ಬಿ.ಡಿ ರಸ್ತೆ ಅಗಲದ ಮಾಹಿತಿ ಹುಡುಕಿದ್ರೂ ಸಿಕ್ತಿಲ್ಲ

| Published : Jan 03 2025, 12:32 AM IST

ಬಿ.ಡಿ ರಸ್ತೆ ಅಗಲದ ಮಾಹಿತಿ ಹುಡುಕಿದ್ರೂ ಸಿಕ್ತಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆಗಳ ಅಗಲ ಎಷ್ಟಿರಬೇಕು ಎಂಬುದಕ್ಕೆ ರಾಜ್ಯ ಸರ್ಕಾರ ಮೇ-9-1988 ರಲ್ಲಿ ಹೊರಡಿಸಿರುವ ಸುತ್ತೋಲೆ

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ನಗರವ ಸೀಳಿ ಹೋಗಿರುವ ಬಿ.ಡಿ. ರಸ್ತೆಯ ಮಾಹಿತಿ ಎಲ್ಲಿದೆಯೋ, ಹೇಗಿದೆಯೋ, ಯಾವ ಪರಿಸ್ಥಿತಿಯಲ್ಲಿದೆಯೋ ಎಂಬ ಆತಂಕದ ಹುಡುಕಾಟಗಳು ಈಗ ಶುರುವಾಗಿವೆ. ನಗರದ ರಸ್ತೆಯ ಎರಡೂ ಬದಿಯಲ್ಲಿ 21 ಮೀಟರ್ ಗಳಿಗೆ ಅಗಲೀಕರಣ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಸಭೆ ಪರ್ಮಾನು ಹೊರಡಿಸಿದ ನಂತರ ಹಳೇ ಕಡತಗಳ ತಲಾಶ್ ಮಾಡುವ ಕೆಲಸ ಆರಂಭವಾಗಿದ್ದು ಮೂಲ ದಾಖಲಾತಿಗಳು ಲಭ್ಯವಾಗಿಲ್ಲ. ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ಕಚೇರಿಗಳಲ್ಲಿ ಏನಾದರೂ ಸಿಗಬಹುದೇ ಎಂದು ದುರ್ಬೀನು ಹಾಕಲಾಗಿದೆ.

ಚಿತ್ರದುರ್ಗ ನಗರ ಐತಿಹಾಸಿಕ ಹಿನ್ನಲೆ ಹೊಂದಿದ್ದು ಸ್ವಾತಂತ್ರ ಪೂರ್ವದಲ್ಲಿ ಇಲ್ಲಿನ ರಸ್ತೆಗಳ ಮೇಲೆ ಬ್ರೀಟೀಷರ ವಾಹನಗಳು, ಎತ್ತಿನ ಗಾಡಿ, ಜಟಕಾ ಬಂಡಿ ಓಡಾಡಿವೆ. 50 ವರ್ಷಗಳ ಹಿಂದೆ ಬಿ.ಡಿ ರಸ್ತೆ ಎರಡೂ ಬದಿಯಲ್ಲಿ ಹುಣಿಸೆ ಮರಗಳಿದ್ದವು. ಲೋಕೋಪಯೋಗಿ ಇಲಾಖೆ ಈ ಹುಣಿಸೆ ಮರಗಳ ಹರಾಜು ಹಾಕಿ ಅದರಿಂದ ಆದಾಯ ಪಡೆಯುತ್ತಿತ್ತು. ಭೀಮಪ್ಪ ನಾಯಕರು ಅಂದಿನ ಪುರಸಭೆ ಅಧ್ಯಕ್ಷರಾಗಿದ್ದಾಗ (12-9-1948 ರಿಂದ 12-5-49 ರವರೆಗೆ) ಬಿ.ಡಿ ರಸ್ತೆಯನ್ನು ಅಂದೇ ಸಿಮೆಂಟ್ ಕಾಂಕ್ರಿಟ್ ರಸ್ತೆಯನ್ನಾಗಿ ಮಾಡಿದ್ದರು. ರಸ್ತೆ ಕ್ಯೂರಿಂಗ್ ಮಾಡಲು ನಿಲ್ಲಿಸಿದ ನೀರಿನಲ್ಲಿ ನಾವುಗಳು ಬರಿಗಾಲಲ್ಲಿ ಓಡಾಡುತ್ತಾ ಸಂಭ್ರಮಿಸಿದ್ದವೆಂದು ಹಳೇ ತಲೆಮಾರಿನವರು ನೆನಪು ಮಾಡಿಕೊಳ್ಳುತ್ತಾರೆ. ಸಾಲು ಹುಣಿಸೆ ಮರಗಳ ನಡುವಿನ ರಸ್ತೆಯೇ ಅಂದು ವಾಹನ, ಎತ್ತಿನ ಗಾಡಿಗಳಿಗೆ ರಹದಾರಿಯಾಗಿತ್ತು.

