ಪುತ್ತೂರಲ್ಲಿ ಶೀಘ್ರವೇ ಆಯುಷ್‌ ಆಸ್ಪತ್ರೆ: ಶಾಸಕ ಅಶೋಕ್‌ ರೈ

| Published : Jun 23 2024, 02:07 AM IST

ಪುತ್ತೂರಲ್ಲಿ ಶೀಘ್ರವೇ ಆಯುಷ್‌ ಆಸ್ಪತ್ರೆ: ಶಾಸಕ ಅಶೋಕ್‌ ರೈ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಒಟ್ಟು 2 ಕೋಟಿ ರುಪಾಯಿ ಅನುದಾನ ಬಂದಿದ್ದು, ಈಗಾಗಲೇ ೧.೪೦ ಕೋಟಿ ಆಸ್ಪತ್ರೆಯ ಕಾಮಗಾರಿಗಳಿಗೆ ಬಂದಿದೆ ಎಂದು ಶಾಸಕ ಅಶೋಕ್‌ ರೈ ತಿಳಿಸಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಜನರು ನೋವಿನಿಂದ ಮತ್ತು ನೊಂದು ಆಗಮಿಸುವ ಸ್ಥಳವೇ ಆಸ್ಪತ್ರೆ. ನೋವುಗಳನ್ನು ಹೊತ್ತುಕೊಂಡು ಆಸ್ಪತ್ರೆಗೆ ಬರುವವರಿಗೆ ಉತ್ತಮ ಸ್ಪಂದನೆಯೊಂದಿಗೆ ಸಾಂತ್ವನ ನೀಡುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ವೈದ್ಯರ ಪ್ರಯತ್ನಗಳಾಗಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಪುತ್ತೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ನಡೆದ ನೂತನ ಆರೋಗ್ಯ ರಕ್ಷಾ ಸಮಿತಿಯ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಆಸ್ಪತ್ರೆಯ ಕಂದುಕೊರತೆಯ ಸಭೆ ನಡೆಸಿ ಮಾತನಾಡಿದರು.

ಪುತ್ತೂರಿನ ಆಸ್ಪತ್ರೆಯಲ್ಲಿ ನಾಲ್ಕು ಜನ ವೈದ್ಯರ ಕೊರತೆ ಇದ್ದರೂ ವೈದ್ಯರು ಉತ್ತಮ ಸೇವೆ ನೀಡುತ್ತಿದ್ದಾರೆ. ಆದರೂ ಕೆಲವೊಂದು ಪರಿಸ್ಥಿಯಲ್ಲಿ ಸಾರ್ವಜನಿಕರಿಗೆ ಅರ್ಥವಾಗದೆ ನಿಮ್ಮ ಮೇಲೆಯೇ ಕೋಪಗೊಳ್ಳುತ್ತಾರೆ. ಅಂತಹ ಸಂದರ್ಭದಲ್ಲಿ ಸಮಾಧಾನದಿಂದ ಅವರಿಗೆ ಉತ್ತಮ ಸ್ಪಂದನೆ ನೀಡಬೇಕು ಎಂದರು. ಆಸ್ಪತ್ರೆಗೆ ೨ ಕೋಟಿ ರು. ಅನುದಾನ: ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಒಟ್ಟು 2 ಕೋಟಿ ರುಪಾಯಿ ಅನುದಾನ ಬಂದಿದ್ದು, ಈಗಾಗಲೇ ೧.೪೦ ಕೋಟಿ ಆಸ್ಪತ್ರೆಯ ಕಾಮಗಾರಿಗಳಿಗೆ ಬಂದಿದೆ. ಅದರಲ್ಲಿ ಆಸ್ಪತ್ರೆಯ ಎಲ್ಲ ದುರಸ್ತಿ ಕಾರ್ಯಗಳು ನಡೆಯಬೇಕಾಗಿದೆ. ೫೦ ಲಕ್ಷ ರು. ಲ್ಯಾಬ್‌ಗೆ ಬಂದಿದೆ. ಇದರಲ್ಲಿ ಲ್ಯಾಬ್ ಪರಿಪೂರ್ಣ ಆಗಬೇಕು. ಪುತ್ತೂರಿನಲ್ಲಿ ಆಯುಷ್ ಆಸ್ಪತ್ರೆಗಾಗಿ ಈಗಾಗಲೇ ಎರಡು ಕಡೆ ಜಾಗ ನೋಡಿ ಗುರುತಿಸಲಾಗಿದೆ. ನಾಳೆಯೇ ಅದರ ಮುಖ್ಯ ಅಧಿಕಾರಿ ಬರುತ್ತಾರೆ. ಅದಕ್ಕೆ ಪ್ರಸ್ತಾವನೆ ಸಲ್ಲಿಸುವ ಕೆಲಸ ನಡೆಯಲಿದೆ ಎಂದು ತಿಳಿಸಿದರು.

ಶವಾಗಾರಕ್ಕೆ ದಾರಿ ದೀಪ: ಶವಗಾರಕ್ಕೆ ಹೋಗುವ ದಾರಿಯಲ್ಲಿ ದಾರಿ ದೀಪದ ಸಮಸ್ಯೆ ಕುರಿತು ಆಸ್ಪತ್ರೆಯ ಆಡಳಿತಾಧಿಕಾರಿ ಶಾಸಕರ ಗಮನಕ್ಕೆ ತಂದರು. ತಕ್ಷಣವೇ ವ್ಯವಸ್ಥೆ ಮಾಡುವಂತೆ ಶಾಸಕರು ಪೌರಾಯುಕ್ತ ಮಧು ಎಸ್. ಮನೋಹರ್ ಅವರಿಗೆ ಸೂಚನೆ ನೀಡಿದರು.

ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರು ಒಬ್ಬರೆ ಇದ್ದು ಅವರಿಗೆ ತುಂಬಾ ಒತ್ತಡವಿದೆ ಎಂದು ಶಾಸಕರ ಗಮನಕ್ಕೆ ತರಲಾಯಿತು. ಆಸ್ಪತ್ರೆಗೆ ಅನೇಕ ಮಂದಿ ಹೊರಗಿನಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯ ಸಹಿತ ಮಾತನಾಡಿಸಲು ಬರುತ್ತಾರೆ. ಆದರೆ ಅವರು ಗುಂಪು ಗುಂಪಾಗಿ ಬರುವಾಗ ರೋಗಿಳಿಗೆ ತೊಂದರೆ ಆಗುತ್ತದೆ. ಈ ನಿಟ್ಟಿನಲ್ಲಿ ಆಸ್ಪತ್ರೆಯಿಂದ ಅನುಮತಿ ಪಡೆದು ಒಳಪ್ರವೇಶಿಸುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಈ ಕುರಿತು ನಾಮಫಲಕ ಅಳವಡಿಸುವ ಕಾರ್ಯಕ್ಕೂ ಅನುಮೋದನೆ ನೀಡಲಾಯಿತು.

ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅಶಾ ಜ್ಯೋತಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸುದೇಶ್ ಶೆಟ್ಟಿ, ಅಸ್ಕರ್ ಆನಂದ್, ಸಿದ್ಸಿಕ್ ಸುಲ್ತಾನ್, ವಿಕ್ಟರ್ ಪಾಯಸ್, ಅನ್ವರ್ ಕಬಕ ವಿವಿಧ ಸಲಹೆ ನೀಡಿದರು. ತಹಸೀಲ್ದಾರ್ ಪುರಂದರ, ಪೌರಾಯುಕ್ತ ಮಧು ಎಸ್ ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಹೆಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾರಾನಾಥ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ಸಾಂತ್ವನ ಕೇಂದ್ರ ದುರಸ್ತಿ

ಪುತ್ತೂರಿನ ಮಹಿಳಾ ಸಾಂುತ್ವನ ಕೇಂದ್ರ ನಾದುರಸ್ತಿಯಲ್ಲಿದ್ದು ಅದನ್ನು ಶೀಘ್ರವೇ ದುರಸ್ತಿ ಮಾಡಬೇಕು. ಮಹಿಳಾ ಸಾಂತ್ವನ ಕೇಂದ್ರಕ್ಕೆ ಏನೆಲ್ಲಾ ವ್ಯವಸ್ಥೆಗಳು ಬೇಕೋ ಅದೆಲ್ಲವನ್ನೂ ಮಾಡಬೇಕು. ಆ ಕೇಂದ್ರದಲ್ಲಿ ಸಾಂತ್ವನ ನೀಡುವ ಮೂಲಕ ಯಾರಿಗಾದರೂ ಒಬ್ಬರಿಗೆ ಒಳ್ಳೆಯದಾದರೂ ಅದು ನಮಗೆ ಅತ್ಯಂತ ಸಂತೋಷದ ವಿಚಾರವಾಗಿದೆ. ಅಗತ್ಯ ವ್ಯವಸ್ಥೆ ಇಲ್ಲದೆ ಬಡವರು ತೊಂದರೆಗೊಳಗಾಗಬಾರದು ಎಂದು ಶಾಸಕ ಅಶೋಕ್‌ ರೈ ಹೇಳಿದರು.