ಗ್ರಾಮಗಳಲ್ಲಿ ಉತ್ತಮ ಚಿಕಿತ್ಸೆಗೆ ಆಯುಷ್ಮಾನ್ ಆರೋಗ್ಯ ಮಂದಿರ: ಆನಂದ್

| Published : Jul 10 2025, 01:45 AM IST

ಸಾರಾಂಶ

ಕಡೂರು, ಬಡವರು ಮತ್ತು ಕೂಲಿ ಕಾರ್ಮಿಕರು ಹೆಚ್ಚಾಗಿರುವ ಗ್ರಾಮಗಳಲ್ಲಿ ಉತ್ತಮ ಚಿಕಿತ್ಸೆಗೆ ₹5 ಲಕ್ಷ ವೆಚ್ಚದ ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ತೆರೆಯಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಚಿಕ್ಕಂಗಳ ಗ್ರಾಮದಲ್ಲಿ ₹65 ಲಕ್ಷ ರು. ವೆಚ್ಚದ ಆರೋಗ್ಯ ಮಂದಿರ ನಿರ್ಮಾಣ ಕಾಮಗಾರಿಗೆ ಚಾಲನೆ

ಕನ್ನಡಪ್ರಭ ವಾರ್ತೆ, ಕಡೂರು

ಬಡವರು ಮತ್ತು ಕೂಲಿ ಕಾರ್ಮಿಕರು ಹೆಚ್ಚಾಗಿರುವ ಗ್ರಾಮಗಳಲ್ಲಿ ಉತ್ತಮ ಚಿಕಿತ್ಸೆಗೆ ₹5 ಲಕ್ಷ ವೆಚ್ಚದ ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ತೆರೆಯಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ತಾಲೂಕಿನ ಚಿಕ್ಕಂಗಳ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಚಿಕ್ಕಂಗಳ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ₹65 ಲಕ್ಷ ರು. ವೆಚ್ಚದ ಆಯುಷ್ಮಾನ್ ಆರೋಗ್ಯ ಮಂದಿರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕ್ಷೇತ್ರದ ಚಿಕ್ಕಂಗಳ, ಎಮ್ಮೆದೊಡ್ಡಿ ಗ್ರಾಮದ ಸುತ್ತಮುತ್ತ ಬಡವರು ಮತ್ತು ಕೂಲಿ ಕಾರ್ಮಿಕರು ಹೆಚ್ಚಾಗಿದ್ದು, ಸಣ್ಣ ಪುಟ್ಟ ಅನಾರೋಗ್ಯ ಕಂಡು ಬಂದರೆ ಪಟ್ಟಣಗಳಿಗೆ ಹೋಗುವುದನ್ನು ತಪ್ಪಿಸಲು ರಾಜ್ಯ ಸರಕಾರ ರಾಜ್ಯಾದ್ಯಂತ ಒಂದೇ ರೀತಿಯ ಆರೋಗ್ಯ ಮಂದಿರ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದ್ದು ಚಿಕ್ಕಂಗಳ ಗ್ರಾಮದಲ್ಲೂ ಸುಸಜ್ಜಿತ ಆರೋಗ್ಯ ಮಂದಿರ ನಿರ್ಮಾಣ ವಾಗಲಿದೆ ಎಂದರು.ತಾವು ಶಾಸಕರಾದ ನಂತರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ದಿನಕ್ಕೆ 800 ರಿಂದ 1 ಸಾವಿರ ಸಂಖ್ಯೆಯಷ್ಟು ಹೊರ ರೋಗಿಗಳು ಚಿಕಿತ್ಸೆಗೆ ಬರುವುದರಿಂದ ತಾಲೂಕು ಕೇಂದ್ರವಾದ ಕಡೂರು ಸಾರ್ವಜನಿಕ ಆಸ್ಪತ್ರೆ ಮೂಲ ಸೌಕರ್ಯಕ್ಕೆ ಮೊದಲ ಆದ್ಯತೆ ನೀಡುತಿದ್ದೇನೆ. ಜೊತೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ವರ್ಗ ಉತ್ತಮ ಸೇವೆ ನೀಡುತ್ತಿದೆ. ಕಾರ್ಮಿಕರು ಮತ್ತು ಬಡವರಿಗೆ ಉತ್ತಮ ಚಿಕಿತ್ಸೆ ದೊರೆಯಬೇಕು ಎಂದು ಹೆಚ್ಚಿನ ಕಾಳಜಿ ವಹಿಸಿದ್ದೇನೆ ಎಂದರು. ಚಿಕ್ಕಂಗಳ ಗ್ರಾಪಂ ವ್ಯಾಪ್ತಿಯ ಅಭಿವೃದ್ಧಿಗೆ ನೀಡಿರುವ ₹60 ಲಕ್ಷ ಅನುದಾನದಲ್ಲಿ ರಸ್ತೆ,ಚರಂಡಿ, ಗ್ರಾಮ ಪಂಚಾಯಿತಿ ಕಟ್ಟಡ ಮತ್ತು ಇದೀಗ ಆರೋಗ್ಯ ಮಂದಿರ ನಿರ್ಮಿಸಲು ಅನುದಾನ ನೀಡಲಾಗಿದೆ. ಇನ್ನು ಅನೇಕ ಬೇಡಿಕೆಗಳನ್ನು ಅಧ್ಯಕ್ಷ ಪ್ರಕಾಶ್‍ನಾಯ್ಕ ನೀಡಿದ್ದು, ಆದ್ಯತೆ ಮೇರೆಗೆ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.

