಗ್ಯಾರೇಜ್ಗಳು ಮತ್ತು ಕಚೇರಿಗಳಲ್ಲಿ ಆಯುಧಪೂಜೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಾಹನ ಮತ್ತು ಮಷಿನ್ಗಳಿಗೆ ದೃಷ್ಟಿ ತೆಗೆಯಲು ಬಳಸುವ ಬೂದು ಕುಂಬಳಕಾಯಿ ಮತ್ತು ನಿಂಬೆಹಣ್ಣಿನ ದರ ಕೇಳಿದರೆ ಗ್ರಾಹಕರು ಬೆಚ್ಚಿಬೀಳುವಂತಾಗಿದೆ. ಕೇವಲ ₹30- ₹40ಕ್ಕೆ ಸಿಗುತ್ತಿದ್ದ ಒಂದು ಕುಂಬಳಕಾಯಿ ಈಗ ₹100 ರಿಂದ ₹150 ದಾಟಿದೆ.
ಕನ್ನಡಪ್ರಭ ವಾರ್ತೆ ದಾಬಸ್ಪೇಟೆ
ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆ ಪಟ್ಟಣದ ಪ್ರಮುಖ ಮಾರುಕಟ್ಟೆಗಳಲ್ಲಿ ಹೂವು- ಹಣ್ಣುಗಳ ಬೆಲೆ ಗಗನಕ್ಕೇರಿದೆ. ಏಷ್ಯಾದಲ್ಲೇ ದೊಡ್ಡದಾದ ಕೈಗಾರಿಕಾ ಪ್ರದೇಶವನ್ನು ಹೊಂದಿರುವ ದಾಬಸ್ಪೇಟೆಯಲ್ಲಿ ಸಹಸ್ರಾರು ಕಾರ್ಖಾನೆಗಳು ಹಾಗೂ ವಾಹನಗಳ ಪೂಜೆಗೆ ಸಿದ್ಧತೆ ಜೋರಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ವರ್ತಕರು ಸಾಮಗ್ರಿಗಳ ದರವನ್ನು ದುಪ್ಪಟ್ಟು ಮಾಡಿದ್ದಾರೆ.ಕಾರ್ಖಾನೆಗಳೇ ಪ್ರಮುಖ ಟಾರ್ಗೆಟ್:
ಇಲ್ಲಿನ ಬಹುತೇಕ ಸಣ್ಣ ಹಾಗೂ ಬೃಹತ್ ಕೈಗಾರಿಕೆಗಳು, ಗ್ಯಾರೇಜ್ಗಳು ಮತ್ತು ಕಚೇರಿಗಳಲ್ಲಿ ಆಯುಧಪೂಜೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಾಹನ ಮತ್ತು ಮಷಿನ್ಗಳಿಗೆ ದೃಷ್ಟಿ ತೆಗೆಯಲು ಬಳಸುವ ಬೂದು ಕುಂಬಳಕಾಯಿ ಮತ್ತು ನಿಂಬೆಹಣ್ಣಿನ ದರ ಕೇಳಿದರೆ ಗ್ರಾಹಕರು ಬೆಚ್ಚಿಬೀಳುವಂತಾಗಿದೆ. ಕೇವಲ ₹30- ₹40ಕ್ಕೆ ಸಿಗುತ್ತಿದ್ದ ಒಂದು ಕುಂಬಳಕಾಯಿ ಈಗ ₹100 ರಿಂದ ₹150 ದಾಟಿದೆ.ಮಳೆಯ ಎಫೆಕ್ಟ್:
ಕಳೆದ ಕೆಲವು ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದಾಗಿ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳಲ್ಲಿ ಹೂವಿನ ಇಳುವರಿ ಸಂಪೂರ್ಣ ಕುಸಿದಿದೆ. ಬೆಂಗಳೂರು ಕೆ.ಆರ್. ಮಾರುಕಟ್ಟೆ, ತುಮಕೂರು ಹಾಗೂ ನೆಲಮಂಗಲದಿಂದ ಇಲ್ಲಿಗೆ ಬರುವ ಹೂವಿನ ಪ್ರಮಾಣ ಕಡಿಮೆಯಾಗಿದ್ದು, ಬೇಡಿಕೆ ಮಾತ್ರ ಹೆಚ್ಚಾಗಿದೆ. ಸೇವಂತಿ ಹಾಗೂ ಮಲ್ಲಿಗೆ ಹೂವುಗಳು ಮಧ್ಯಮ ವರ್ಗದವರ ಕೈಗೆಟುಕದಷ್ಟು ದುಬಾರಿಯಾಗಿವೆ.ಗ್ರಾಹಕರ ಅಳಲು:
ಪ್ರತಿ ವರ್ಷ ಆಯುಧ ಪೂಜೆಗೆ ಫ್ಯಾಕ್ಟರಿ ಮತ್ತು ಗಾಡಿಗಳನ್ನು ಅಲಂಕರಿಸಲು ಹೂವು- ಹಣ್ಣು ಕೊಳ್ಳುತ್ತೇವೆ. ಆದರೆ ಈ ಬಾರಿ ಬಜೆಟ್ ಸಂಪೂರ್ಣ ಕೈಮೀರಿದೆ. ದರ ದುಪ್ಪಟ್ಟಾಗಿದ್ದರೂ ಹಬ್ಬ ಮಾಡಲೇಬೇಕಾದ ಕಾರಣ ಅನಿವಾರ್ಯವಾಗಿ ಖರೀದಿಸುತ್ತಿದ್ದೇವೆ ಎಂದು ಗ್ರಾಹಕ ಶ್ರೀನಿವಾಸ್ ಅಳಲು ತೋಡಿಕೊಂಡರು.ವರ್ತಕರ ಸಮರ್ಥನೆ:
ನಮಗೆ ಮಾರುಕಟ್ಟೆಯಲ್ಲೇ ಸಾರಿಗೆ ವೆಚ್ಚ ಮತ್ತು ಹೂವಿನ ಖರೀದಿ ದರ ಹೆಚ್ಚಾಗಿದೆ. ಮಳೆಯಿಂದಾಗಿ ಶೇ. 30ರಷ್ಟು ಹೂವುಗಳು ಕೊಳೆತು ಹೋಗಿವೆ. ನಷ್ಟ ಭರಿಸಲು ಸ್ವಲ್ಪ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಹೂವಿನ ವ್ಯಾಪಾರಿ ಸಿದ್ದರಾಜು ಸಮರ್ಥಿಸಿಕೊಂಡರು.