ನಂತರದ ಬೆಳವಣಿಗೆಯಲ್ಲಿ ಸಾಲುಮರಗಳ ಕಡಿದು ವಿಶಾಲವಾದ ರಸ್ತೆ ಮಾಡಲಾಗಿದೆ. ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆ ಹೆಚ್ಚಾದಂತೆ ರಸ್ತೆ ವಿಸ್ತಾರವಾಗುತ್ತಾ ಸಾಗಿದೆ. ಆದರೆ ರಸ್ತೆ ಮೂಲದಲ್ಲಿ ಎಷ್ಟಿತ್ತು, ಜಿಲ್ಲಾ ಮುಖ್ಯ ರಸ್ತೆಯಾದಾಗ ಅದರ ಅಳತೆ ಎಷ್ಟಾಯಿತು, ನಂತರ ಪಿಡಬ್ಲ್ಯೂಡಿ ರಸ್ತೆಯಾದಾಗ, ತರುವಾಯ ರಾಷ್ಟ್ರೀಯ ಹೆದ್ದಾರಿ ಆದಾಗ ಅಗಲದ ಚಕ್ಕು ಬಂದಿ ಎಷ್ಟು ಅಡಿಗೆ ವಿಸ್ತಾರವಾಯಿತು ಎಂಬಿತ್ಯಾದಿ ಮಾಹಿತಿಗಳು ನಿಖರವಾಗಿ ಲಭ್ಯವಾಗುತ್ತಿಲ್ಲ. ಆದರೂ ಇದುವರೆಗೂ ಮೂರು ಬಾರಿ ರಸ್ತೆ ಅಗಲೀಕರಣವಾಗಿದ್ದು, ಯಾವ ಆಧಾರದ ಮೇಲೆ ಮಾಡಲಾಯಿತು ಎಂಬುದಕ್ಕೆ ಸಣ್ಣ ಚೀಟಿಯೂ ಸಿಗ್ತಿಲ್ಲ.

ಏತನ್ಮದ್ಯೆ ಮೇ,9, 1988 ರಲ್ಲಿ ಸುತ್ತೋಲೆಯೊಂದನ್ನು ಹೊರಡಿಸಿದ ರಾಜ್ಯ ಸರ್ಕಾರ ಮೂರು ಮಾದರಿಯ ರಸ್ತೆಗಳ ಅಗಲ ಎಷ್ಟಿರಬೇಕೆಂದು ಸೂಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು, ಒತ್ತುವರಿಯಾಗಿದ್ದರೆ ಕಾನೂನಾತ್ಮಕವಾಗಿ ತೆರವುಗೊಳಿಸಬೇಕೆಂದು ಸೂಚಿಸಿತ್ತು. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳು ರಸ್ತೆ ಮಧ್ಯ ಭಾಗದಿಂದ 40 ಮೀಟರ್ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳು ಮಧ್ಯ ಭಾಗದಿಂದ 25 ಮೀಟರ್ ಇರಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಜಿಲ್ಲಾಡಳಿತ, ನಗರ ಸ್ಥಳೀಯ ಸಂಸ್ಥೆಗಳು ಕಡ್ಟಾಯ ಪಾಲನೆಗೆ ಸೂಚಿಸಲಾಗಿತ್ತು.

