ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಆಯುರ್ವೆದದ ಮೂಲ ಭಾರತವಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಭಾರತೀಯರು ವಿದೇಶಿ ಚಿಕಿತ್ಸಾ ವಿಧಾನಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಬೇಗ ಗುಣಮುಖರಾಗಲು ವಿದೇಶಿ ಔಷಧಿ ಸೇವನೆಗೆ ಮುಂದಾಗುತ್ತಿರುವ ಸಂದರ್ಭದಲ್ಲೂ, ಆಯುರ್ವೆದವ ಯಾವುದೇ ದುಷ್ಪರಿಣಾಮಗಳಿಲ್ಲದೆ ನಿಧಾನವಾಗಿ ಜೀವನದ ತುಂಬಾ ಲಾಭ ನೀಡುವ ಚಿಕಿತ್ಸಾ ವಿಧಾನವಾಗಿದೆ. ಆದ್ದರಿಂದ ಇಂದಿನ ದಿನಗಳಲ್ಲಿ ಆಯುರ್ವೇದ ಪ್ರಚಾರವನ್ನು ಹೆಚ್ಚಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಪಿ. ಎಚ್. ಪೂಜಾರ ಹೇಳಿದರು.ನಗರದ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆಯುಷ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಧನ್ವಂತರಿ ಜಯಂತಿ ಹಾಗೂ 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಧನ್ವಂತರಿ ದೇವರನ್ನು ಆಯುರ್ವೇದ ಚಿಕಿತ್ಸೆಯ ಪಿತಾಮಹರಾಗಿ ಪರಿಗಣಿಸಲಾಗಿದ್ದು, ಈ ವಿಧಾನ ಪರಂಪರೆಯಿಂದಲೇ ಬೆಳೆದು ಬಂದಿದೆ. ಗಿಡಮೂಲಿಕೆಗಳು ಹಾಗೂ ಆಹಾರ ಪದ್ಧತಿಯಲ್ಲಿ ಬದಲಾವಣೆ ಅಳವಡಿಸಿಕೊಂಡು ಸುಲಭವಾಗಿ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕಣ್ಣವರ ಅವರು, ವಿದೇಶಿ ಚಿಕಿತ್ಸಾ ವಿಧಾನ ತಾತ್ಕಾಲಿಕವಾಗಿ ಗುಣ ಮಾಡಿದರೂ ಆಯುರ್ವೇದ ದೀರ್ಘಕಾಲದ ಆರೋಗ್ಯ ರಕ್ಷಣೆಗೆ ನೆರವಾಗುತ್ತದೆ. ಯಾವುದೇ ದುಷ್ಪರಿಣಾಮವಿಲ್ಲದೆ ಜನರನ್ನು ಗುಣಪಡಿಸುವ ಸಾಮರ್ಥ್ಯ ಆಯುರ್ವೇದಕ್ಕೆ ಇದೆ. ನಮ್ಮ ಪೂರ್ವಜರು ಅನೇಕ ಆರೋಗ್ಯ ಸಮಸ್ಯೆಗಳನ್ನು ಗಿಡಮೂಲಿಕೆಗಳಿಂದ ಪರಿಹರಿಸಿಕೊಂಡಿದ್ದಾರೆ. ಯೋಗ-ಧ್ಯಾನದ ಅಭ್ಯಾಸದಿಂದ ಆರೋಗ್ಯ ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಆದ್ದರಿಂದ ಆಯುರ್ವೆದದ ಕುರಿತು ಹೆಚ್ಚಿನ ಅರಿವು ಮೂಡಿಸಲು ಸಾಮೂಹಿಕ ಮಟ್ಟದಲ್ಲಿ ತಿಳಿವಳಿಕೆ ಕಾರ್ಯಕ್ರಮ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಜಿಲ್ಲಾ ಆಯುಷ್ ಅಧಿಕಾರಿ ಡಾ.ಶೇಖರಯ್ಯ ಮಠ, ನಿವೃತ್ತ ನ್ಯಾಯಾಧೀಶರು ಹಾಗೂ ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಡಿ.ವೈ. ಬಸಾಪುರ, ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕರು ಮಹೇಶ ಕೋಣೆ, ಜಿಲ್ಲಾ ಮಲೇರಿಯಾ ಅಧಿಕಾರಿ ಕುಸುಮ ಮಾಗಿ ಸೇರಿದಂತೆ ಅನೇಕರು ಇದ್ದರು.ಈಗಿನ ಯುವಕರು ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದು, ಅವೈಜ್ಞಾನಿಕ ಆಹಾರ ಪದ್ಧತಿ ಅನುಸರಿಸುತ್ತಿರುವುದು ಕಳವಳಕಾರಿಯಾಗಿದೆ. ಹಣ-ಆಸ್ತಿ ಕಳೆದುಕೊಂಡರೆ ಮತ್ತೆ ಗಳಿಸಬಹುದು, ಆರೋಗ್ಯ ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆಯೇ. ಆದ್ದರಿಂದ ಯೋಗ ಹಾಗೂ ಆಯುರ್ವೆದ ಪ್ರಚಾರ-ಪ್ರಸಾರವನ್ನು ವೈದ್ಯರು ಹಾಗೂ ಆಯುಷ್ ಇಲಾಖೆ ಸಿಬ್ಬಂದಿ ಜವಾಬ್ದಾರಿಯುತವಾಗಿ ಮಾಡಬೇಕಿದೆ. ಮೊದಲು ಅವರೇ ತಮ್ಮ ಜೀವನದಲ್ಲಿ ಆಯುರ್ವೇದ ಅಳವಡಿಸಿಕೊಂಡು ಗ್ರಾಮೀಣ ಮಟ್ಟದಲ್ಲಿಯೂ ಇದರ ಉಪಯೋಗ ಮನವರಿಕೆ ಮಾಡಬೇಕಿದೆ.
- ಪಿ. ಎಚ್. ಪೂಜಾರ ವಿಧಾನ ಪರಿಷತ್ ಸದಸ್ಯ