ಸಾರಾಂಶ
ಹುಬ್ಬಳ್ಳಿ: ಉಣಕಲ್ಲಿನ ಬಳಿಗೇರ ಓಣಿಯ ಜೈ ಹನುಮಾನ ಯುವಕ ಮಂಡಳಿ ವತಿಯಿಂದ ಗಣೇಶೋತ್ಸವವನ್ನು ವಿಶಿಷ್ಠವಾಗಿ ಆಚರಿಸಲಾಗುತ್ತಿದೆ. 18ನೇ ವರ್ಷದ ಗಜಾನನೋತ್ಸವದ ಅಂಗವಾಗಿ 18 ಮೆಟ್ಟಿಲುಗಳ ಕೃತಕ ಅಯ್ಯಪ್ಪಸ್ವಾಮಿ ಮಂದಿರ ನಿರ್ಮಿಸಲಾಗಿದ್ದು, ಶನಿವಾರ ಪಡಿ ಪೂಜೆ ಜರುಗಲಿದೆ. ಇದಾದ ನಂತರ ಸಾರ್ವಜನಿಕ ಅನ್ನಪ್ರಸಾದವೂ ಏರ್ಪಡಿಸಲಾಗಿದೆ.
ಪ್ರತಿ ವರ್ಷ ವಿಭಿನ್ನ ಶೈಲಿಯಲ್ಲಿ ಗಣೇಶೋತ್ಸವವನ್ನು ಆಚರಿಸುತ್ತಿರುವ ಈ ಯುವಕ ಮಂಡಳ, ಈ ಬಾರಿ ಅಯ್ಯಪ್ಪ ಮಂದಿರದ ವಿನ್ಯಾಸದ ಮೂಲಕ ಭಕ್ತರ ಗಮನ ಸೆಳೆದಿದೆ. ಶಬರಿಮಲೈ ಅಯ್ಯಪ್ಪ ದೇವಸ್ಥಾನ ಮಾದರಿಯಲ್ಲಿ 18 ಮೆಟ್ಟಿಲುಗಳನ್ನು ನಿರ್ಮಿಸಿ ಅಯ್ಯಪ್ಪ ಮಾದರಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ಕೇರಳದ ಕಲಾವಿದರು 15 ದಿನಗಳ ಕಾಲ ಈ ಅಯ್ಯಪ್ಪ ಮಾದರಿ ದೇಗುಲ ನಿರ್ಮಿಸಿದ್ದಾರೆ. ಗಣಪತಿ ಪ್ರತಿಷ್ಠಾಪನಾ ಮೆರವಣಿಗೆಗೆ ಬೆಂಗಳೂರಿನಿಂದ ಆನೆ ಪ್ರತಿಕೃತಿ ತರಿಸಲಾಗಿತ್ತು. ಕೇರಳದ ಪರಾಶಕ್ತಿ ಕಲಾತಂಡದಿಂದ ಜಂಬು ಸವಾರಿ ಮೆರವಣಿಗೆ ಮೂಲಕ ಗಣೇಶನನ್ನು ಪ್ರತಿಷ್ಠಾಪನಾ ಸ್ಥಳಕ್ಕೆ ತಂದಿರುವುದು ಮತ್ತೊಂದು ವಿಶೇಷ.ಇಂದು ಪಡಿಪೂಜೆ: ಪ್ರತಿಷ್ಠಾಪನೆಗೆಂದು ಗಣೇಶ ಮೂರ್ತಿ ತರುವಾಗ ಇಲ್ಲಿನ ಸದ್ಭಕ್ತರು ಅಯ್ಯಪ್ಪ ಮಾಲಾಧಾರಿಗಳಂತೆ ಕಪ್ಪು ಬಣ್ಣದ ಬಟ್ಟೆ ಧರಿಸಿ, ಬರಿಗಾಲಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಆ. 30ರಂದು ಮೋಹನ ಗುರುಸ್ವಾಮಿ ಅವರಿಂದ ಪಡಿಪೂಜೆ ಜರುಗಲಿದೆ. ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ಜರುಗಲಿದೆ.
ಆರೋಗ್ಯ ತಪಾಸಣೆ: ಈ ಬಾರಿ ಗಣೇಶೋತ್ಸವ ಪ್ರಯುಕ್ತ ಆ.31ರಂದು ಬೆಳಗ್ಗೆ 10ರಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಅಂದು ಬಿಪಿ, ಮಧುಮೇಹ, ನರ ಸಂಬಂಧಿ ರೋಗ, ಸಂಧಿವಾತ ಸೇರಿ ಇತರ ರೋಗಗಳ ತಪಾಸಣಾ ಶಿಬಿರ ಆಯೋಜಿಸಲಾಗಿದೆ.7ನೇ ದಿನ ವಿಸರ್ಜನೆ: ಸೆ.1ರಂದು ಯುವಕ ಮಂಡಳಿ ವತಿಯಿಂದ ಮಕ್ಕಳಿಗೆ ಕ್ರೀಡಾಚಟುವಟಿಕೆ ಆಯೋಜಿಸಲಾಗಿದೆ. ಆ.2ರಂದು 7ನೇ ದಿನ ಡಿಜೆಯೊಂದಿಗೆ ಮೆರವಣಿಗೆಯಲ್ಲಿ ಮೂರ್ತಿಯ ವಿಸರ್ಜನೆ ನೆರವೇರಲಿದೆ.
ಉಣಕಲ್ಲಿನ ಬಾಲರಾಜ ಜಾಲಹಳ್ಳಿ, ಅರುಣ ಸಿಂಪಿ, ವಸಂತ ಜುಂಜಣ್ಣನವರ, ಶಿವು ಮಾನೆ, ಈರನಗೌಡ ಮುಷಿಗೌಡರ, ಮಂಜುನಾಥ ಅಸುಂಡಿ, ಮಂಜುನಾಥ ತಳವಾರ, ಸಿದ್ದು ಜೋಡಳ್ಳಿ ಗಣೇಶೋತ್ಸವದಲ್ಲಿ ಮುಂದೆ ನಿಂತು ಎಲ್ಲ ಕಾರ್ಯಗಳನ್ನು ನಿಭಾಯಿಸುತ್ತಿದ್ದಾರೆ.ಪ್ರತಿ ವರ್ಷ ಒಂದೊಂದು ರೂಪಕ ಕೇಂದ್ರಿಕರಿಸಿ ಗಣೇಶೋತ್ಸವ ಆಚರಿಸುತ್ತೇವೆ. ಈ ಬಾರಿ ಶಬರಿಮಲೈ ಅಯ್ಯಪ್ಪ ಸ್ವಾಮಿ ಮಾದರಿ ನಿರ್ಮಿಸಿ, ಅಯ್ಯಪ್ಪ ವ್ರತಾಚರಣೆಯಂತೆ ಹಬ್ಬ ಆಚರಿಸುತ್ತಿದ್ದೇವೆ. ಪಡಿಪೂಜೆ ಮೂಲಕ ಭಕ್ತಿ ಸಮರ್ಪಣೆ ಮಾಡಲಾಗುವುದು ಎಂದು ಜೈ ಹನುಮಾನ ಯುವಕ ಮಂಡಳಿ ಸದಸ್ಯ ಷಣ್ಮುಖ ಹೆಬ್ಬಳ್ಳಿ ತಿಳಿಸಿದ್ದಾರೆ.