ಸಾರಾಂಶ
3 ತಿಂಗಳಲ್ಲೇ ಸದ್ಭಳಕೆಗೆ ಚಮನ್ ಮನವಿ । ಡೋರ್ ನಂಬರಿಗೆ ₹10 ಸಾವಿರ ವಸೂಲಿಗೆ ಹೊರಟಿದ್ದ ಪಾಲಿಕೆಗೆ ಎಸ್ಸೆಸ್ಸೆಂ ಚಾಟಿ
ಕನ್ನಡಪ್ರಭ ವಾರ್ತೆ ದಾವಣಗೆರೆಕಂದಾಯ ನಿವೇಶನದಾರರಿಗೆ ಬಿ ಖಾತಾ ಪಡೆದು, ಆಸ್ತಿ ಮಾಲೀಕತ್ವ ಹೊಂದಲು ಕಾಂಗ್ರೆಸ್ ಸರ್ಕಾರ ಅವಕಾಶ ಕಲ್ಪಿಸಿದೆ. ಮೂರು ತಿಂಗಳ ಒಳಗಾಗಿ ರೆವಿನ್ಯೂ ನಿವೇಶನದಾರರು ಇದರ ಸದುಪಯೋಗ ಪಡೆಯಬೇಕು ಎಂದು ಕಾಂಗ್ರೆಸ್ ಮುಖಂಡ ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ, ಮಾಜಿ ಮೇಯರ್ ಕೆ.ಚಮನ್ ಸಾಬ್ ಮನವಿ ಮಾಡಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜನ ರೆವಿನ್ಯೂ ನಿವೇಶನ, ಮನೆ, ಕಟ್ಟಡಗಳಿಗೆ ಬಿ ಖಾತಾ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ದಶಕಗಳಿಂದಲೂ ರೆವಿನ್ಯೂ ನಿವೇಶನ ಖರೀದಿಸಿ, ಮನೆ ಕಟ್ಟಿಕೊಳ್ಳಲು ಸಾಲ ಸೌಲಭ್ಯ ಪಡೆಯಲು ಪರದಾಡುತ್ತಿದ್ದ ಸಾರ್ವಜನಿಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸ್ಪಂದಿಸಿದೆ. ಇಂತಹ ಜನಪರ ಯೋಜನೆ ಮೂಲಕ ರೆವಿನ್ಯೂ ನಿವೇಶನದಾರರ ಸಂಕಷ್ಟವನ್ನು ನಮ್ಮ ಸರ್ಕಾರ ದೂರ ಮಾಡಿದೆ. ದಾವಣಗೆರೆ ನಗರದಲ್ಲೇ ಸುಮಾರು 20-25 ಸಾವಿರ ರೆವಿನ್ಯೂ ನಿವೇಶನ, ಮನೆ, ಕಟ್ಟಡ ಮಾಲೀಕರಿಗೆ ಅನುಕೂಲವಾಗಿದೆ ಎಂದು ಹೇಳಿದರು.ಹತ್ತಾರು ವರ್ಷಗಳಿಂದರೂ ಅಂತಹ ನಿವೇಶನ, ಮನೆ, ಕಟ್ಟಡ ಮಾಲೀಕರು ಜಾಗದ ಮಾಲೀಕತ್ವ ಸಿಗದೆ ತೊಂದರೆಗೀಡಾಗಿದ್ದರು. ಇಂತಹ ಸಮಸ್ಯೆ ಪರಿಹರಿಸಲು 2024ರ ಸೆ.10ರ ಮುಂಚೆ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡವರಿಗೆ ಭೂ ಪರಿವರ್ತನೆಯಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಕ್ಷೆ ಇಲ್ಲದ ನಿವೇಶನದಾರರಿಗೆ, ಭೂ ಪರಿವರ್ತನೆಯಾಗದಿರುವ ಸ್ವತ್ತುಗಳಲ್ಲಿ ಮನೆ ಕಟ್ಟಿಕೊಂಡವರಿಗೆ 2024-25ನೇ ಸಾಲಿಗೆ ಮಾತ್ರ ಕಂದಾಯವನ್ನು ದುಪ್ಪಟ್ಟು ಪಾವತಿಸಿಕೊಂಡು, ಇ-ಸ್ವತ್ತು ಬಿ ಖಾತಾ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ರೆವಿನ್ಯೂ ನಿವೇಶನದಾರರು ಮೇ.10ರ ಒಳಗಾಗಿ ಬಿ ಖಾತಾ ಮಾಡಿಸಿಕೊಳ್ಳಬೇಕು. ಯೋಜನೆ ಆರಂಭದ ದಿನಗಳಲ್ಲಿ ದುಪ್ಪಟ್ಟು ಕಂದಾಯದ ಜೊತೆಗೆ ಡೋರ್ ನಂಬರ್ ಶುಲ್ಕ 10 ಸಾವಿರ ರು. ಪಾವತಿಸುವಂತೆ ಪಾಲಿಕೆ ಆಯಕ್ತರು ಸೂಚಿಸಿದ್ದರು. ಆದರೆ, ಸರ್ಕಾರದಿಂದ ಡೋರ್ ನಂಬರ್ ಶುಲ್ಕ ಪಾವತಿಸಿಕೊಳ್ಳಲು ಯಾವುದೇ ಆದೇಶ ಇರಲಿಲ್ಲ. ಅಲ್ಲದೇ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೀಗೆಲ್ಲಾ ಡೋರ್ ನಂಬರ್ ಶುಲ್ಕವೆಂದು 10 ಸಾವಿರ ರು. ಸಂಗ್ರಹಿಸದಂತೆ ಪಾಲಿಕೆ ಆಯುಕ್ತರಿಗೆ ತಾಕೀತು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.ಸರ್ಕಾರದ ಆದೇಶದಂತೆ ಫೆ.27ರಿಂದ ಬಿ ಖಾತಾ ಪಡೆಯಲು ಸ್ವತ್ತಿನ ದುಪ್ಪಟ್ಟು ಕಂದಾಯ ಮಾತ್ರ ಪಾವತಿಸಿದರೆ, 7 ದಿನದಲ್ಲೇ ಇ ಸ್ವತ್ತು ಖಾತೆ ನಮೂನೆ-2 (ಎ) ನೀಡಲು ನಿರ್ದೇಶನ ನೀಡಿದ್ದಾರೆ ಎಂದು ವಿವರಿಸಿದರು.
ರೆವಿನ್ಯೂ ನಿವೇಶನಗಳ ಮಾಲೀಕರು ಮೇ.10ರ ಒಳಗಾಗಿ ಬಿ ಖಾತಾ ಪಡೆಯುವ ಅವಕಾಶ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.ಸಚಿವ ಮಲ್ಲಿಕಾರ್ಜುನರವರು ದಾವಣಗೆರೆ ನಗರದಲ್ಲಿ ರೆವಿನ್ಯೂ ನಿವೇಶನಗಳಿರುವ ವಾರ್ಡ್‌ಗಳಲ್ಲಿ ಪ್ರತಿ ಮನೆ ಮನೆಗೆ ಹೋಗಿ ಮಾಹಿತಿ ನೀಡಿ, ಆಂದೋಲನ ಹಮ್ಮಿಕೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗೆ ಆಯಾ ವಲಯ ಕಚೇರಿಗಳಲ್ಲಿನ ಸಹಾಯವಾಣಿಗಳಾದ 08192-234444, 82772-34444ಗೆ ಸಂಪರ್ಕಿಸಬೇಕು ಎಂದರು.
ಕಾಂಗ್ರೆಸ್ ಮುಖಂಡರಾದ ಮಾಜಿ ಉಪ ಮೇಯರ್ ಅಬ್ದುಲ್ ಲತೀಫ್, ಜಿ.ಎಸ್.ಮಂಜುನಾಥ ಗಡಿಗುಡಾಳ್ ಇತರರು ಇದ್ದರು.