ಸಾರಾಂಶ
ಕೊಡಗಿನ ಪೊನ್ನಂಪೇಟೆ ತಾಲೂಕಿನ ತಿತಿಮತಿಯಲ್ಲಿರುವ ಲಿವಾ ಉಲ್ ಹುದಾ ಜಮ್ಮಾ ಮಸೀದಿಯು ಸಂಕಷ್ಟಕ್ಕೆ ಸಿಲುಕಿದ್ದ ಶಬರಿಮಲೆಯ ಭಕ್ತರಿಗೆ ಆಶ್ರಯ ಹಾಗೂ ಸೌಲಭ್ಯ ಕಲ್ಪಿಸುವ ಮೂಲಕ ಸಹೋದರತ್ವ ಮತ್ತು ಸಾಮರಸ್ಯದ ಸಂದೇಶ ನೀಡಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿಅಯ್ಯಪ್ಪ ಮಾಲಾಧಾರಿಗಳಿಗೆ ಮದರಸದಲ್ಲಿ ಆಶ್ರಯ ನೀಡುವ ಮೂಲಕ ಕೊಡಗಿನ ಮುಸ್ಲಿಂ ಬಾಂಧವರು ಸೌಹಾರ್ದತೆಗೆ ಸಾಕ್ಷಿಯಾದರು.ಪ್ರಸ್ತುತ ನಡೆಯುತ್ತಿರುವ ರಾಜಕೀಯ ಮತ್ತು ಕೋಮು ಸಂಘರ್ಷ ಪರಿಸ್ಥಿತಿಯ ನಡುವೆಯೂ ಇಂತಹ ಘಟನೆ ನಡೆದಿರುವುದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕೊಡಗಿನ ಪೊನ್ನಂಪೇಟೆ ತಾಲೂಕಿನ ತಿತಿಮತಿಯಲ್ಲಿರುವ ಲಿವಾ ಉಲ್ ಹುದಾ ಜಮ್ಮಾ ಮಸೀದಿಯು ಸಂಕಷ್ಟಕ್ಕೆ ಸಿಲುಕಿದ್ದ ಶಬರಿಮಲೆಯ ಭಕ್ತರಿಗೆ ಆಶ್ರಯ ಹಾಗೂ ಸೌಲಭ್ಯ ಕಲ್ಪಿಸುವ ಮೂಲಕ ಸಹೋದರತ್ವ ಮತ್ತು ಸಾಮರಸ್ಯದ ಸಂದೇಶ ನೀಡಿದೆ.ಬೆಳಗಾವಿ ಮೂಲದ ಐವರು ಭಕ್ತರು, ಕೊಡಗು ಮಾರ್ಗವಾಗಿ ಬೈಕ್‌ನಲ್ಲಿ ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಹೊರಟಿದ್ದರು. ಆದರೆ ಗುರುವಾರ ರಾತ್ರಿ ಆಗಿದ್ದರಿಂದ ಹಾಗೂ ಹವಾಮಾನ ವೈಪರಿತ್ಯದಿಂದಾಗಿ ಯಾತ್ರೆಯನ್ನು ತಿತಿಮತಿಯಲ್ಲಿ ಸ್ಥಗಿತಗೊಳಿಸಿದರು. ಈ ವೇಳೆ ಮಾಲಾಧಾರಿಗಳಾದ ಕಮಲೇಶ್ ಗೌರಿ, ಭೀಮಪ್ಪ ಸನದಿ, ಎನ್. ಶಿವಾನಂದ್, ಬಿ. ಗಂಗಾಧರ್ ಮತ್ತು ಎಸ್. ಸಿದ್ದ, ಜಮ್ಮಾ ಮಸೀದಿ ಬಳಿ ಹೋಗಿ ನೆರವು ಕೇಳಿದರು. ನಂತರ ಮಸೀದಿ ಆಡಳಿತ ಮಂಡಳಿಯವರು ಶಬರಿಮಲೆ ಭಕ್ತರ ನೆರವಿಗೆ ಧಾವಿಸಿ, ರಾತ್ರಿ ಮಸೀದಿಯಲ್ಲೇ ತಂಗಲು ಅನುಮತಿ ನೀಡಿದರು. ಅಲ್ಲದೇ ಭಕ್ತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಮಸೀದಿ ಅಧ್ಯಕ್ಷ ಉಸ್ಮಾನ್ ಹಾಗೂ ಕೆ. ಕತೀಬ್ ಒದಗಿಸಿಕೊಟ್ಟರು.ಶುಕ್ರವಾರ ಬೆಳಗ್ಗೆ 6 ಗಂಟೆಗೆ ಐವರು ಭಕ್ತರು ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿ ಶಬರಿಮಲೆಗೆ ತೆರಳಿದರು. ಇದಕ್ಕೂ ಮುನ್ನ ಬೆಳಗ್ಗೆ ಮಸೀದಿ ಸಮೀಪದಲ್ಲೇ ಅಯ್ಯಪ್ಪ ಸ್ವಾಮಿಗೆ ಪೂಜೆ ಸಲ್ಲಿಸಲು ಮಸೀದಿಯವರೇ ಅವಕಾಶ ಮಾಡಿಕೊಟ್ಟಿದ್ದರು. ಕೊಡಗಿನಲ್ಲಿ ಈ ಸೌಹಾರ್ದತೆಗೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.