ಇನ್ನು ಹಳೆಯ ಮದಗದಕೆರೆಯಿಂದ ’ಮಾದಿಕಟ್ಟೆಗೆ’ ನೀರು ಹರಿಸಲು ಪ್ರಮುಖ ಬೇಡಿಕೆ ನೀಡಿದ್ದೀರಿ ಪರಿಶೀಲಿಸಿ ಅನುದಾನ ನೀಡುತ್ತೇನೆ. ಸಮುದಾಯ ಭವನ, ದೇವಾಲಯಗಳ ಅಭಿವೃದ್ಧಿಗೂ ಅನುದಾನ ನೀಡುತ್ತಿದ್ದೇನೆ ಎಂದರು.

ಕೊರೋನಾ ಸಂಕಷ್ಟ ಕಾಲದಿಂದ ಇದುವರೆಗೂ ಉತ್ತಮ ಸೇವೆ ನೀಡಿರುವ ತಾಲೂಕು ವೈದ್ಯಾಧಿಕಾರಿ ಡಾ.ರವಿಕುಮಾರ್ ಇಲಾಖೆಯ ಮಾರ್ಗಸೂಚಿಯಂತೆ ಮಂಗಳೂರಿಗೆ ವರ್ಗವಣೆಯಾಗಿದ್ದಾರೆ. ಇಂತಹ ಉತ್ತಮ ವೈದ್ಯರ ಸೇವೆ ಕಳೆದು ಕೊಳ್ಳುತ್ತಿರುವುದಕ್ಕೆ ಬೇಸರ ನಮಗೂ ಇದೆ ಅದರೆ ಅನಿವಾರ್ಯಯತೆ ಎಂದರು.ಚಿಕ್ಕಂಗಳ ಗ್ರಾಪಂ ಅಧ್ಯಕ್ಷ ಪ್ರಕಾಶ ಎಂ. ನಾಯ್ಕ ಮಾತನಾಡಿ, ಶಾಸಕರು ನಮ್ಮ ಗ್ರಾಮ ಪಂಚಾಯಿತಿಗೆ ಸಾಕಷ್ಟು ಅನುದಾನ ನೀಡಿದ್ದು. ಗ್ರಾಪಂ ಯಿಂದ ವಿಶೇಷವಾಗಿ ಅಭಿನಂದಿಸುತ್ತೇನೆ. ನೀಡಿರುವ ₹60 ಲಕ್ಷ ರು ಅನುದಾನದಲ್ಲಿ ರಸ್ತೆ, ಗ್ರಾಮ ಪಂಚಾಯಿತಿ ಮತ್ತು ಆರೋಗ್ಯ ಮಂದಿರ, ಸೇವಾಲಾಲ್, ತೆಲುಗುಗೌಡ ಸಮಾಜಗಳಿಗೆ, ಚನ್ನಕೇಶವ, ಆಂಜನೇಯ ಸ್ವಾಮಿ ದೇವಾಲಯಗಳಿಗೆ ಅನುದಾನ ನೀಡಿದ್ದಾರೆ. ಶಾಸಕರು ನಮ್ಮ ಪಂಚಾಯಿತಿ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಗಳಿಗೆ ನಮ್ಮ ಭಾಗದ ಎಲ್ಲ ವರ್ಗದ ಸಮಾಜಗಳ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ ಎಂದರು, ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಬಾಯಿ, ಸದಸ್ಯರಾದ ಲತಾ ಹರೀಶ್, ಎ.ಸಿ. ಷಡಾಕ್ಷರಿ, ಸಿ.ಜಿ.ಪ್ರಕಾಶ್, ಕೆ.ಸುನೀತಾ,ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಡಾ.ಪ್ರಿಯಾಂಕ,ಡಾ.ತೇಜಸ್,ಇಂಜಿನಿಯರ್ ರಶ್ಮಿ, ಮುಖ್ಯ ಶಿಕ್ಷಕಿ ಲೀಲಾವತಿ,ಗೌರಮ್ಮ,ಕೆರೆ ಸಂಘದ ಅಧ್ಯಕ್ಷ ಸಗುನಪ್ಪ , ಕೃಷ್ಣಾನಾಯ್ಕ,ಅಂದೇನಹಳ್ಳಿ ರವಿ ಮತ್ತಿತರರು ಇದ್ದರು.

9ಕೆಕೆಡಿಯು1.

ಕಡೂರು ತಾಲೂಕು ಚಿಕ್ಕಂಗಳ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಿರುವ ಆಯುಷ್ಮಾನ್ ಆರೋಗ್ಯ ಮಂದಿರದ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಚಾಲನೆ ನೀಡಿದರು.