ಸಾರಾಂಶ
ಬಂಟ್ವಾಳ: ಮಂಗಳವಾರ ರಾತ್ರಿ ಬಿ.ಸಿ.ರೋಡಿನಲ್ಲಿ ಬೀಸಿದ ಬಿರುಗಾಳಿಯಿಂದಾಗಿ ಲಕ್ಷಾಂತ ರುಪಾಯಿ ನಷ್ಟ ಸಂಭವಿಸಿದೆ. ಬಿ.ಸಿ. ರೋಡ್ ಪೃಥ್ವಿ ನರ್ಸಿಂಗ್ ಹೋಂಗೆ ತೆರಳುವ ಮಾರ್ಗದಲ್ಲಿ 2, ಸರ್ಕಲ್ ಬಳಿ 3 ಒಟ್ಟು 5 ವಿದ್ಯುತ್ ಕಂಬಗಳು ಉರುಳಿವೆ. ಘಟನೆಯಿಂದ ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ.
ದಿಢೀರನೆ ನಡೆದ ಘಟನೆಯಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುವ ವಾಹನಗಳಿಗೆ ಅಡಚಣೆ ಉಂಟಾಯಿತು. ಬಿ.ಸಿ.ರೋಡ್ ಟ್ಯಾಕ್ಸಿ ನಿಲ್ಲುವ ಜಾಗದಲ್ಲಿ ಪೊಲೀಸ್ ಸ್ಟೇಶನ್‌ಗೆ ತೆರಳುವ ಮಾರ್ಗ ಎಂಬ ನಾಮಫಲಕ ಗಾಳಿಗೆ ನೆಲಕಚ್ಚಿದ್ದು, ಮುಂದಕ್ಕೆ ಹಿಂದಿನ ಬಿಡಿಒ ಕಚೇರಿ ಇದ್ದ ಜಾಗದಲ್ಲಿ ನಿಲುಗಡೆಯಾಗಿರುವ ಮಾರುತಿ ಝೆನ್ ಕಾರಿನ ಮೇಲೆ ಮರದ ಗೆಲ್ಲುಗಳು ಕವುಚಿ ಬಿದ್ದಿವೆ. ಘಟನೆ ನಡೆದ ಕೂಡಲೇ ಕಂದಾಯ, ಅಗ್ನಿಶಾಮಕ, ಮೆಸ್ಕಾಂ ಸಹಿತ ವಿವಿಧ ಇಲಾಖಾಧಿಕಾರಿಗಳು, ಸಾರ್ವಜನಿಕರು ಸೇರಿ ತತ್ ಕ್ಷಣದ ಕ್ರಮಗಳನ್ನು ಕೈಗೊಂಡರು. ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಬಂಟ್ವಾಳ ಪೊಲೀಸ್ ಸಿಬಂದಿ ಸಾರ್ವಜನಿಕರ ಸಹಾಯದಿಂದ ನಿಯಂತ್ರಣಕ್ಕೆ ತಂದರು.ರಸ್ತೆ ಬದಿಯಲ್ಲಿ ಅಪಾಯಕಾರಿಯಾಗಿ ಬ್ಯಾನರ್ ಅಳವಡಿಕೆಗೆ ಇಲಾಖೆ ಅವಕಾಶ ಕಲ್ಪಿಸಿದ ಪರಿಣಾಮವಾಗಿ ಮಂಗಳವಾರ ರಾತ್ರಿ ಗಾಳಿಗೆ ಸರ್ಕಲ್ ಬಳಿ ಹಾಕಲಾಗಿರುವ ಅನೇಕ ಬ್ಯಾನರ್ ಗಳು ರಸ್ತೆಗೆ ಉರುಳಿಬಿದ್ದಿವೆ. ಲಾರಿಯೊಂದಕ್ಕೆ ಹಾನಿಯಾಗಿದೆ. ಮೆಸ್ಕಾಂ ನಿಂದ ಕ್ಷಿಪ್ರ ಕಾರ್ಯಾಚರಣೆ: ದೊಡ್ಡಪ್ರಮಾಣದಲ್ಲಿ ಅನಾಹುತಗಳು ನಡೆದ ಪರಿಣಾಮ ತುರ್ತಾಗಿ ರಿಪೇರಿ ಸಾಧ್ಯವಾಗಿಲ್ಲ. ರಾತ್ರಿಯಿಂದಲೇ ಮೆಸ್ಕಾಂ ಇಲಾಖೆ ಸರಿಪಡಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದು,ಇವರ ಜೊತೆ ಖಾಸಗಿ ಕಂಪನಿಯನ್ನು ಕರೆಸಿಕೊಂಡು ಕಾಮಗಾರಿಗೆ ಚುರುಕು ನೀಡಿದ್ದೇವೆ. ಇಂದು ಸಂಜೆಯೊಳಗೆ ಮುರಿದ ಎಲ್ಲ ಕಂಬಗಳ ಬದಲಾಗಿ ಬೇರೆ ಕಂಬಗಳನ್ನು ಅಳವಡಿಸಿ ವಿದ್ಯುತ್ ತಂತಿಗಳನ್ನು ಹಾಕಿ ಸರಿಪಡಿಸಿ ಜನರಿಗೆ ತೊಂದರೆಯಾಗದಂತೆ ಕರೆಂಟ್ ನೀಡುತ್ತೇವೆ ಎಂದು ಇಲಾಖೆಯ ನಾರಾಯಣ ಭಟ್ ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಬಂಟ್ವಾಳ: ಮಂಗಳವಾರ ರಾತ್ರಿ ಬೀಸಿದ ಗಾಳಿ ಮತ್ತು ಮಳೆಗೆ ಬಂಟ್ವಾಳ ತಾಲೂಕಿನ ಅನೇಕ ಕಡೆಗಳಲ್ಲಿ ಹಾನಿಯಾದ ಬಗ್ಗೆ ವರದಿಯಾದರೆ, ಇಲ್ಲಿನ ಪೋಲೀಸ್ ಉಪವಿಭಾಗದ ಕಚೇರಿಯ ಮಾಡಿನ ಮೇಲೆ ತೆಂಗಿನ ಮರ ಬಿದ್ದು ಅಪಾರನಷ್ಟವುಂಟಾದ ಘಟನೆ ಬಗ್ಗೆ ತಡವಾಗಿ ಮಾಹಿತಿ ಲಭ್ಯವಾಗಿದೆ.ಡಿ.ವೈ.ಎಸ್.ಪಿ ವಿಜಯಪ್ರಸಾದ್ ಅವರು ಕುಳಿತುಕೊಳ್ಳುವ ಕೊಠಡಿ ಮೇಲೆ ಕಚೇರಿಯ ಅಂಗಳದಲ್ಲಿದ್ದ ಹಳೆಯ ತೆಂಗಿನ ಮರ ಬಿದ್ದು ಹಂಚು ಹುಡಿಯಾಗಿದೆ. ಕಚೇರಿಯ ಒಳಗೆ ಮರದಲ್ಲಿದ್ದ ಸೀಯಾಳ ಮತ್ತು ತೆಂಗಿನಕಾಯಿ ಹಾಗೂ ಹಂಚುಗಳು ಹುಡಿಯಾಗಿ ಬಿದ್ದಿವೆ. ರಾತ್ರಿ ಸುಮಾರು 9.30 ರ ವೇಳೆಗೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಡಿ.ವೈ.ಎಸ್.ಪಿ.ಯವರು ಕಚೇರಿಯೊಳಗೆ ಇಲ್ಲದೆ ಇದ್ದರಿಂದ ಅಪಾಯ ತಪ್ಪಿದೆ. ಅವರು ಕೆಲವೇ ಕ್ಷಣದ ಹಿಂದೆ ಕಚೇರಿಯಿಂದ ಹೊರಟು ಹೋಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಹೇಳಲಾಗುತ್ತಿದೆ. ಇದೀಗ ಡಿ.ವೈ.ಎಸ್.ಪಿ.ಕಚೇರಿಯ ರಿಪೇರಿ ಕಾರ್ಯ ಭರದಿಂದ ಸಾಗುತ್ತಿದೆ