ಹಿರೇಕೆರೂರು: ನಾವು ಮಾಡುವ ಸತ್ಕಾರ್ಯಗಳು, ನಮ್ಮ ನಡೆ ನುಡಿ ಒಂದೇ ಆದಾಗ ಮಾತ್ರ ಜನಮಾನಸದಲ್ಲಿ ಉಳಿಯಲು ಸಾಧ್ಯವಾಗುತ್ತದೆ. ನಡೆ ನುಡಿಗಳಲ್ಲಿ ಒಂದೇ ಆಗಿದ್ದ, ಮೌಲ್ಯಾಧಾರಿತ ರಾಜಕಾರಣಿ ದಿ| ಬಿ.ಜಿ.ಬಣಕಾರ ಅವರ ಆದರ್ಶಗಳು ಅನುಕರಣೀಯವಾಗಿವೆ ಎಂದು ನಾಗವಂದ ಹೊರಗಿನಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ ಹೇಳಿದರು.

ದಿ| ಬಿ.ಜಿ.ಬಣಕಾರ ಅವರ ಜನ್ಮ ಶತಮಾನೋತ್ಸವ ಆಚರಣೆ ನಿಮಿತ್ತ ತಾಲೂಕಿನ ನೂಲಗೇರಿ ಗ್ರಾಮದ ಪಬ್ಲಿಕ್ ಸ್ಕೂಲ್ ಆವರಣದಲ್ಲಿ 100 ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಿ.ಜಿ.ಬಣಕಾರ ಅವರ ಜನ್ಮಶತಮಾನೋತ್ಸವನ್ನು ಅರ್ಥಪೂರ್ಣವಾಗಿ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಅವರ ಆದರ್ಶಗಳನ್ನು ಯುವಜನತೆಗೆ ತಿಳಿಸುವ ಕಾರ್ಯಮಾಡುತ್ತಿರುವುದು ಅತೀ ಉಪಯುಕ್ತವಾಗಿದೆ. ಕಾರ್ಯಕ್ರಮದ ಪ್ರಾರಂಭವನ್ನು ಪರಿಸರ ಸಂರಕ್ಷಣೆಗೆ ಆಧ್ಯತೆ ನೀಡುವ ಕಾರ್ಯ ಮಾಡಿದ್ದು ಅತೀ ಶ್ಲಾಘನೀಯ ಕಾರ್ಯವಾಗಿದೆ. ಪ್ರತಿಯೊಬ್ಬರು ಪರಿಸರ ರಕ್ಷಣೆ ಮಾಡಬೇಕು. ಸಸಿಗಳನ್ನು ನೆಟ್ಟು ಅವುಗಳನ್ನು ಪಾಲನೆ ಪೋಷಣೆ ಮಾಡಿ ನಾಡಿಗೆ ಉತ್ತಮ ಆರೋಗ್ಯ ನೀಡುವ ಕಾರ್ಯ ಮಾಡಬೇಕು ಎಂದರು.

ಶಾಸಕ ಯು.ಬಿ.ಬಣಕಾರ ಮಾತನಾಡಿ, ಬಿ.ಜಿ.ಬಣಕಾರ ಅವರ ಜನ್ಮಶತಮಾನೋತ್ಸವನ್ನು ವನಮಹೋತ್ಸವ ಆಚರಣೆ ಮಾಡುವ ಮೂಲಕ ಚಾಲನೆ ನೀಡಿ ಆಚರಣೆಯನ್ನು ಸಾರ್ಥಕಗೊಳಿಸುವ ಕಾರ್ಯ ಮಾಡಲಾಗುತ್ತಿದೆ. ಅನೇಕ ಹಿರಿಯರು ಅಭಿಮಾನಿಗಳ ಸೇರಿಕೊಂಡು ಬಿ.ಜಿ.ಬಣಕಾರ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಅಪರೂಪ ಹಾಗೂ ಉಪಯುಕ್ತ ಕಾರ್ಯಕ್ರಮ ಮಾಡಬೇಕು ಎಂಬ ಎಲ್ಲರ ಅಪೇಕ್ಷೆ ಮೇರೆಗೆ ಇಂದಿನಿಂದ ಇಡೀ ವರ್ಷ ಈ ಕಾರ್ಯಕ್ರಮ ಚಾಲನೆಗೊಂಡಿದೆ. ನಮ್ಮ ತಂದೆ ಬಿ.ಜಿ.ಬಣಕಾರ ಅವರ ಇಡೀ ಬದುಕು ಕಲಿಯುವಂತಹ ಬದುಕು, ನನ್ನ ರಾಜಕೀಯ ಬದುಕಿನಲ್ಲಿ ಪ್ರತಿದಿನ ಎಚ್ಚರಿಕೆ ನೀಡುವ ಕಾರ್ಯ ಮಾಡುತ್ತಿರುವುದು ಅವರ ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ. ರಾಜಕಾರಣದಲ್ಲಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಎಲ್ಲ ರಂಗಗಳಲ್ಲಿ ಸೇವೆ ಮಾಡಿದ್ದಾರೆ. ಅವರ ಸೇವೆ ಮಾಡಿದ ವಿವಿಧ ಕ್ಷೇತ್ರಗಳ ನೀಡಿದ ಕೂಡುಗೆಗಳನ್ನು ಸ್ಮರಿಸುವ ಮೂಲಕ 12 ಕಡೆಗಳಲ್ಲಿ ಜನ್ಮಶತಮಾನೋತ್ಸವ ಕಾರ್ಯಕ್ರಮ ನಡೆಸಲಾಗುವುದು 2027 ಜುಲೈ 22 ಕೊನೆಯ ಕಾರ್ಯಕ್ರಮವನ್ನು ಆಯೋಜಿಸಿ ರಾಜ್ಯ ಮಟ್ಟದ ನಾಯಕರನ್ನು ಆಹ್ವಾನಿಸಿ ಸಮಾರೋಪ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಉಪನ್ಯಾಸ ನೀಡಿದ ಸಾಹಿತಿ ಡಾ|ನಿಂಗಪ್ಪ ಚಳಗೇರಿ, ಮೌಲ್ಯಾಧಾರಿತ ರಾಜಕಾರಣಕ್ಕೆ ಬಿ.ಜಿ.ಬಣಕಾರ ಹೆಸರು ವಾಸಿಯಾಗಿದ್ದಾರೆ. 92 ವರ್ಷಗಳ ಜನಸೇವೆ ಮಾಡಿದ ಅವರು ನಿಷ್ಠೆ, ಶ್ರದ್ಧೆ ಪ್ರಾಮಾಣಿಕತೆಯ ಪ್ರತಿರೂಪ ಆಗಿದ್ದಾರೆ. 12 ಆಯಾಮಗಳಲ್ಲಿ ಕೆಲಸ ಮಾಡಿದ ಅವರ ನಡೆ ನುಡಿ ಬರಹ ಒಂದೇ ಆಗಿದ್ದು ಅವರ ಆದರ್ಶಗಳು ಅನುಕರಣೆ ಮಾಡುವ ಮೂಲಕ ಪ್ರತಿ ರಂಗದಲ್ಲಿ ಯಶಸ್ಸು ಕಾಣಬೇಕು ಎಂದರು.


