ಸಾರಾಂಶ
ತುರ್ತುಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ । ಮಧ್ಯವರ್ತಿಗಳಿಗೆ ಕಡಿವಾಣ ಹಾಕಲು ಸದಸ್ಯರ ಆಗ್ರಹ
ಕನ್ನಡಪ್ರಭ ವಾರ್ತೆ ಹರಪನಹಳ್ಳಿನಿವೇಶನದ ಉದ್ದೇಶಕ್ಕಾಗಿ ಪಟ್ಟಣದ ವ್ಯಾಪ್ತಿಯಲ್ಲಿ ಭೂ ಪರಿವರ್ತನೆಗೊಂಡು ಪುರಸಭೆಯಲ್ಲಿ ಅನುಮೋದನೆ ಪಡೆದ ಆಸ್ತಿ, ಮನೆ, ಖಾಲಿ ನಿವೇಶನಗಳಿಗೆ ಪುರಸಭೆಯಿಂದ ಬಿ ಖಾತಾ ನೀಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ತಿಳಿಸಿದರು.ಪುರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ತುರ್ತುಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಪಟ್ಟಣ, ನಗರ ಪ್ರದೇಶದ ಜನರ ಅನುಕೂಲಕ್ಕಾಗಿ ಅವರ ಆಸ್ತಿ ನಿವೇಶನ, ಕಟ್ಟಡಗಳಿಗೆ ಬಿ ಖಾತಾ ನೀಡಲು ಆದೇಶ ಹೊರಡಿಸಿದ್ದು, ಈ ಹಿನ್ನೆಲೆ ಸಂಬಂಧಪಟ್ಟ ಮಾಲೀಕರು ತಮ್ಮ ಆಸ್ತಿಯ ಕ್ರಯ ಪತ್ರ, ಇಸಿ, ಪೋಟೊ, ತೆರಿಗೆ ರಸೀದಿ, ಐಡಿ ಕಾರ್ಡ್ ದಾಖಲೆಗಳನ್ನು ನೀಡಿ ಬಿ ಖಾತಾ ಪಡೆದುಕೊಳ್ಳಬೇಕು ಎಂದು ಹೇಳಿದರು.
ಭೂ ಪರಿವರ್ತನೆಗೊಳ್ಳದಿರುವ ಮತ್ತು ಪುರಸಭೆಯಿಂದ ಅನುಮೋದನೆ ಪಡೆಯದೇ ಇರುವ ಲೇವೋಟ್, ನಿವೇಶನ, ಕಟ್ಟಡಗಳಿಗೆ ಮತ್ತು ಸರ್ಕಾರಿ ಕಂದಾಯ ಜಾಗ, ಪುರಸಭೆ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರೆ ಅಂತಹ ಕಟ್ಟಡಗಳಿಗೆ ಬಿ ಖಾತಾ ನೀಡುವುದಿಲ್ಲ ಎಂದರು.ಪುರಸಭೆ ಹಿರಿಯ ಸದಸ್ಯ ಎಂ.ವಿ. ಅಂಜಿನಪ್ಪ ಮಾತನಾಡಿ, ಹಲವು ವರ್ಷಗಳಿಂದ ಸರ್ಕಾರಿ ಕಂದಾಯ ಜಾಗದಲ್ಲಿ ಮನೆಕಟ್ಟಿಕೊಂಡು ಜೀವನ ನಡೆಸುತ್ತಿರುವ ಬಡವರಿಗೆ ಮನೆಯ ಹಕ್ಕುಪತ್ರ ನೀಡಿ ಪುರಸಭೆಯಿಂದ ಬಿ ಖಾತಾ ನೀಡುವಂತೆ ಕೋರಿದರು. ಆಗ ಮುಖ್ಯಾಧಿಕಾರಿ ಶಿವಕುಮಾರ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸದಸ್ಯ ಜಾಕೀರ ಹುಸೇನ್ ಮಾತನಾಡಿ, ಖಾಲಿ ನಿವೇಶನಗಳಿಗೆ ಪುರಸಭೆಯಿಂದ ಬಿ ಖಾತಾ ನೀಡಿದರೆ ಅವರು ಮುಂದೆ ಮನೆ ಕಟ್ಟಿಕೊಳ್ಳಲು ಪರಾವನಿಗೆ ಯಾಕೆ ನೀಡುವುದಿಲ್ಲ ಎಂದು ಪ್ರಶ್ನಿಸಿದರು. ಬಿ ಖಾತಾ ನೀಡುವಾಗ ಆರ್‌ಟಿಸಿ ಪರಿಶೀಲಿಸಿ ಖಾತಾ ನೀಡಿ ಎಂದು ಸದಸ್ಯ ಭರತೇಶ ಹೇಳಿದರು.ಸದಸ್ಯ ಗಣೇಶ ಮಾತನಾಡಿ, ತಮ್ಮ ಜಮೀನಲ್ಲಿ ಮನೆಕಟ್ಟಿಕೊಂಡು ಜೀವ ನಡೆಸುತ್ತಿರುವ ಪಟ್ಟಣದ ನಿವಾಸಿಗಳಿಗೂ ಬಿ ಖಾತಾ ನೀಡಿ ಎಂದರು.
ಸದಸ್ಯ ಮಂಜುನಾಥ ಇಜಂಕರ್ ಮಾತನಾಡಿ, ಪಟ್ಟಣದ ವ್ಯಾಪ್ತಿಯಲ್ಲಿರುವ ಆಶ್ರಯ ಕಾಲನಿ ನಿವಾಸಿಗಳಿಗೆ ಪುರಸಭೆಯಿಂದ ಬಿಖಾತಾ ನೀಡಿ ಎಂದು ಒತ್ತಾಯಿಸಿದರು. ಆಗ ಮುಖ್ಯಾಧಿಕಾರಿಗಳು ಆಶ್ರಯ ಕಾಲನಿಗಳು ಪುರಸಭೆ ಅಡಿಯಲ್ಲಿ ಬರುವುದಿಲ್ಲ ಎಂದರು.ಪುರಸಭೆಯಿಂದ ಬಿ ಖಾತಾ ಮಾಡಿಸಿಕೊಡುವುದಾಗಿ ನಂಬಿಸಿ ಜನರಿಗೆ ತಪ್ಪು ಮಾಹಿತಿ ನೀಡಿ ಹಣ ದೋಚುವ ಮಧ್ಯವರ್ತಿಗಳಿಗೆ ಕಡಿವಾಣ ಹಾಕಬೇಕೆಂದು ಸದಸ್ಯರು ಆಗ್ರಹಿಸಿದರು.
ಪುರಸಭೆ ಅಧ್ಯಕ್ಷೆ ಪಾತೀಮಾಬೀ, ಉಪಾಧ್ಯಕ್ಷ ಎಚ್.ಕೊಟ್ರೇಶ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ, ಸದಸ್ಯರಾದ ಅಬ್ದುಲ್ ರೆಹಮಾನ್, ಲಾಟಿ ದಾದಪೀರ್, ಜಾವೀದ್, ವಿನಯ್, ವಸಂತಪ್ಪ, ಗುಡಿ ನಾಗರಾಜ ಸೇರಿದಂತೆ ಸಿಬ್ಬಂದಿ ಇದ್ದರು.