ಸರ್ಕಾರದ ಸುತ್ತೋಲೆ ಪಾಲನೆ ಮಾಡಲಾಯಿತೇ, ರಸ್ತೆಗಳು ಅಗಲವಾದವೇ, ಯಾವ ಮಾನಂದಂಡ ಅನುಸರಿಸಲಾಯಿತು ಎಂಬಿತ್ಯಾದಿ ದಾಖಲೆಗಳು ಲಭ್ಯವಾಗಿಲ್ಲ. ಚಿತ್ರದುರ್ಗದ ಹೃದಯ ಭಾಗದಲ್ಲಿರುವ ಮದಕರಿ ನಾಯಕ ಕಂಚಿನ ಪ್ರತಿಮೆ ಸಮೀಪದ ದೀಪಕ್ ಬುಕ್ ಹೌಸ್ ಕಟ್ಟಡದ ದಾಖಲಾತಿಗಳು, ನಿವೇಶನ, ಕಟ್ಟಡ ನಿರ್ಮಾಣದ ವ್ಯಾಪ್ತಿಯಲ್ಲಿಯೇ ಇವೆ. ಇದು ಪಕ್ಕಾ ಖಾಸಗಿ ಆಸ್ತಿಯಾಗಿದೆ. ಕಾಲ ಕಾಲಕ್ಕೆ ಕಂದಾಯ ಕಟ್ಟಿಕೊಂಡು ಬರಲಾಗಿದೆ. ಈಗ 21 ಮೀಟರ್ ರಸ್ತೆ ನಿರ್ಮಾಣಕ್ಕೆ ಮುಂದಾದರೆ ಇಡೀ ಕಟ್ಟಡದ ಮುಕ್ಕಾಲು ಭಾಗ ನೆಲಸಮ ಮಾಡಬೇಕಾಗುತ್ತದೆ. ಪರಿಹಾರ ಕೊಡುವ ಅನಿವಾರ್ಯತೆ ಎದುರಾಗಬಹುದು.

ಅಂಬೇಡ್ಕರ್ ಪ್ರತಿಮೆ ಬಳಿ ಇರುವ ಸ್ಕೌಟ್ಸ್ ಕಟ್ಟಡ ಈ ಮೊದಲು ಪ್ರಾದೇಶಿಕ ಸಾರಿಗೆ ಕಚೇರಿಯಾಗಿತ್ತು. ಹೊಸ ಕಟ್ಟಡಕ್ಕೆ ಸ್ಥಳಾಂತರವಾದ ತರುವಾಯ ಇಲ್ಲಿ ಬೇರೆಯದೇ ಕಮರ್ಷಿಯಲ್ ಚಟುವಟಿಕೆ ನಡೆದಿವೆ. ಇತ್ತೀಚೆಗಷ್ಟೇ ದೊಡ್ಡ ಹೋಟೆಲ್ ಪ್ರಸಾದಮ್ ನಿರ್ಮಾಣದ ಕಾಮಗಾರಿ ನಡೆದಿದೆ. ನಗರಸಭೆಯಿಂದ ಅನುಮತಿ ಪಡೆದು ಹೋಟೆಲ್ ನಿರ್ಮಿಸಲಾಗುತ್ತಿದೆ. 21 ಮೀಟರ್ ರಸ್ತೆ ಅಗಲೀಕರಣವಾದಲ್ಲಿ ಇಡೀ ಕಟ್ಟಡ ನೆಲಸಮವಾಗುತ್ತದೆ. ಅಗಲೀಕರಣ ಪ್ರಕ್ರಿಯೆಗೆ ಈ ತರಹದ ಆನೇಕ ತೊಡಕುಗಳಿವೆ. ಡಾಂಕ್ಯುಮೆಂಟ್ ಕಾಲ್ ಮಾಡಿದ ನಂತರ ಒಂದೊಂದಾಗಿ ಮಾಹಿತಿಗಳು ಹೊರ ಬರಲಿವೆ.