ಆಯುರ್ವೇದವು ಅತ್ಯಂತ ಪುರಾತನ ಹಾಗೂ ವೈಜ್ಞಾನಿಕ ವೈದ್ಯ ಪದ್ಧತಿಯಾಗಿದ್ದು, ಅದರ ಸಿದ್ಧಾಂತ ಹಾಗೂ ನಿಯಮ ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಹೊಸಪೇಟೆ: ರೋಗ್ಯಕರ ಹಾಗೂ ಸದೃಢ ಸಮಾಜ ನಿರ್ಮಾಣದಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ನಗರದ ಬ್ರಹ್ಮಕುಮಾರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಆಯುರ್ವೇದವು ಅತ್ಯಂತ ಪುರಾತನ ಹಾಗೂ ವೈಜ್ಞಾನಿಕ ವೈದ್ಯ ಪದ್ಧತಿಯಾಗಿದ್ದು, ಅದರ ಸಿದ್ಧಾಂತ ಹಾಗೂ ನಿಯಮ ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿಶೇಷವಾಗಿ ಆಶಾ ಕಾರ್ಯಕರ್ತೆಯರು ಆಯುರ್ವೇದದ ಆರೋಗ್ಯಪರ ಸಿದ್ಧಾಂತ ಅರಿತು ಅವುಗಳನ್ನು ಜನರಿಗೆ ತಲುಪಿಸುವ ಮೂಲಕ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು. ಜನರಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿದ್ದು, ಆಯುರ್ವೇದದ ಜೀವನಶೈಲಿ ಹಾಗೂ ಆರೋಗ್ಯ ಸಂರಕ್ಷಣೆಯ ವಿಧಾನ ಜನರಿಗೆ ತಿಳಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ರಾಧಿಕಾ ಮಾತನಾಡಿ, ಆಯುರ್ವೇದ ಚಿಕಿತ್ಸಾ ಪದ್ಧತಿಯು ಪರಿಣಾಮಕಾರಿಯಾಗಿದ್ದು, ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಲ್ಲಿ ಸೂಕ್ತ ಮಾರ್ಗದರ್ಶನ ಹಾಗೂ ಚಿಕಿತ್ಸೆಯ ಮೂಲಕ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಸುಮಾರು 100 ಆಶಾ ಕಾರ್ಯಕರ್ತೆಯರಿಗೆ ಗರ್ಭ ಸಂಸ್ಕಾರ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಸಂಪನ್ಮೂಲ ವೈದ್ಯ ಡಾ.ರಾಧಾ ಬಿ.ಕೆ. ಗರ್ಭಸಂಸ್ಕಾರದ ಮಹತ್ವ ಹಾಗೂ ಅನುಸರಿಸಬೇಕಾದ ಕ್ರಮಗಳ ಕುರಿತು ತರಬೇತಿ ನೀಡಿದರು.
ಸಂಪನ್ಮೂಲ ವೈದ್ಯ ಡಾ.ಹಾಲಮ್ಮ ಜೀವನಶೈಲಿಯಲ್ಲಿ ಆಯುರ್ವೇದದ ಮಹತ್ವ, ದಿನಚರ್ಯೆ, ಋತುಚರ್ಯೆ ಹಾಗೂ ಸದ್ವೃತ್ತದ ಕುರಿತು ಮಾಹಿತಿ ನೀಡಿದರು. ಡಾ.ಶಿವಕುಮಾರ್ ಆರೋಗ್ಯಕರ ಜೀವನಕ್ಕಾಗಿ ಪಂಚಕರ್ಮದ ಮಹತ್ವ ವಿವರಿಸಿದರು.ಕಾರ್ಯಕ್ರಮದಲ್ಲಿ ಡಾ.ಶಿವಶರಣಯ್ಯ, ಡಾ. ರಾಥೋಡ್, ನಾಗರಾಜ್ ಕೌಲಗಿ ಡಾ. ಪ್ರಕಾಶ್ ತಿಗರಿ ಡಾ. ಪ್ರಸಾದ ಬಾಬು ಡಾ. ಹೇಮಲತಾ, ಡಾ. ಸರಸ್ವತಿ ಡಾ. ಬಾಬು ಸಾಹೇಬ್ ಜಂಗ್ಲಪ್ಪನವರ್, ಡಾ. ಪ್ರಶಾಂತ್ ಜೆ, ಡಾ. ಕೆ.ಎಚ್. ಗುರುಬಸವರಾಜ್ ಸೇರಿದಂತೆ ಆಯುಷ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.