ಸಾರಾಂಶ
ಆಯುರ್ವೇದ ಚಿಕಿತ್ಸೆ ನಿಧಾನವಾಗಿ ಪರಿಣಾಮಕಾರಿಯಾಗುತ್ತದೆ. ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ.
ಹಗರಿಬೊಮ್ಮನಹಳ್ಳಿ: ಹಬ್ಬ, ರಥೋತ್ಸವಗಳಲ್ಲಿ, ಹೆಚ್ಚು ಜನಸಂದಣಿ ಸೇರುವ ಸ್ಥಳಗಳಲ್ಲಿ ಆಯುರ್ವೇದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಹಂಪಸಾಗರದ ಅಭಿನವ ಶಿವಲಿಂಗರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಹಂಪಸಾಗರ ಗ್ರಾಮದಲ್ಲಿ ಮಹಾದೇವತಾತನ ರಥೋತ್ಸವ ನಿಮಿತ್ತ ನಿಸರ್ಗ ಹೆಲ್ತ್ ಕೇರ್ ಮತ್ತು ಪತಂಜಲಿ ಕೇಂದ್ರದಿಂದ ನಡೆದ ಆಯುರ್ವೇದ ಉಚಿತ ಚಿಕಿತ್ಸೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಆಯುರ್ವೇದ ಚಿಕಿತ್ಸೆ, ಯೋಗ ಮತ್ತು ಧ್ಯಾನ ಇವು ದೇಶದ ಅಮೂಲ್ಯ ಕೊಡುಗೆಯಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಜನಜನಿತವಾಗಬೇಕಿದ್ದ ಮನೆಮದ್ದು ಮತ್ತು ಆಯುರ್ವೇದ ಚಿಕಿತ್ಸೆ ದೇಶಿಯರಿಂದಲೇ ನಿರ್ಲಕ್ಷ್ಯಕ್ಕೊಳಗಾಗಿದ್ದು, ವಿದೇಶಿಗರ ಪಾಲಾಗಿದೆ. ಆಯುರ್ವೇದ ಚಿಕಿತ್ಸೆ ನಿಧಾನವಾಗಿ ಪರಿಣಾಮಕಾರಿಯಾಗುತ್ತದೆ. ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ ಎಂದರು.ಆಯುರ್ವೇದ ತಜ್ಞ ವೈದ್ಯೆ ಡಾ. ಸಹನಾ ಜೋಷಿ ಮಾತನಾಡಿ, ನಿಯಮಿತ ಆಹಾರ, ಹಿತಕರ ವ್ಯಾಯಾಮ ದ್ರವರೂಪದ ಆಹಾರ ಹೆಚ್ಚು ಬಳಕೆ ಮತ್ತು ಒತ್ತಡರಹಿತ ಬದುಕಿನಿಂದ ದೀರ್ಘಾಯುಷಿಗಳಾಗಬಹುದು. ಸೊಪ್ಪು, ತರಕಾರಿ ಮತ್ತು ಪೋಷಕಾಂಶಯುಕ್ತ ಆಹಾರ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂದರು.ಪತಂಜಲಿ ಕೇಂದ್ರದ ಡಾ. ಪೂರ್ಣಿಮಾ ಶಶಿಧರ ಬಾವಿ ಮಾತನಾಡಿ, ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಬದುಕಿನ ಭಾಗವಾಗಬೇಕಿದೆ ಎಂದರು.
ಆನಂತರ ನಡೆದ ತಪಾಸಣೆಯಲ್ಲಿ ೨೦೦ಕ್ಕೂ ಹೆಚ್ಚು ಜನರ ತಪಾಸಣೆ ನಡೆಸಿ, ವಿವಿಧ ಕಾಯಿಲೆಗಳಿಗೆ ಆಯುರ್ವೇದ ಔಷಧಿ ಉಚಿತವಾಗಿ ವಿತರಿಸಲಾಯಿತು. ಡಾ. ನವೀನ್‌ಕುಮಾರ್, ಜಿಪಂ ಮಾಜಿ ಸದಸ್ಯ ಎಚ್.ಬಿ. ನಾಗನಗೌಡ, ಮುಖಂಡ ಕರೆಂಗಿ ಸುಭಾಷ್, ಶಿವಪುತ್ರಪ್ಪ, ಲಿಂಗದಹಳ್ಳಿ ಬಸವರಾಜಪ್ಪ ಇತರರಿದ್ದರು. ನಿಸರ್ಗ ಹೆಲ್ತ್ ಕೇರ್‌ನ ಮುಖ್ಯಸ್ಥ ಪ್ರವೀಣ್ ಕಡ್ಲಿ, ಅಮೃತ್‌ರಾಜ್ ಕಾರ್ಯಕ್ರಮ ನಿರ್ವಹಿಸಿದರು.