ಸಾರಾಂಶ
ಸಿದ್ದಾಪುರದಲ್ಲಿ 32ನೇ ವರ್ಷದ ಆಯುಧ ಪೂಜೆ ಸಂಭ್ರಮದಿಂದ ನೆರವೇರಿತು.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ವಾಹನ ಚಾಲಕರ ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಿದ್ದಾಪುರದಲ್ಲಿ 32ನೇ ವರ್ಷದ ಆಯುಧ ಪೂಜೆ ಸಂಭ್ರಮದಿಂದ ನೆರವೇರಿತು. ಬಸ್ ನಿಲ್ದಾಣದ ಭವ್ಯ ಮಂಟಪದಲ್ಲಿ ಸಿದ್ದಾಪುರ ಕ್ರೈಂ ವಿಭಾಗಾದ ಠಾಣಾಧಿಕಾರಿ ಶಿವಣ್ಣ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಭಾರತೀಯ ಮಜ಼್ದೂರ್ ಸಂಘದ ಅಧ್ಯಕ್ಷರಾದ ಸೂದನ ಸತೀಶ್ ದೀಪ ಬೆಳಗಿಸುವುದರ ಮೂಲಕ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಮಕ್ಕಳ ನಿಧಾನ ಸೈಕಲ್ ಸರ್ಧೆ, ಯುವಕರ ಓಟ ಸೇರಿದಂತೆ ಕ್ರೀಡಾಕೂಟಗಳು, ವಿದ್ಯಾರ್ಥಿಗಳಿಂದ ಭರತನಾಟ್ಯ, ಜಾನಪದ ಹಾಗೂ ಸಾಮೂಹಿಕ ನೃತ್ಯಗಳು ಪ್ರೇಕ್ಷಕರನ್ನು ಆಕರ್ಷಿಸಿತು. ಕಾರ್ಯಕ್ರಮಕ್ಕೆ ಆಗಮಿಸಿದ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಕೇರಳದ ಕೋಯಿಕೋಡದ ಸಾರಂಗ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಸಿದ್ದಾಪುರ ವಿರಾಜಪೇಟೆ ನೆಲ್ಯಹುದಿಕೇರಿಯ ನೃತ್ಯ ಶಾಲೆಗಳ ಮಕ್ಕಳಿಂದ ವಿವಿಧ ನೃತ್ಯಗಳು ನಡೆದವು. ಸಿದ್ದಾಪುರ ಸುತ್ತಮುತ್ತಲಿನ ಭಾಗದಿಂದ ನೂರಾರು ಸಾರ್ವಜನಿಕರು ಆಗಮಿಸಿದ್ದರು.ಈ ಸಂದರ್ಭ ಬಿ ಎಂ ಎಸ್ ಸಂಘದ ಕಾರ್ಯದರ್ಶಿ ಅನಿಶ್, ಸಂಘದ ಪದಾಧಿಕಾರಿಗಳು ಸದಸ್ಯರು ಇದ್ದರು.