ಸಾರಾಂಶ
ಕನಕಪುರ: ನಗರದ ಅಯ್ಯಪ್ಪ ಭಕ್ತರೊಬ್ಬರು ಶಬರಿಮಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಮದ್ದೂರಮ್ಮ ಬೀದಿಯ ನಿವಾಸಿ ಕುಮಾರ್(40) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಕಳೆದ ಎರಡು ದಿನಗಳ ಹಿಂದೆ ಕೇರಳದ ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಆರು ಜನ ಗೆಳೆಯರೊಂದಿಗೆ ಹೋಗಿದ್ದರು ಎನ್ನಲಾಗಿದೆ. ಅಯ್ಯಪ್ಪಸ್ವಾಮಿ ದರ್ಶನ ಪಡೆದ ಬಳಿಕ ದೇವಾಲಯದ ಪಕ್ಕದಲ್ಲಿ ಅಭಿಷೇಕದ ತುಪ್ಪ ಪಡೆಯಲು ಭಕ್ತರು ಸರದಿಯಲ್ಲಿ ಬರಲು ಅಳವಡಿಸಿರುವ ಶೆಲ್ಟರ್ ಮೇಲಿಂದ ಜಿಗಿಯುತ್ತಿರುವ ವಿಡಿಯೋ ದೃಶ್ಯ ಡಿ.16ರಂದು ಸೋಮವಾರ ಭಕ್ತರೊಬ್ಬರ ಮೊಬೈಲ್‌ನಲ್ಲಿ ಕಂಡು ಬಂದಿದೆ. ಕೆಳಗೆ ಬಿದ್ದು ಭಕ್ತ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಶಬರಿಮಲೆ ಸನ್ನಿದಾನದ ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೊಟ್ಟಾಯಂ ಮೆಡಿಕಲ್ ಕಾಲೇಜಿಗೆ ರವಾನಿಸುವ ಮಾರ್ಗಮಧ್ಯೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಕುಮಾರ್ ಖಿನ್ನತೆಯಿಂದ ಈ ರೀತಿ ಆಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಶಬರಿಮಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯ ತಿಳಿದ ಕೂಡಲೆ ಮೃತ ಕುಮಾರ್ ಕುಟುಂಬಸ್ಥರು ಶಬರಿಮಲೆಗೆ ತೆರಳಿದ್ದಾರೆ ಎನ್ನಲಾಗಿದೆ.