ಪ್ರಾಚಾರ್ಯ ಡಾ|ಎಸ್.ಪಿ.ಗೌಡರ ಮಾತನಾಡಿ, ಬಿ.ಜಿ.ಬಣಕಾರ ಜನ್ಮ ಶತಮಾನೋತ್ಸವ ಆಚರಣೆಯು ಅವರ ಸಿದ್ಧಾಂತಗಳನ್ನು ನೆನೆಯುವ ಮತ್ತು ಸಹಕಾರ, ರಾಜಕೀಯ, ಬರಹಗಾರ ಸೇರಿ ವಿವಿಧ ಕ್ಷೇತ್ರಗಳಲ್ಲಿ ಅವರ ಕಾರ್ಯವಾಗಿದೆ. ಮಾನಸಿಕ ದೈಹಿಕ ಆರೋಗ್ಯ ಸದೃಢ ಆಗಿದ್ದ ಅವರು, ಹಮ್ಮು ಬಿಮ್ಮು ಇಲ್ಲದ ಸರಳ ವ್ಯಕ್ತಿ, ಸಮಯ ಪ್ರಜ್ಞೆ, ಶಿಸ್ತು, ಅವರ ಅಂಕಿ ಸಂಖ್ಯೆ ಕಲ್ಪನೆ ಅವರಲ್ಲಿ ಬಹು ಮುಖ್ಯವಾಗಿತ್ತು. ಅವರ ಬದುಕಿನ ಸೂಕ್ಷ್ಮತೆಯನ್ನು ಇಡೀ ವರ್ಷ ಅವರ ನೆನದು ಯುವ ಜನತೆಗೆ ಪರಿಚಯಿಸುವ ಕಾರ್ಯವಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ 100 ಸಸಿಗಳನ್ನು ನಡೆಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.

ಜನ್ಮ ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ, ಟಿಎಪಿಎಂಎಸ್ ಅಧ್ಯಕ್ಷ ಎಸ್.ಎಸ್.ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಶಿಕ್ಷಕ ಎಂ.ಎಂ.ಹುಲ್ಮನಿ ಅಧ್ಯಕ್ಷತೆ ವಹಿಸಿದ್ದರು.

ಕೆಸಿಸಿ ಬ್ಯಾಂಕ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ, ಮಲ್ಲಿಕಾರ್ಜುನ ಬುರಡೀಕಟ್ಟಿ, ನಾರಾಯಣ ಗೌರಕ್ಕನವರ, ಹೇಮಣ್ಣ ಮುದರಡ್ಡೇರ, ವಸಂತ ದ್ಯಾವಕ್ಕಳವರ, ಸುರೇಶ ಮಡಿವಾಳರ, ರಮೇಶ ಮಡಿವಾಳರ, ಶಿವರಾಜ ಹರಿಜನ, ಮಹೇಶ ಗುಬ್ಬಿ, ಎಸ್.ವೀರಭದ್ರಯ್ಯ, ಸುರೇಶ ಮಡಿವಾಳರ, ಮಲಪ್ಪ ಚಲವಾದಿ, ದತ್ತಾತ್ರೇಯ ರಾಯ್ಕರ, ಆರ್.ಎಸ್.ಹುಲ್ಮನಿ, ಗಂಗಣ್ಣ ಕೋರಿ, ಮಹಾದೇಪ್ಪ ವೀರಾಪುರ, ಸೋಮಶೇಖರ ಪುರದ, ಎನ್. ಶ್ರೀಧರ, ಎಚ್.ಎಚ್.ಜಾಡರ, ಕಂಠಾಧರ ಅಂಗಡಿ, ಬಿ.ಆರ್.ತೆವರಿ, ನಾಗರಾಜ ಪುರದ, ವಿ.ಎಚ್.ಕೋರಿ, ಬಸವರಾಜ ಚಲವಾದಿ, ಸುಭಾಸ ಹೆಡಿಯಾಲ, ಸಿದ್ಧಲಿಂಗಯ್ಯ ಹಿರೇಮಠ ಇತರರಿದ್ದರು.