ಸಾರಾಂಶ
ಸಂಸ್ಥೆಯ ವಿದ್ಯಾರ್ಥಿಗಳಿಂದ ಧನ್ವಂತರಿ ಭಜನೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಆಸ್ಪತ್ರೆಯ ಅಧಿಕಾರಿ ಡಾ. ಸತೀಶ್ ಆಚಾರ್ಯ ವಿದ್ಯಾರ್ಥಿಗಳಿಗೆ ಆಯುರ್ವೇದ ಆವಿಷ್ಕಾರಗಳ ಬಗ್ಗೆ ತಿಳುವಳಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಮುನಿಯಾಲ್ ಆಯುರ್ವೇದ ಕಾಲೇಜಿನಲ್ಲಿ 9ನೇ ರಾಷ್ಟ್ರೀಯ ಆಯುರ್ವೇದ ದಿನ ಹಾಗೂ ಧನ್ವಂತರಿ ಜಯಂತಿಯ ಅಂಗವಾಗಿ ಜಾಗತಿಕ ಆರೋಗ್ಯಕ್ಕಾಗಿ ಆಯುರ್ವೇದ ನಾವೀನ್ಯತೆ ಎಂಬ ಧ್ಯೇಯ ವಾಕ್ಯದೊಂದಿಗೆ ಸಂಸ್ಥೆಯ ವಿವಿಧ ವಿಭಾಗಗಳಿಂದ ಆಯುರ್ವೇದ ವಸ್ತು ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ - ‘ಆಯುರ್ವೇದ ಹೃತ್ಪಥಾ’ ವನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಕ್ರಮಕ್ಕೆ ಮಣಿಪಾಲದ ವಿವಿಧ ಶಾಲೆಗಳಾದ ಮಣಿಪಾಲದ ಕ್ರೈಸ್ಟ್ ಸ್ಕೂಲ್, ರಾಜೀವ ನಗರದ ಸರ್ಕಾರಿ ಪ್ರೌಢಶಾಲೆ ಹಾಗೂ ಶೆಟ್ಟಿಬೆಟ್ಟು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಆಗಮಿಸಿದ್ದರು.
ಅಪರಾಹ್ನ ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ಧನ್ವಂತರಿ ಭಜನೆ ನಡೆಯಿತು. ನಂತರ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಆಸ್ಪತ್ರೆಯ ಅಧಿಕಾರಿ ಡಾ.ಸತೀಶ್ ಆಚಾರ್ಯ ಮುಖ್ಯ ಅತಿಥಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಆಯುರ್ವೇದ ಆವಿಷ್ಕಾರಗಳ ಬಗ್ಗೆ ತಿಳುವಳಿಕೆ ನೀಡಿದರು.ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ದಿನಕರ ಡೋಂಗ್ರೆ, ಸಂಸ್ಥೆಯ ಪ್ರಾಂಶುಪಾಲ ಡಾ.ಸತ್ಯನಾರಾಯಣ ಬಿ., ಮುನಿಯಾಲ್ ಸಂಸ್ಥೆಯ ಟ್ರಸ್ಟಿ ಡಾ.ಶ್ರದ್ಧಾ ಶೆಟ್ಟಿ, ಉಪಪ್ರಾಂಶುಪಾಲ ವಿದ್ವಾನ್ ಹರಿಪ್ರಸಾದ್ ಭಟ್, ಪಿಜಿ ಡೀನ್ ಡಾ.ಚಂದ್ರಕಾಂತ್ ಭಟ್, ಯುಜಿ ಡೀನ್ ಡಾ.ಶುಭಾ ಎಂ. ಉಪಸ್ಥಿತರಿದ್ದರು.
ಡಾ.ಅಶ್ವಿನಿ ನಾಯಕ್ ಸ್ವಾಗತಿಸಿ, ಡಾ.ನಮಿತಾ ವಂದಿಸಿದರು. ಡಾ.ಅಪರ್ಣಾ ಶಾನುಭಾಗ್ ಅವರು ಅತಿಥಿಗಳ ಕಿರುಪರಿಚಯ ಮಾಡಿಕೊಟ್ಟರು. ಡಾ. ಅನುಪಮ ದೇವಸ್ಯ ಬಹುಮಾನಿತರ ಹೆಸರನ್ನು ವಾಚಿಸಿದರು. ಡಾ.ದೀಪ್ತಿ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.